More

    ಸೂಕ್ತ ಸ್ಥಳದಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ

    ಯಳಂದೂರು: ಸೂಕ್ತ ಸ್ಥಳ ಗುರುತಿಸಿ ಕೊಡುವ ಮೂಲಕ ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಲಾ ಗುವುದು ಎಂದು ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಹೇಳಿದರು.

    ಪಟ್ಟಣದಲ್ಲಿನ ಆಟೋ, ಕಾರು, ಬಸ್ ನಿಲ್ದಾಣಕ್ಕೆ ತೆರಳಿ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದರು. ಇದಕ್ಕೂ ಮುನ್ನ ಮಾತನಾಡಿದ ಮಾಜಿ ಶಾಸಕ ಎಸ್. ಬಾಲರಾಜು ಹಾಗೂ ಪಪಂ ಸದಸ್ಯರು, ಈಗಿರುವ ಸ್ಥಳದಲ್ಲೇ ಕಾರು ನಿಲ್ದಾಣ ಇರಬೇಕು. ಆಟೋ ನಿಲ್ದಾಣಕ್ಕೆ ಹಳೇ ಕುಡಿಯುವ ನೀರಿನ ಟ್ಯಾಂಕ್ ಬಳಿಯ ಸ್ಥಳವೇ ಸೂಕ್ತ. ಇದರೊಂದಿಗೆ ಸಿಡಿಎಸ್ ಸಮುದಾಯ ಭವನ ಆವರಣ ಹಾಗೂ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ ಬಳಿ ಪಾನಿಪೂರಿ, ಗೋಬಿ ಮಂಚೂರಿ, ಕಬಾಬ್ ಸೇರಿದಂತೆ ಇತರ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

    ಜನಪ್ರತಿನಿಧಿಗಳ ಸಲಹೆ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಈಗಿರುವ ಸ್ಥಳದಲ್ಲೇ ಆಟೋ ಹಾಗೂ ಕಾರು ನಿಲ್ದಾಣ ಇರಲಿದೆ. ಬಸ್ ನಿಲ್ದಾಣದ ಪಪಂ ವ್ಯಾಪ್ತಿಯ ಮಳಿಗೆ ಬಳಿ ದ್ವಿಚಕ್ರ ವಾಹನ ನಿಲ್ದಾಣ, ಸಿಡಿಎಸ್ ಸಮುದಾಯ ಭವನದ ಆವರಣದಲ್ಲಿ ಫುಡ್‌ಜೋನ್ ಹಾಗೂ ಪಪಂಗೆ ಸೇರಿದ ಹಳೇ ಶೌಚಗೃಹವನ್ನು ತೆರವುಗೊಳಿಸಿ ಅಲ್ಲಿ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದರು.

    ತರಕಾರಿಯನ್ನು ಸಂತೆ ಮೈದಾನದಲ್ಲೇ ಮಾರಾಟ ಮಾಡಬಹುದು. ಈ ಎಲ್ಲ ಕಾರ್ಯಗಳು ಆಗಬೇಕಾದರೆ 2 ವಾರ ಅವಶ್ಯಕ. ಅಲ್ಲಿಯವರೆಗೆ ಈಗಿರುವ ಸ್ಥಳದಲ್ಲೇ ಮಾರಾಟಗಾರರು ತಮ್ಮ ವಹಿವಾಟು ನಡೆಸಬಹುದು ಎಂದರು.

    ಜಿಪಂ ಸದಸ್ಯ ಜೆ.ಯೋಗೇಶ್, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹಾದೇವನಾಯಕ, ಮಂಜು, ಪುಷ್ಪಾವತಿ, ಸುಶೀಲಾ, ರವಿ, ತಹಸೀಲ್ದಾರ್ ಮಹೇಶ್, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನಾ, ಆರೋಗ್ಯಾಧಿಕಾರಿ ಮಹೇಶ್‌ಕುಮಾರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts