More

    ತೆಂಗು, ಅಡಕೆಮರ ತೆರವು ; ತಿಪ್ಪೂರಿನಲ್ಲಿ ಪ್ರಕ್ಷುಬ್ಧ ವಾತಾವರಣ

    ಗುಬ್ಬಿ: ದೇವಸ್ಥಾನದ ಜಾಗದ ಒತ್ತುವರಿ ನೆಪದಲ್ಲಿ 150 ಅಡಕೆ ಗಿಡ ಹಾಗೂ 50 ತೆಂಗಿನಮರಗಳನ್ನು ತಾಲೂಕು ಆಡಳಿತದ ಸಮ್ಮುಖದಲ್ಲಿ ಕಡಿದು ಹಾಕಿರುವ ಘಟನೆ ತಾಲೂಕಿನ ತಿಪ್ಪೂರಿನಲ್ಲಿ ಈಗ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದೆ.

    ತಿಪ್ಪೂರಿನ ಕೋಡಿಕೆಂಪಮ್ಮ ದೇಗುಲ ಅರ್ಚಕ ವೃತ್ತಿ ಮಾಡುವ ಕುಟುಂಬಗಳು ಇನಾಮ್ತಿ ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬದುಕು ನಡೆಸುತ್ತಿರುವ ಜಾಗಕ್ಕೆ ಏಕಾಏಕಿ ಕಾಲಿಟ್ಟ ತಾಲೂಕು ಆಡಳಿತ ಮಾ.6 ರಂದು ತೆಂಗು, ಅಡಕೆಗಿಡಗಳನ್ನು ನೆಲಕ್ಕುರುಳಿಸಿದ್ದು ಈ ಘಟನೆಗೆ ಸಂಬಂಧಿಸಿದಂತೆ ವಾಲ್ಮೀಕಿ ನಾಯಕ ಸಮಾಜದ ನೂರಾರು ಮಂದಿ ಅಂಬೇಡ್ಕರ ಭಾವಚಿತ್ರ ಇಟ್ಟುಕೊಂಡು ಸೋಮವಾರ ಬೆಳಗ್ಗೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದರು. ತಿಪ್ಪೂರು ಗ್ರಾಮದಲ್ಲಿ ನಡೆದ ಘಟನೆಗೆ ತಾಲೂಕು ಆಡಳಿತ ನೇರ ಹೊಣೆ ಎಂದು ದೂರಿದರು.

    ಅರ್ಚಕ ಕುಟುಂಬದ ಸಿದ್ದಮ್ಮ ಹಾಗೂ ಸಣ್ಣಕೆಂಪಯ್ಯ ಅವರ ಇನಾಮ್ತಿ ಜಮೀನಿನಲ್ಲಿದ್ದ 30 ವರ್ಷದ ಫಸಲು ನೀಡುತ್ತಿದ್ದ ಅಡಕೆ ಹಾಗೂ ತೆಂಗಿನಮರಗಳನ್ನು ನೆಲಕ್ಕುರುಳಿಸಿದ ಗ್ರಾಮಲೆಕ್ಕಾಧಿಕಾರಿ ಮುರಳಿ ಒತ್ತುವರಿ ತೆರವಿಗೆ ಆದೇಶವಿದೆ ಎಂದು ಪೊಲೀಸರ ಸಮಕ್ಷಮದಲ್ಲಿ ತೆರವು ಮಾಡಿದ್ದಾರೆ.

    ಯಾವುದೇ ನೋಟಿಸ್ ನೀಡದೆ ಮರಗಳನ್ನು ಕಡಿದು ಹಾಕಿರುವುದು ಅಮಾನವೀಯ ಕೃತ್ಯ ಎಂದು ಪ್ರತಿಭಟನಾನಿರತರು ಕಿಡಿಕಾರಿದರು. ಬೆಳಗ್ಗೆಯಿಂದಲೇ ಆರಂಭವಾದ ಉಪವಾಸ ಸತ್ಯಾಗ್ರಹದಲ್ಲಿ ಸಂಜೆ ವೇಳೆಗೆ ಆಕ್ರೋಶದ ಕಟ್ಟೆ ಒಡೆಯುವಂತಾಯಿತು. ತಿಂಡಿ ಊಟ ಮಾಡದ ಸಂತ್ರಸ್ತ ಮಹಿಳೆ ಸಿದ್ದಮ್ಮತೀವ್ರ ಅಸ್ವಸ್ಥಗೊಂಡರು. ಸ್ಥಳಕ್ಕೆ ವೈದ್ಯರು ಆಗಮಿಸಿ ಮಹಿಳೆಗೆ ತುರ್ತು ಚಿಕಿತ್ಸೆ ಆಗತ್ಯವಿದೆ. ಆಸ್ಪತ್ರೆಗೆ ದಾಖಲು ಮಾಡಿ ಎಂದರು. ಈ ಬಗ್ಗೆ ತಹಸೀಲ್ದಾರ್ ಎಂ.ಮಮತಾ ಗಮನಕ್ಕೆ ತಂದರೂ ಧರಣಿ ಸ್ಥಳಕ್ಕೆ ಬಾರದಿದ್ದುದಕ್ಕೆ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ನಂತರ ತೀವ್ರ ಅಸ್ವಸ್ಥಗೊಂಡ ಸಿದ್ದಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಯಿತು. ಸುಮಾರು 7 ತಾಸು ಧರಣಿ ನಡೆದರೂ ಅಹವಾಲು ಸ್ವೀಕರಿಸದ ತಹಸೀಲ್ದಾರ್ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸ.ನಂ.113 ಮತ್ತು 114ರಲ್ಲಿ ಬೆಳೆದು ನಿಂತ ತೆಂಗು, ಅಡಕೆಮರಗಳನ್ನು ಕಡಿದ ತಾಲೂಕು ಆಡಳಿತ, ಅಲ್ಲಿನ ದೇವಾಲಯದ ಜಮೀನು ಒತ್ತುವರಿ ತೆರವು ಮಾಡಲು ಮುಂದಾದ ತಹಸೀಲ್ದಾರ್ ಪೂರ್ವಾಪರ ತಿಳಿಯಬೇಕಿತ್ತು. ಆದೇಶ ಹೊರಡಿಸಿ ಗ್ರಾಮಲೆಕ್ಕಿಗರನ್ನು ಸ್ಥಳಕ್ಕೆ ಕಳುಹಿಸಿ ನಂತರದಲ್ಲಿ ಆರಕ್ಷಕ ವೃತ್ತ ನಿರೀಕ್ಷಕರಿಗೂ ಆದೇಶ ಹೊರಡಿಸಿರುವುದು ಅಧಿಕಾರ ದರ್ಪ ತೋರಿಸಿದೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ ಬೇಸರ ವ್ಯಕ್ತಪಡಿಸಿದರು.

    ವಿವಾದಿತ ಜಮೀನು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ ನಂತರ ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ಪ್ರಸ್ತುತ ನಡೆದಿದೆ. ಈ ಬಗ್ಗೆ ತಿಳಿದೂ ಕೂಡಾ ಜಮೀನಿನಲ್ಲಿ ಎರಡು ಕುಟುಂಬಕ್ಕೆ ಆಧಾರವಾಗಿದ್ದ ತೆಂಗು ಮತ್ತು ಅಡಕೆಮರಗಳನ್ನು ಕಡಿದು ಅಪರಾಧ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಂತ್ರಸ್ತರಿಗೂ ಬೇಕಾಬಿಟ್ಟಿ ಉತ್ತರ ನೀಡಿರುವುದು ಸರಿಯಲ್ಲ, ಈ ಅಶಿಸ್ತು ತೋರಿ ಸಾರ್ವಜನಿಕರಿಗೆ ತೊಂದರೆ ಕೊಟ್ಟ ತಹಸೀಲ್ದಾರ್, ಕಂದಾಯ ನಿರೀಕ್ಷಕ ಮತ್ತು ಗ್ರಾಮಲೆಕ್ಕಿಗರನ್ನು ಅಮಾನತು ಮಾಡಬೇಕು ಮತ್ತು ಫಲಭರಿತ ಮರಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ದಾಖಲೆ ಮತ್ತು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು 10 ದಿನದಲ್ಲಿ ಕೈಗೊಳ್ಳುತ್ತೇನೆ ಎಂದು ಉಪವಿಭಾಗಾಧಿಕಾರಿ ಅಜಯ್ ಹೇಳಿದರು.

    ಕಚೇರಿಗೆ ಬೀಗ ಹಾಕಲು ಯತ್ನ: 7 ತಾಸುಗಳು ಕಳೆದರೂ ಧರಣಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ ಬಗ್ಗೆ ಅಸಮಾಧಾನಗೊಂಡ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಬೀಗ ಜಡಿಯಲು ಯತ್ನಿಸಿದರು. ಮುಖಂಡರಾದ ಸಾಕಸಂದ್ರ ದೇವರಾಜು, ಎ.ನರಸಿಂಹಮೂರ್ತಿ, ಎನ್.ಲಕ್ಷ್ಮೀರಂಗಯ್ಯ, ಹೇರೂರು ನಾಗಣ್ಣ, ಜಿ.ಎನ್.ಎಚ್.ಡಿ.ಯಲ್ಲಪ್ಪ, ಕೃಷ್ಣಮೂರ್ತಿ, ಡಿ.ದೇವರಾಜು, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಅರುಣ್, ವಿನಯ್, ರೈತಸಂಘದ ಕೆ.ಎನ್.ವೆಂಕಟೇಗೌಡ, ದಲಿತ ಮುಖಂಡ ಮಾರನಹಳ್ಳಿ ಶಿವಯ್ಯ ಇದ್ದರು.

    ಡಿಸಿ ಆದೇಶ ಹೀಗಿತ್ತು: ಮುಜರಾಯಿ ಇಲಾಖೆ ಸೇರಿದ ದೇವಸ್ಥಾನದಲ್ಲಿ ಮಾ.12 ರಂದು ಜಾತ್ರಾ ಮಹೋತ್ಸವ ಇದೆ. ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣ ತೆರವುಗೊಳಿಸಿ ಜಾತ್ರೆ ನಡೆಯಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದರು.

    ಮರ ಕಡಿಯಲು ಅಧಿಕಾರಿಗಳಿಗೆ ಹಕ್ಕಿಲ್ಲ: ರೈತರ ಮೇಲಿನ ಅಧಿಕಾರಿಗಳ ದರ್ಪ ಸರಿಯಲ್ಲ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ತೆಂಗು ಮತ್ತು ಅಡಕೆಮರಗಳನ್ನು ಕಡಿಯಲು ಅಧಿಕಾರಿಗಳಿಗೆ ಹಕ್ಕಿಲ್ಲ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ದರ್ಪ ಮೆರೆದಿರುವುದು ರೈತರಿಗೆ ಆದ ಅನ್ಯಾಯವಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಜತೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಮರಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.

    ನೂರಾರು ಅಡಿಕೆ, ತೆಂಗು ಮರಗಳನ್ನು ಕಡಿದಿರುವುದು ಅಪರಾಧ. ಗ್ರಾಮಲೆಕ್ಕಿಗ, ತಹಸೀಲ್ದಾರ್ ವಿರುದ್ಧ ಕ್ರಮ ಜರುಗಿಸಿ ಬಂಧಿಸಬೇಕು. ಕೃಷಿ ಭೂಮಿಯನ್ನು ಫಾರಂ 50/53 ಹಾಗು ಹೊಸದಾಗಿ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಲು ರೈತರಿಗೆ ಅವಕಾಶವಿದೆ. ಕೂಡಲೇ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಬೇಕು.
    ಸಚಿನ್ ಮೀಗಾ ಅಧ್ಯಕ್ಷ, ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts