More

    ಜಿಲ್ಲೆಯಲ್ಲಿ 22ರವರೆಗೆ ಆರೆಂಜ್ ಅಲರ್ಟ್

    ಕಾರವಾರ: ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಸುರಿದ ಮಳೆ ಶನಿವಾರ ಕೊಂಚ ಕಡಿಮೆಯಾಗಿದೆ. ಆದರೆ, ಜುಲೈ 22ರವರೆಗೂ ಜಿಲ್ಲೆಯಲ್ಲಿ ದಿನಕ್ಕೆ 115ರಿಂದ 204 ಮಿಮೀವರೆಗೂ ಮಳೆ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆರೆಂಜ್ ಅಲರ್ಟ್ ಘೊಷಿಸಿದೆ. ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿವೆ. ವಿವಿಧೆಡೆ ಮನೆಗಳು ಬಿದ್ದು ಹಾನಿಯಾಗಿದೆ.

    ಶನಿವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 44.18 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 86.5 ಮಿಮೀ, ಭಟ್ಕಳ-43, ಹಳಿಯಾಳ-7.4, ಹೊನ್ನಾವರ-47.7, ಕಾರವಾರ-86.4, ಕುಮಟಾ-64.2, ಮುಂಡಗೋಡ-20.4, ಸಿದ್ದಾಪುರ-32.2, ಶಿರಸಿ-42.5, ಜೊಯಿಡಾ-28.4, ಯಲ್ಲಾಪುರ-27.4 ಮಿಮೀ ಮಳೆಯಾಗಿದೆ.

    ಸಮುದ್ರ ಕೊರೆತ: ಕಾರವಾರದಲ್ಲಿ ಶನಿವಾರ ಬೆಳಗ್ಗೆ ಮಳೆ ಬಿಡುವು ನೀಡಿತ್ತು. ಸಾಯಂಕಾಲದ ಹೊತ್ತಿಗೆ ಮತ್ತೆ ಹದವಾಗಿ ಮಳೆಯಾಗಿದೆ. ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸುತ್ತಿದ್ದು, ಅಬ್ಬರದ ಅಲೆಗಳು ಏಳುತ್ತಿವೆ. ಇದರಿಂದ ಮಾಜಾಳಿ ಹಾಗೂ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ತೀರದ ಪ್ರದೇಶದಲ್ಲಿ ಸಮುದ್ರದ ಕೊರೆತ ಹೆಚ್ಚಿದೆ. ಬಾವಳ, ಗಾಂವಗೇರಿ ಕ್ರಾಸ್ ಸೇರಿ ವಿವಿಧೆಡೆ ಅಲೆಗಳ ಅಬ್ಬರಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ಬೈಕ್ ಹೊರತುಪಡಿಸಿ ಉಳಿದ ಭಾರಿ ವಾಹನ ಓಡಾಟಕ್ಕೆ ಅಡಚಣೆ ಉಂಟಾಗಿದೆ. 2020ರಲ್ಲಿ ಬಂದರು ಇಲಾಖೆ ಕಲ್ಲು ಹಾಕಿ ಸಂರಕ್ಷಣಾ ಕಾಮಗಾರಿ ಕೈಗೊಂಡಿತ್ತು. ರಕ್ಕಸ ಅಲೆಗಳು ಅವನ್ನೂ ಮೀರಿ ಮೇಲೆ ಬರುತ್ತಿವೆ.

    ಅಣೆಕಟ್ಟೆಗೆ: ಸೂಪಾ, ಕದ್ರಾ ಅಣೆಕಟ್ಟೆಗಳಿಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ಸೂಪಾಕ್ಕೆ 15780 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗರಿಷ್ಠ 564 ಮೀಟರ್ ಸಂಗ್ರಹಣಾ ಸಾಮರ್ಥ್ಯವಿರುವ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 541.12 ಮೀಟರ್​ಗೆ ತಲುಪಿದೆ. ವಿದ್ಯುತ್ ಉತ್ಪಾದನೆ ಮಾಡಿ 3133 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. 34.50 ಮೀಟರ್​ವರೆಗೆ ನೀರು ಸಂಗ್ರಹಿಸಬಹುದಾದ ಕದ್ರಾ ಅಣೆಕಟ್ಟೆಗೆ 11503 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 30.20 ಮೀಟರ್​ನರಷ್ಟಿದೆ.

    229 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಜೂನ್ 1ರಿಂದ ಇದುವರೆಗೆ 18 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. 211 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. 2 ಜಾನುವಾರಿಗೆ ಹಾನಿಯಾಗಿದೆ. 2.8 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಲೆಕ್ಕ ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts