More

    ಕೇಂದ್ರ ಸರ್ಕಾರದಿಂದ ಕೃಷಿಕರ ನೆಮ್ಮದಿ ಕಸಿಯುವ ಯತ್ನ: ರೈತಪರ ಸಂಘಟನೆಗಳ ಕಿಡಿ

    ಸಾಗರ: ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಹಾಗೂ ಕೇಂದ್ರ ಸರ್ಕಾರ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ದೇಶದ ಆರ್ಥಿಕ ಬೆನ್ನೆಲುಬೇ ರೈತ. ಆದರೆ ಕೇಂದ್ರ ಸರ್ಕಾರ ತನ್ನ ಕೆಟ್ಟ ನೀತಿಗಳಿಂದ ರೈತರ ಗೋಣು ಮುರಿಯುವ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರೈತರ ನೆಮ್ಮದಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಸಂಚು ನಡೆಯುತ್ತಿದ್ದು ರೈತರು ಜಾಗೃತರಾಗಬೇಕು ಎಂದರು.
    ರೈತ ಸಂಘ (ಡಾ. ಎಚ್.ಗಣಪತಿಯಪ್ಪ) ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ರೈತರ ಬೇಡಿಕೆಗಳನ್ನು ಆಲಿಸಿ ಈಡೇರಿಸ ಬೇಕಾದ ಕೇಂದ್ರ ಸರ್ಕಾರ ಅದನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ರೈತರ ಚಳವಳಿಗೆ ಅಡ್ಡಿಪಡಿಸಿದರೆ ಕೇಂದ್ರ ಸರ್ಕಾರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ರೈತರು ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಸಹ ನವದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
    ಮಲೆನಾಡು ಭೂರಹಿತರ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಬದುಕು ಅತ್ಯಂತ ಸಂಕಷ್ಟದಲ್ಲಿದೆ. ದೇಶಾದ್ಯಂತ ಎಂಎಸ್‌ಪಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ನ್ಯಾಯಸಮ್ಮತವಾಗಿದೆ. ಸರ್ಕಾರ ತಕ್ಷಣ ರೈತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
    ಪ್ರಮುಖರಾದ ಎಚ್.ಬಿ.ರಾಘವೇಂದ್ರ, ರಾಜಪ್ಪ ಮಾಸ್ತರ್, ಎನ್.ಡಿ.ವಸಂತಕುಮಾರ್, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಕಿರಣಕುಮಾರ್, ಡಾ. ರಾಮಚಂದ್ರ ಮನೆಘಟ್ಟ, ರವಿ ಕುಗ್ವೆ, ಎಂ.ಬಿ.ಮಂಜಪ್ಪ, ಡಿ.ದಿನೇಶ್, ವಿಲ್ಸನ್ ಗೋನ್ಸಾಲ್ವಿಸ್, ಆರ್ಥರ್ ಗೋಮ್ಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts