More

    ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಒಂದು ಹಂತ ಮಾತ್ರ ಬಾಕಿ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊಡ ಮಾಡುವ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕೊನೆ ಹಂತ ತಲುಪಿದ್ದು, ಗೊಂದಲ ಗೋಜಲು ಇಲ್ಲದೇ ಪಟ್ಟಿ ಬಿಡುಗಡೆಗೆ ತಯಾರಿ ನಡೆದಿದೆ.
    ಮುಖ್ಯಮಂತ್ರಿಯವರ ಅಧ್ಯಕ್ಷತೆಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಈ ವೇಳೆ ವಿವಿಧ ಆಯಾಮದಲ್ಲಿ ಚರ್ಚೆಗಳು ನಡೆಯಿತು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯ ಸಮಿತಿಯಲ್ಲಿ ಜಾಣಗೆರೆ ವೆಂಕಟ ರಾಮಯ್ಯ, ಕಾತ ಚಿಕ್ಕಣ್ಣ, ಡಾ.ಸಿ ಆರ್ ಚಂದ್ರಶೇಖರ್ ಸೇರಿ 30 ಸದಸ್ಯರಿದ್ದು, ಒಬ್ಬೊಬ್ಬರು ಒಂದು ಕ್ಷೇತ್ರವನ್ನು ಪ್ರತಿನಿಧಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
    ಪ್ರಮುಖ ಸಂಗತಿ ಎಂದರೆ, ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಬೇಕು ಎಂದು ಆಯ್ಕೆ ಸಮಿತಿ ಸದಸ್ಯರು ಅಭಿಪ್ರಾಯ ಪಟ್ಟರು. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
    ಕಳೆದ ಬಾರಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 10 ಸಂಘ-ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿತ್ತು.

    ಆಯ್ಕೆ ಪಟ್ಟಿಯಲ್ಲಿ ಗೊಂದಲ ಇರಕೂಡದು. ಮಾನದಂಡದ ಪ್ರಕಾರವೇ ಆಯ್ಕೆ ನಡೆಯಬೇಕು. ಅರ್ಹರಿಗೇ ಪ್ರಶಸ್ತಿ ಲಭಿಸಬೇಕು, ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಸಿದ್ದರಾಮಯ್ಯ ಆಯ್ಕೆ ಸಮಿತಿಗೆ ಸೂಚಿಸಿದರು.
    ಅರ್ಜಿ ಕೊಡುವವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ ಹಾಕಲು ಏಕೀಕರಣ ಆಗಿ ಎಷ್ಟು ವರ್ಷಗಳಾಯಿತೋ, ಅಷ್ಟು ಪ್ರಶಸ್ತಿ ಗಳನ್ನು ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು. ಹೀಗಾಗಿ ಈ ಬಾರಿ 68 ಪ್ರಶಸ್ತಿ ನೀಡುವ ಜತೆಗೆ 10 ಪ್ರಶಸ್ತಿಯನ್ನು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts