ಬೆಂಗಳೂರು: ಬಜೆಟ್ ಸಿದ್ಧತೆಗೆ ಪೂರ್ವಭಾವಿಯಾಗಿ ಸರಣಿ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಭಾನುವಾರ ಅಹವಾಲುಗಳ ಮಹಾಪೂರವೇ ಹರಿದು ಬಂದವು.
ವಿಧಾನಸೌಧದಲ್ಲಿ ಬೆಳಗಿನಿಂದ ನಿರಂತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಭೋಜನ ವಿರಾಮದ ಬಳಿಕ ವಿವಿಧ ಸಂಘಟನೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಅವರ ಆಗು-ಹೋಗುಗಳನ್ನು ಆಲಿಸಿದರು, ಬೇಡಿಕೆಗಳನ್ನು ಕೇಳಿದರು.
ವಾಣಿಜ್ಯ ಸಂಘ-ಸಂಸ್ಥೆಗಳು, ಸಾರಿಗೆ ಸಂಘ ಸಂಸ್ಥೆಗಳು, ಅಬಕಾರಿ ಸಂಘ ಸಂಸ್ಥೆಗಳು, ಭೂ ಮಾರುಕಟ್ಟೆ ಸಂಘ ಸಂಸ್ಥೆಗಳು, ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳ ಎದುರು ತಮ್ಮ ಬೇಡಿಕೆಗಳನ್ನು ಅಧ್ಯರ್ಪಣ ಮಾಡಿದರು.
ಕೈಗಾರಿಕೆ ಬೆಳವಣಿಗೆ ಹಾಗೂ ಹೂಡಿಕೆ ಪುನರುಜ್ಜೀವನ, ಬೆಂಗಳೂರು ಹೊರತುಪಡಿಸಿದ ಮೂಲ ಸೌಕರ್ಯ ಅಭಿವೃದ್ಧಿ, ಎಂಎಸ್‌ಎಂಇಗಳ ಅಭಿವೃದ್ಧಿ ಮತ್ತು ಅದರ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ, ಕೈಗಾರಿಕೆ ಮತ್ತು ಸೇವಾ ಚಟುವಟಿಕೆಗಳಿಗೆ ಆಸ್ತಿ ತೆರಿಗೆ ತರ್ಕಬದ್ಧಗೊಳಿಸುವುದು, ರಾಜ್ಯದಲ್ಲಿ ಪ್ರವಾಸಿ ವಲಯ ಉತ್ತೇಜನ, ವಿದ್ಯುತ್ ಸಂಬಂಧಿ ಸಮಸ್ಯೆಗಳು, ಉದ್ಯಮಿಗಳಿಗೆ ವ್ಯಾಪಾರ ಸುಲಭಗೊಳಿಸುವುದು, ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ, ಕೌಶಲ ಅಭಿವೃದ್ಧಿ ಚಟುವಟಿಕೆ, ಉತ್ಪಾದನಾ ವಲಯದಲ್ಲಿ ಉತ್ತಮ ಸಾಧನೆ, ಸಾಲದ ಹರಿವಿನ ಹೆಚ್ಚಳಕ್ಕೆ ಒತ್ತು, ಹಳೆಯ ಕಾನೂನು ರದ್ದುಪಡಿಸುವುದು, ಸೂಕ್ತ ಸಂಪನ್ಮೂಲ ಹಂಚಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಸ್ಯೆಗಳನ್ನು ಕೈಗಾರಿಕೋದ್ಯಮಿಗಳು ಚರ್ಚಿಸಿ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.
ಕಾರ್ಮಿಕ ಸಂಘಟನೆಗಳ ಅಹವಾಲು
ಎಂಟು ಗಂಟೆಗಳ ಕೆಲಸದ ಅವಧಿಯನ್ನು ಹೆಚ್ಚಿಸಿರುವ ಹಿಂದಿನ ಸರ್ಕಾರದ ಆದೇಶವನ್ನು ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು, ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ಕಾನೂನು ರೂಪಿಸಬೇಕು, ಕನಿಷ್ಟ ಕೂಲಿ ಅನುಷ್ಠಾನಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ವ್ಯವಸ್ಥೆ ಜಾರಿಗೆ ತರಬೇಕು, ಅಂಗನವಾಡಿ, ಬಿಸಿ ಊಟ, ಆಶಾ ನೌಕರರಿಗೆ ಕನಿಷ್ಟ ವೇತನ ಜಾರಿ ಮಾಡಬೇಕು, ಈಗಾಗಲೇ ನಿವೃತ್ತರಾಗಿರುವ ಬಿಸಿ ಊಟ ನೌಕರರಿಗೆ ಇಡುಗಂಟು ಹಣ ಕೂಡಲೇ ಜಾರಿಗೊಳಿಸಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ವಿಸ್ತರಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮ ೋಷಿಸಬೇಕು, ಗಿಗ್ ಕಾರ್ಮಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಬೀಡಿ ಕಾರ್ಮಿಕರಿಗೆ ನೆರವು ನೀಡಬೇಕು ಎಂಬುವುವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲಾಯಿತು. ಕಾರ್ಮಿಕ ಸಂಘಟನೆಗಳ ನಾಯಕಿ ಎಸ್.ವರಲಕ್ಷ್ಮಿ ನೇತೃತ್ವದಲ್ಲಿ ಮುಖಂಡರು ಮುಖ್ಯಮಂತ್ರಿಗಳ ಬಳಿ ಬೇಡಿಕೆ ಮಂಡಿಸಿದರು.
ಬಹುಜನ ಸಮಾಜ ಪಕ್ಷ
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 1 ಸಾವಿರ ಕೋಟಿ ರೂ. ಆದಿಜಾಂಬವ ಅಭಿವೃದ್ದಿ ನಿಗಮಕ್ಕೆ 1 ಸಾವಿರ ಕೋಟಿ, ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 500 ಕೋಟಿ, ಭೋವಿ-ಲಂಬಾಣಿ ನಿಗಮಕ್ಕೆ 500 ಕೋಟಿ ರೂ., ಅಲೆಮಾರಿ-ಅರೆದ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಪರಿಶಿಷ್ಟ ಜಾತಿ/ವರ್ಗಕ್ಕೆ ಮೀಸಲಿಟ್ಟ ಹಣ ಬೇರೆ ಇಲಾಖೆಗಳಿಗೆ ವರ್ಗಾವಣೆ ಆಗದಂತೆ ಕ್ರಮ ವಹಿಸಬೇಕು. ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸಬೇಕು. ಬ್ಯಾಕ್ ಲಾಗ್ ಹುದ್ದೆ ತಕ್ಷಣ ಭರ್ತಿ ಮಾಡಬೇಕು. ಈ ವರ್ಗದ ಎಲ್ಲ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ದಲಿತ ಸಂಘಟನೆಗಳ ಬೇಡಿಕೆಗಳು
ಎಸ್‌ಸಿಎಸ್‌ಪಿ/ಟಿಎಸ್ಪಿ ಹಣವನ್ನು ಬಜೆಟ್ ಗಾತ್ರದ ಶೇ.24.1 ರಷ್ಟು ಮೀಸಲಿಡಬೇಕು. ಮೀಸಲಿಟ್ಟ ಹಣ ಸಂಪೂರ್ಣ ಬಿಡುಗಡೆ ಮಾಡಬೇಕು ಹಾಗೂ ಖರ್ಚು ಮಾಡಬೇಕು. ದಲಿತರ ಅನುಕೂಲಕ್ಕೆ ಮಾತ್ರ ಈ ಹಣ ವಿನಿಯೋಗಿಸಬೇಕು. ಪರಿಶಿಷ್ಟರ ಹಣದಲ್ಲಿ ಶಿಕ್ಷಣ, ಆರೊಗ್ಯ, ವಸತಿ, ಸ್ವಯಂ ಉದ್ಯೋಗ, ಪೌರ ಕಾರ್ಮಿಕರ ಪುನರ್ವಸತಿ, ಭೂ ಹಂಚಿಕೆಗೆ ಶೇ. ರಷ್ಟು ಅನುದಾನ ಮೀಸಲಿಡಬೇಕು. ಸ್ವಯಂ ಉದ್ಯೋಗ ಸ್ಥಾಪಿಸಿಕೊಳ್ಳಲು ವಾರ್ಷಿಕ 500 ಲಾನುಭವಿಗಳನ್ನು ಗುರುತಿಸಿ ಕಡ್ಡಾಯವಾಗಿ ಧನ ಸಹಾಯ ನೀಡಬೇಕು. ಸರ್ಕಾರಿ ವಾಣಿಜ್ಯ ಕಟ್ಟಡಗಳಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ.25 ರಷ್ಟು ಅಂಗಡಿ ಮುಂಗಟ್ಟು ಮೀಡಲಿಡಬೇಕು. ಕೈಗಾರಿಕಾ ವಲಯದ ನಿವೇಶನಗಳಲ್ಲಿ ಪರಿಶಿಷ್ಟರಿಗೆ ಆದ್ಯತೆ ನೀಡಬೇಕು. ಡಿ.ದೇವರಾಜ ಅರಸು 1978 ರಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ಯಥಾವತ್ತಾಗಿ ಮರು ಜಾರಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಇಂದೂಧರ ಹೊನ್ನಾಪುರ, ಮಾವಳ್ಳಿ ಶಂಕರ್, ಸಿ.ಎನ್.ವೆಂಕಟೇಶ್, ವಿ.ನಾಗರಾಜ್, ಜೀವನಹಳ್ಳಿ ಆರ್. ವೆಂಕಟೇಶ್ ಮತ್ತಿರರು ಸರ್ಕಾರದ ಗಮನ ಸೆಳೆದರು.
ಖಾಸಗಿ ಸಾರಿಗೆ ಸಂಘಗಳ ಮನವಿ
ಚಾಲಕರಿಗೆ ವಸತಿ ಯೋಜನೆ ಜಾರಿಗೊಳಿಸಬೇಕು. ಬೈಕ್ ಟ್ಯಾಕ್ಸಿ ರದ್ದುಪಡಿಸಬೇಕು. ಸರ್ಕಾರಿ ಆಧಾರಿತ ಆನ್‌ಲೈನ್ ಆಪ್ ನೀಡಬೇಕು. ಭಾರೀ ಗಾತ್ರದ ವಾಹನ ಚಾಲನಾ ಪರವಾನಗಿ ಪತ್ರವನ್ನು ಎಲ್ಲ ಜಿಲ್ಲಾ ಆರ್‌ಟಿಒ ಕಚೇರಿಯಲ್ಲಿ ನೀಡಬೇಕು. ಚಾಲಕರು ಮತ್ತು ಕುಟುಂಬಕ್ಕೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಹೆಲ್ತ್ ಇನ್ಶೂರೆನ್ಸ್ ಒದಗಿಸಬೇಕು. ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ನೀಡಬೇಕು. ಪ್ರವಾಸಿ ತಾಣಗಳಲ್ಲಿ ಚಾಲಕರು ವಿಶ್ರಾಂತಿ ಪಡೆಯಲು ವಿಶ್ರಾಂತಿ ಧಾಮ ಹಾಗೂ ಶೌಚಾಲಯ ನಿರ್ಮಿಸಬೇಕು. 2019 ರಿಂದ ಈವರೆಗೆ ಹಲವಾರು ವಾಹನಗಳ ತೆರಿಗೆ ಪಾವತಿ ಮಾಡಿರದ ವಾಹನಗಳಿಗೆ ರಿಯಾಯಿತಿ ಕೊಡಬೇಕು. ಮಹಿಳೆಯರು ಆಟೋ ಅಥವಾ ಟ್ಯಾಕ್ಸಿ ಖರೀದಿ ಮಾಡಲು ಶುಲ್ಕ ಶೇ.50 ಸಬ್ಸಿಡಿ ಕೊಡಬೇಕು. ಶಾಲಾ ವಾಹನಗಳಿಗೆ ವಿಶೇಷ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ವಿಶೇಷ ಪರವಾನಗಿ ನೀಡಬೇಕು. ಅಸಂಘಟಿತ ಕಾರ್ಮಿಕ ಮಂಡಳಿಯಿಂದ ಪ್ರಸಕ್ತ ನೀಡುತ್ತಿರುವ 5 ಲಕ್ಷ ರೂ. ಅಪಘಾತ ಪರಿಹಾರವನ್ನು ಈ ವರ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಬೇಕು. ಹೃದಯಾಘಾತದಲ್ಲಿ ಮೃತ ಪಟ್ಟ ಚಾಲಕರಿಗೂ ಪರಿಹಾರ ಧನ ನೀಡಬೇಕು. ಎಲ್‌ಪಿಜಿ ಪೋಸ್ಟ್ ಟ್ರಾಕ್ ಆಟೋ ರಿಕ್ಷಾಗಳಿಗೆ ಸಿಎನ್‌ಜಿ ಗ್ಯಾಸ್ಕೆಟ್ ಅಳವಡಿಸಲು 20 ಸಾವಿರ ರೂ. ಸಹಾಯಧನವನ್ನು ಮೊದಲ ಹಂತದಲ್ಲಿ 1 ಲಕ್ಷ ಆಟೋಗಳೀಗೆ ನೀಡಬೇಕು ಎಂಬುವುವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒಕ್ಕೂಟ ಆಗ್ರಹಿಸಿತು. ಒಕ್ಕೂಟದ ಅಧ್ಯಕ್ಷ ಎಸ್.ನಟರಾಜ ಶರ್ಮ, ಜಿ.ನಾರಾಯಣಸ್ವಾಮಿ, ಗಂಡಸಿ ಸದಾನಂದಸ್ವಾಮಿ, ರಘುನಾರಾಯಣಗೌಡ, ಸಂತೋಷ್ ಮತ್ತಿತರರು ಸಿಎಂ ಸಿದ್ದರಾಮಯ್ಯ ಅವರಿಗೆ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲಾಯಿತು.