More

    ಟೊಂಕಾ ಬಂದರು ನಿರ್ಮಾಣಕ್ಕೆ ವಿರೋಧ

    ಹೊನ್ನಾವರ: ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೊನ್ನಾವರದ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಹಾಗೂ ಬಂದರಿಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಮತ್ತೆ ಪೊಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡಿದ್ದನ್ನು ವಿರೋಧಿಸಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದರು.
    ಹೊನ್ನಾವರದ ಕಾಸರಕೋಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಅಂದಾಜು 600 ಕೋಟಿ ರೂ. ವೆಚ್ಚದಲ್ಲಿ ಎಚ್​ಪಿಪಿಎಲ್ (ಹೊನ್ನಾವರ ಪೋರ್ಟ್ ಲಿಮಿಟೆಡ್ ಕಂಪನಿ) ವಾಣಿಜ್ಯ ಬಂದರು ನಿರ್ವಿುಸುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ವಣಕ್ಕೆ ಬರೋಬ್ಬರಿ 93 ಎಕರೆ ಭೂಮಿ ಮಂಜೂರು ಮಾಡಿದೆ. ಕೆಲ ತಿಂಗಳ ಹಿಂದೆ ಬಂದರು ಕಾಮಗಾರಿ ಪ್ರಾರಂಭಿಸಿದ್ದ ಕಂಪನಿ ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತ್ತು. ಆದರೆ, ಶನಿವಾರ ಬೆಳ್ಳಂಬೆಳಗ್ಗೆ ಮತ್ತೆ ಸಾವಿರಾರು ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದರಿಂದ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದಲೇ ಸುರಿಯುವ ಮಳೆ ಲೆಕ್ಕಿಸದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕಾಮಗಾರಿ ಸ್ಥಗಿತಗೊಳಿಸದ ಹಿನ್ನೆಲೆಯಲ್ಲಿ ಕೆಲ ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಸ್ಥಳೀಯರು ಯುವಕರನ್ನು ತಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
    ಮೀನುಗಾರರೊಂದಿಗೆ ಸಭೆ: ಕಾಮಗಾರಿ ಸ್ಥಗಿತಗೊಳಿಸಿದ ಉಪವಿಭಾಗಾಧಿಕಾರಿ ಮಮತಾದೇವಿ ಎಸ್. ಹಾಗೂ ತಹಸೀಲ್ದಾರ್ ವಿವೇಕ ಶೇಣ್ವಿ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಜಿಲ್ಲಾ ಮತ್ತು ತಾಲೂಕು ಆಡಳಿತದ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿದರು. ಮೀನುಗಾರರ ಮನೆ ತೆರವು ಕಾರ್ಯಾಚರಣೆ ಕ್ರಮ ವಿರೋಧಿಸಿದರು. ಬಂದರು ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
    ಜಿಲ್ಲಾ ಮೀನುಗಾರರ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿ, ಮೀನುಗಾರರ ಮೇಲೆ ಈ ರೀತಿ ದಬ್ಬಾಳಿಕೆ ನಡೆಸಿ ಏನು ಸಾಧಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
    ಮೀನುಗಾರರ ಅಸಮಾಧಾನ
    ಹೊನ್ನಾವರ ಪೋರ್ಟ್ ಲಿಮಿಟೆಡ್ ಕಂಪನಿ ಸಹಭಾಗಿತ್ವದಲ್ಲಿ ನಿರ್ವಿುಸಲಾಗುತ್ತಿರುವ ಖಾಸಗಿ ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನದ ವಿರುದ್ಧ ಸ್ಥಳೀಯರ ವಸತಿ, ಆರೋಗ್ಯ, ಮೀನುಗಾರರ ವೃತ್ತಿ, ಪರಿಸರ, ವಾಯುಮಾಲಿನ್ಯ, ಜೀವ ವೈವಿಧ್ಯಗಳು ಮತ್ತು ಬ್ರೇಕ್ ವಾಟರ್ ಸಹಿತ ವಿವಿಧ ಸಾರ್ವಜನಿಕ ಹಿತಾಸಕ್ತಿ ರಕ್ಷಿಸಲು ಸ್ಥಳೀಯರ ಪರವಾಗಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ರಿಟ್​ನಲ್ಲಿ ಅರಣ್ಯ ಸರ್ವೆ ನಂ. 233 ಮತ್ತು 237ರಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಂತೆ ಹೈಕೋರ್ಟ್ ಆದೇಶಿಸಿದೆ. ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆದರೂ ಹೊನ್ನಾವರ ಪೋರ್ಟ್ ಪ್ರೖೆವೇಟ್ ಲಿ. ಕಂಪನಿಯು ಕಾಸರಕೋಡನಲ್ಲಿ ವಾಣಿಜ್ಯ ಬಂದರು ಮತ್ತು ಚತುಷ್ಪಥ ರಸ್ತೆಯ ಕೆಲಸ ಆರಂಭಿಸಲು ತಾಲೂಕು ಮತ್ತು ಜಿಲ್ಲಾಡಳಿತದ ಬೆಂಬಲ ಪಡೆದು ಯತ್ನಿಸುತ್ತಿರುವುದು ಜನವಿರೋಧಿ ಕ್ರಮವಾಗಿದೆ. ಜಿಲ್ಲಾಡಳಿತ ಮತ್ತು ಖಾಸಗಿ ಬಂದರು ನಿರ್ಮಾಣ ಕಂಪನಿಯ ಈ ನಡೆಯನ್ನು ರಾಷ್ಟ್ರೀಯ ಮೀನುಗಾರರ ಸಂಘಟನೆಯ ಸ್ಥಳೀಯ ಘಟಕ ಮತ್ತು ಮೀನುಗಾರರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಪದಾಧಿಕಾರಿಗಳು ಖಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts