More

    ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ ಜಾಗ; ಮನಬಂದಂತೆ ಅಂಗಡಿ ಹಾಕುವುದಕ್ಕೆ ಬ್ರೇಕ್

    ಸಾಗರ: ನಗರಸಭೆ ಬಜೆಟ್‌ಗೆ ಸಂಬಂಧಪಟ್ಟಂತೆ ಸಾರ್ವಜನಿಕರು, ಸ್ಥಳೀಯ ಸಂಸ್ಥೆಗಳು ಮತ್ತು ನಗರಸಭೆ ಸದಸ್ಯರ ಜತೆ ಸಭೆ ನಡೆಸಿ ಅವರಿಂದ ಸಲಹೆ ಪಡೆದು ಚರ್ಚಿಸಿದ್ದೇವೆ. ಶೀಘ್ರ ಬಜೆಟ್ ಮಂಡಿಸಲಾಗುವುದು ಎಂದು ಉಪವಿಭಾಗಾಧಿಕಾರಿಯೂ ಆದ ನಗರಸಭೆಯ ಆಡಳಿತಾಧಿಕಾರಿ ಆರ್.ಯತೀಶ್ ಹೇಳಿದರು.

    ನಗರಸಭೆ ಕಚೇರಿಯಲ್ಲಿ ನಗರಸಭೆ ಸದಸ್ಯರ ಜತೆ ಗುರುವಾರ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಹಳ ಮುಖ್ಯವಾಗಿ ಬೀದಿದೀಪ ನಿರ್ವಹಣೆ, ಕುಡಿಯುವ ನೀರು, ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ ನಗರದಲ್ಲಿ ಮನಬಂದಂತೆ ರಸ್ತೆಬದಿಗಳಲ್ಲಿ ಅಂಗಡಿಗಳನ್ನು ಹಾಕಲಾಗುತ್ತಿದ್ದು, ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥಿತವಾದ ಜಾಗ ಮತ್ತು ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯರು ಸಲಹೆ ನೀಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಬಜೆಟ್ ಮಂಡಿಸಲಾಗುವುದು ಎಂದರು.
    ನಗರಸಭೆ ಸದಸ್ಯ ತುಕಾರಾಮ್ ಮಾತನಾಡಿ, ಸಾಗರದಲ್ಲಿ ದಿನೇದಿನೆ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈಚೆಗೆ ಜಾನುವಾರು ಒಂದಕ್ಕೆ ಹುಚ್ಚು ಹಿಡಿದು ಅದನ್ನು ಸಾಗಿಸುವಷ್ಟರಲ್ಲಿ ಹರಸಾಹಸಪಡಬೇಕಾಯಿತು. ಅಂತಹ ದನಗಳನ್ನು ಹಿಡಿಯಲು ಬಲೆಗಳು ಬರುತ್ತವೆ, ಅವುಗಳನ್ನು ಬಳಸಿ. ಬೀಡಾಡಿ ದನಗಳಿಗೆ ಸಮಸ್ಯೆ ಉಂಟಾದರೆ ಚಿಕಿತ್ಸೆಗೆ ಒಂದಿಷ್ಟು ಹಣ ತೆಗೆದಿರಿಸಿ. ಊರಿನ ಹೃದಯ ಭಾಗದಲ್ಲಿರುವ ನನ್ನ ವಾರ್ಡ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಒಂದು ಸಾರ್ವಜನಿಕ ಶೌಚಗೃಹ ನಿರ್ಮಾಣವಾಗಬೇಕು. ಶಿವಾಜಿ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡ ದುರಸ್ತಿಗೊಳಗಾಗಿದೆ. ಗೋಪಾಲಗೌಡ ಕ್ರೀಡಾಂಗಣದ ಹಿಂಭಾಗದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಅನುದಾನ ತೆಗೆದಿರಿಸಿದ್ದು ಕೂಡಲೆ ಅಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಸಲಹೆ ನೀಡಿದರು.
    ಜನಸಂಖ್ಯೆಯ ಆಧಾರದ ಮೇಲೆ 700 ಜನರಿಗೆ ಒಬ್ಬ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎನ್ನುವ ನಿಬಂಧನೆಯಿದೆ. ನಮ್ಮ ನಗರಸಭೆಯ ಆದಾಯ 8 ಕೋಟಿ ರೂಪಾಯಿ. ಇದರಲ್ಲಿ ಪೌರಕಾರ್ಮಿಕರ ನೇಮಕಾತಿಗೆ ವಿಶೇಷ ಪ್ಯಾಕೇಜ್ ನಿರ್ಮಿಸಿ, ಸೋಲಾರ್ ಬೀದಿದೀಪ ಅಳವಡಿಕೆ ಮಾಡುವುದು ತುಂಬ ಅವಶ್ಯ, ಆ ಬಗ್ಗೆ ಗಮನಹರಿಸಿ. ಬೀದಿನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತಿದ್ದು ಅದು ಹಂತ ಹಂತವಾಗಿ ವ್ಯವಸ್ಥಿತವಾಗಿ ನಡೆಯಬೇಕು ಎಂದು ಕೋರಿದರು.
    ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಿರಂತರವಾಗಿ ಸಾಗುತ್ತಿದ್ದು ಆಗ್ಗಾಗ್ಗೆ ನೀರಿನ ಪೈಪ್‌ಗಳು ಹಾಳಾಗುತ್ತಿವೆ. ಇದರಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಪೌರಾಯುಕ್ತ ಎಚ್.ಕೆ.ನಾಗಪ್ಪ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಇಂಜಿನಿಯರ್‌ಗಳನ್ನು ಕೂಡಲೆ ಕರೆಸಿ ಮಾತನಾಡುತ್ತೇವೆ. ಬೀದಿಬದಿ ವ್ಯಾಪಾರಿಗಳ ಜತೆ ಸಭೆ ನಡೆಸಿ, ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಕೋರ್ಟ್ ರಸ್ತೆಯಲ್ಲಿರುವ ತರಕಾರಿ ಮತ್ತು ಇತರ ಅಂಗಡಿಗಳನ್ನು ಶೀಘ್ರ ತೆರವು ಮಾಡಲಾಗುವುದು. ತಾಲೂಕು ಕಚೇರಿಗೆ ತಾಗಿಕೊಂಡಂತೆ ನಗರ ಪೊಲೀಸ್ ಠಾಣೆ ನಿರ್ಮಾಣಗೊಳ್ಳಲಿದೆ. ಬೀದಿಬದಿ ದೀಪ ಅಳವಡಿಕೆ ಮಾಡುವ ವಾಹನದ ಸಮಸ್ಯೆಯನ್ನು ಸರಿಪಡಿಸಲಾಗುವುದು. ನಗರಸಭೆಯ ಆದಾಯದ ದೃಷ್ಠಿಯಿಂದಲೂ ಕೆಲವು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
    ಸದಸ್ಯರಾದ ಶಂಕರ್ ಅಳ್ವಕೋಡಿ, ಗಣಪತಿ ಮಂಡಗಳಲೆ, ಮಧುಮಾಲತಿ, ಲಿಂಗರಾಜ್, ಕುಸುಮಾ ಸುಬ್ಬಣ್ಣ, ಉಮೇಶ್, ನಾಜೀರಾ, ಅರವಿಂದ್ ರಾಯ್ಕರ್, ಜಾಕೀರ್ ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts