More

    ಕರ್ತವ್ಯದಿಂದ ನೌಕರರು ದೂರ, ಮಧ್ಯಾಹ್ನದವರೆಗೆ ಸರ್ಕಾರಿ ಕಚೇರಿಗಳು ಭಣ ಭಣ

    ಶಿವಮೊಗ್ಗ: ಏಳನೇ ವೇತನ ಆಯೋಗ ಮತ್ತು ಒಪಿಎಸ್(ಹಳೇ ಪಿಂಚಣಿ ಪದ್ಧತಿ) ಮುಂದುವರಿಸುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ಸರ್ಕಾರಿ ನೌಕರರು ಬುಧವಾರ ಮಧ್ಯಾಹ್ನದವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಸಿದರು. ಹಾಗಾಗಿ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳ ಸರ್ಕಾರಿ ಕಚೇರಿಗಳಿಗೆ ಬಂದ ಜನರು ಬರಿಗೈಯಲ್ಲೇ ಮನೆಗೆ ಮರಳಿದರು.
    ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವಿನ ಹಗ್ಗಾಜಗ್ಗಾಟ ಮಂಗಳವಾರ ತಡರಾತ್ರಿವರೆಗೂ ಮುಂದುವರಿದ ಕಾರಣ ಬುಧವಾರ ಬೆಳಗ್ಗೆ ಗ್ರಾಪಂಗಳಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೂ ಯಾವೊಬ್ಬ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾಗಲಿಲ್ಲ. ಹಾಗಾಗಿ ಮುಷ್ಕರದ ಅರಿವಿರದ ಕೆಲವರು ಕಚೇರಿಗಳಿಗೆ ಧಾವಿಸಿದ್ದು ಖಾಲಿ ಕಚೇರಿಗಳನ್ನು ನೋಡಿ ದಂಗಾದರು. ಸ್ವಲ್ಪ ಹೊತ್ತು ಕಾದು ಆನಂತರ ಮುಷ್ಕರದ ವಿಷಯ ತಿಳಿದು ಮರಳುವ ದೃಶ್ಯ ಸಾಮಾನ್ಯವಾಗಿತ್ತು.
    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರೆ ಮೇರೆಗೆ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳು, ತಾಲೂಕು ಕಚೇರಿ, ಸರ್ವೆ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವೇದಿಕೆಗಳ ಇಲಾಖೆ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದಿಂದ ದೂರವೇ ಉಳಿದರು. ಸರ್ಕಾರದ ಸಂಧಾನ ಯಶಸ್ವಿಯಾದ ಬೆನ್ನಲ್ಲೇ ಮಧ್ಯಾಹ್ನದ ಬಳಿಕ ಕೆಲವರು ಕಚೇರಿಗಳಿಗೆ ಬಂದು ಕೆಲಸದಲ್ಲಿ ಮಗ್ನರಾದರು. ಆದರೆ ಬಹುತೇಕ ಶಿಕ್ಷಕರು ಶಾಲೆಗಳಿಗೆ ರಜೆ ಹಾಕಿ ಮನೆಯಲ್ಲೇ ಉಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts