More

    94ಸಿ, 94ಸಿಸಿ ಹಕ್ಕುಪತ್ರ ರದ್ದತಿಗೆ ವಿರೋಧ

    ಶೃಂಗೇರಿ: ಈ ಹಿಂದಿನ ತಹಸೀಲ್ದಾರ್ ಅಂಬುಜಾ ನೀಡಿದ್ದ ಹಕ್ಕುಪತ್ರವನ್ನು ತಹಸೀಲ್ದಾರ್ ಗೌರಮ್ಮ ಅಸಿಂಧುಗೊಳಿಸಿ ಬಡವರ ಮೂಲ ಸೌಕರ್ಯದ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಫಾರ್ಮ್ 94ಸಿ ಹಾಗೂ 94ಸಿಸಿ ಅಡಿ ನೀಡಲಾಗಿದ್ದ ಹಕ್ಕುಪತ್ರಗಳನ್ನು ರದ್ದುಗೊಳಿಸಿದ್ದಾರೆ. ಾರ್ಮ್ 53ಗೆ ಸಾಗುವಳಿ ಚೀಟಿ, ಪಹಣಿ ನೀಡಲು ವಿಳಂಬ ಮಾಡಲಾಗುತ್ತಿದೆ. ಹಕ್ಕುಪತ್ರ ರದ್ದುಗೊಳಿಸುವಾಗಿ ತಾಲೂಕು ಕಚೇರಿಯಲ್ಲಿ ಯಾವುದೇ ದಾಖಲಾತಿಗಳು ಇಲ್ಲ ಎಂದು ಸಬೂಬು ನೀಡಿದ್ದಾರೆ. ದಾಖಲಾತಿ ಇಲ್ಲದ ಮೇಲೆ 94ಸಿ ಹಾಗೂ 94ಸಿಸಿ ಅವರಿಗೆ ನೋಟಿಸ್ ನೀಡಿದ್ದು ಎಷ್ಟು ಸರಿ? ಕೂಡಲೇ ಅವರು ಮತ್ತೆ ಸೂಕ್ತವಾಗಿ ಸ್ಥಳ ಪರಿಶೀಲನೆ ಮಾಡಿ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಸಮಿತಿ ಸಂಚಾಲಕ ಕೆ.ಎಂ.ಶ್ರೀನಿವಾಸ್ ಆಗ್ರಹಿಸಿದರು.
    ಸಮಿತಿ ಕೋಶಾಧ್ಯಕ್ಷ ಡಾ. ಆಗುಂಬೆ ಗಣೇಶ್ ಹೆಗಡೆ ಮಾತನಾಡಿ, ಬ್ರಿಟಿಷ್ ಸರ್ಕಾರ ಇರುವಾಗ ಇದ್ದ ಭೂಮಿ ಈಗಲೂ ಇದೆ. ಮಲೆನಾಡಿನಲ್ಲಿ ಕಳೆದ 25 ವರ್ಷಗಳಿಂದ ವಸತಿಹೀನರಿಗೆ ಸರ್ಕಾರಿ ಜಾಗ ನೀಡಲು ಸರ್ಕಾರಗಳು ಸೋತಿವೆ. ರೈತರು ಹಾಗೂ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಮಾಡಿದ್ದ ಭೂ ಒತ್ತುವರಿಯನ್ನು 2007ರಲ್ಲಿ ಏಕಪಕ್ಷೀಯವಾಗಿ ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ಅರಣ್ಯವನ್ನು ಕಾಪಾಡಿಕೊಂಡು ಬಂದವರನ್ನು ದರೋಡೆಕೋರರು ಎಂದು ಅರಣ್ಯ ಇಲಾಖೆ ಪ್ರತಿಬಿಂಬಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಪ್ರತಿಭಟನಾ ಸಭೆಗೆ ಅಧಿಕಾರಿಗಳು ಕಾಲಮಿತಿ ಹಾಕಿದ್ದಾರೆ. ಆದರೆ ಇಲ್ಲಿನ ಜನರು ಇಲಾಖೆಯಿಂದ ಇ-ಸ್ವತ್ತು, ಆದಾಯ, ಜಾತಿದೃಢೀಕರಣ ಪತ್ರಗಳನ್ನು ಕಾಲಮಿತಿಯೊಳಗೆ ಕೊಡುವ ಕಾಳಜಿ ಅವರಿಗಿಲ್ಲ. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ದಾಖಲಾತಿ ಪಡೆಯಲು ಪರದಾಡುವ ಸ್ಥಿತಿ ಇರುವುದು ಬೇಸರದ ಸಂಗತಿ ಎಂದರು.
    ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ನೂರಾರು ವರ್ಷಗಳಿಂದ ಇಲ್ಲಿಯೇ ಜೀವನ ಕಟ್ಟಿಕೊಂಡವರಿಗೆ ಸಾಗುವಳಿ ಚೀಟಿ ಇನ್ನೂ ದೊರಕಿಲ್ಲ. ಸರ್ಕಾರವೇ ಮನೆದಳಕ್ಕೆ ಹಾಗೂ ಒತ್ತುವರಿ ಜಾಗಕ್ಕೆ ಅರ್ಜಿ ಸಲ್ಲಿಸಿ ಎಂದಾಗ ಜನಸಾಮಾನ್ಯರು ಹಾಗೂ ರೈತರು ಅರ್ಜಿ ಹಾಕಿದ್ದಾರೆ. 2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಸೊಪ್ಪಿನ ಬೆಟ್ಟದ ಜಾಗಗಳಲ್ಲಿ ಇರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಯಾವುದೇ ಅಡೆತಡೆ ಇಲ್ಲ ಎಂದು ಆದೇಶಿಸಿದ್ದಾರೆ. ಅಧಿಕಾರಿಗಳು ಯಾರದೋ ಒತ್ತಡಕ್ಕೆ ಕಚೇರಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ. ಇರುವಷ್ಟು ಕಾಲ ಬಡವರ ಪರ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
    ಅರಣ್ಯ ಕಾಯ್ದೆ 4(1) ನಕ್ಷೆಯಲ್ಲಿ ರೈತರು ಮಾಡಿರುವ ಒತ್ತುವರಿ, ವಾಸದ ಮನೆ, ರಸ್ತೆಗಳು, ಕಟ್ಟಡಗಳ ಇತ್ಯಾದಿಗಳನ್ನು ನಮೂದಿಸಲಿಲ್ಲ. ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳನ್ನು ಸರ್ವೇ ಕಾರ್ಯದಲ್ಲಿ ಬಳಸಿಕೊಂಡು ಸ್ಥಳದಲ್ಲಿ ಅವುಗಳನ್ನು ನಕ್ಷೆಯಲ್ಲಿ ನಮೂದಿಸಬೇಕು ಒತ್ತಾಯಿಸಿದರು.
    ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಉಪಾಧ್ಯಕ್ಷ ನಾಗೇಶ್ ನಾಯ್ಕ, ಸಹಕಾರ್ಯದರ್ಶಿಗಳಾದ ಡಾ. ಅಣ್ಣಾದೊರೈ, ಗೊಳ್ಗೋಡು ಚಂದ್ರಶೇಖರ್, ಮಾಧ್ಯಮ ಪ್ರಮುಖ್ ಅಂಗುರ್ಡಿ ದಿನೇಶ್, ತಾಪಂ ಮಾಜಿ ಸದಸ್ಯ ಕಚ್ಚೋಡಿ ರಮೇಶ್, ರಮಾ, ಸುಷ್ಮಾ, ಚಂದ್ರಶೇಖರ್, ಶೇಖರ್, ಪ್ರವೀಣ್ ಪೂಜಾರಿ, ಶಿವಶಂಕರ್, ಕೃಷ್ಣಮೂರ್ತಿ, ಪ್ರವೀಣ್, ಪದ್ಮನಾಭ ಹೆಗಡೆ, ಸತೀಶ್ ನಡುತೋಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts