More

    ಬಿಎಂಟಿಸಿ ಸಿಬ್ಬಂದಿ ರಜೆಗೆ ಆನ್​ಲೈನ್​ ವ್ಯವಸ್ಥೆ

    ಬೆಂಗಳೂರು: ಬಿಎಂಟಿಸಿ ಸಿಬ್ಬಂದಿ ರಜೆ ಪಡೆಯಲು ಮೇಲಧಿಕಾರಿಗಳ ಎದುರು ಗೋಗರೆಯುವ ಪರಿಸ್ಥಿತಿ ತಪ್ಪಿಸಲು, ಆನ್​ಲೈನ್​ ಮೂಲಕ ರಜೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

    ಬಿಎಂಟಿಸಿಯಲ್ಲಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್​ ಸೇರಿ ಇನ್ನಿತರರು ರಜೆ ಪಡೆಯಬೇಕೆಂದರೆ ಘಟಕ ವ್ಯವಸ್ಥಾಪಕರು ಅಥವಾ ಹಿರಿಯ ಅಧಿಕಾರಿಗಳಿಗೆ ರಜೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಿದೆ. ಆದರೆ, ಕೆಲವು ಡಿಪೋಗಳಲ್ಲಿ ಸಿಬ್ಬಂದಿ ಅವರಿಗೆ ಅಗತ್ಯವಿರುವ ದಿನದಂದು ರಜೆ ಪಡೆಯುವುದಕ್ಕೂ ಲಂಚ ನೀಡಬೇಕು ಹಾಗೂ ಸಿಬ್ಬಂದಿ ಕೇಳುವ ದಿನಗಳಂದು ರಜೆ ನೀಡದೆ ಸತಾಯಿಸಲಾಗುತ್ತದೆ ಎಂಬ ಆರೋಪವಿದೆ. ಈ ಲೋಪಗಳನ್ನೆಲ್ಲ ಸರಿಪಡಿಸಲು ಆನ್​ಲೈನ್​ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಿಬ್ಬಂದಿ ಯಾವುದೇ ರೀತಿಯ ಕಿರಿಕಿರಿಯಿಲ್ಲದೆ ರಜೆ ಪಡೆಯುವಂತೆ ಮಾಡಲಾಗಿದೆ.


    6 ಘಟಕಗಳಲ್ಲಿ ಜಾರಿ: ನೂತನ ವ್ಯವಸ್ಥೆಯನ್ನು ಆರಂಭದಲ್ಲಿ 6 ಘಟಕಗಳಲ್ಲಿ ಜಾರಿಗೊಳಿಸಲಾಗಿದೆ. ಪೀಣ್ಯ, ಕೆಂಗೇರಿ, ಹೆಣ್ಣೂರು, ಕೋರಮಂಗಲ, ಎಚ್​ಎಸ್​ಆರ್​ ಲೇಔಟ್​, ಪೂರ್ಣಪ್ರಜ್ಞಾ ಲೇಔಟ್​ ಘಟಕಗಳ ಚಾಲಕ, ನಿರ್ವಾಹಕ, ಮೆಕ್ಯಾನಿಕ್​ ಸೇರಿ ಇನ್ನಿತರರು ಬಿಎಂಟಿಸಿ ಸಿಬ್ಬಂದಿಗಳಿಗಾಗಿ ಸಿದ್ಧಪಡಿಸಿರುವ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಅದರಲ್ಲಿ ಎಷ್ಟು ದಿನ ರಜೆ ಬೇಕು, ಯಾವ ತಾರೀಖಿನಿಂದ ಯಾವ ತಾರೀಖಿನವರೆಗೆ ರಜೆ ಬೇಕಿದೆ, ಅದಕ್ಕೆ ಕಾರಣವನ್ನು ತಿಳಿಸಬೇಕು. ಅದರ ಜತೆಗೆ ಸಿಬ್ಬಂದಿ ಮಾಹಿತಿಯನ್ನು ಭರ್ತಿ ಮಾಡಬೇಕು. ಆ ಅರ್ಜಿ ಮತ್ತು ನೌಕರರ ಲಭ್ಯತೆಯನ್ನಾಧರಿಸಿ ಸಂಬಂಧಪಟ್ಟ ಅಧಿಕಾರಿಗಳು ರಜೆ ಮಂಜೂರು ಮಾಡಲಿದ್ದಾರೆ.


    ನಿಗದಿ ಮಾಡಿರುವ ಘಟಕಗಳಲ್ಲಿ ಯಾವೊಬ್ಬ ಸಿಬ್ಬಂದಿಯೂ ಮ್ಯಾನುಯಲ್​ ಮೂಲಕ ರಜೆ ಅರ್ಜಿ ಸಲ್ಲಿಸುವಂತಿಲ್ಲ ಮತ್ತು ಅದನ್ನು ಘಟಕ ವ್ಯವಸ್ಥಾಪಕರು ಅನುಮೋದಿಸುವಂತಿಲ್ಲ ಎಂದು ಬಿಎಂಟಿಸಿ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕರು ಸೂಚಿಸಿದ್ದಾರೆ. ಈ ಆರು ಘಟಕಗಳಲ್ಲಿ ವ್ಯವಸ್ಥೆ ಯಶಸ್ವಿಯಾದರೆ, ಬಿಎಂಟಿಸಿಯ ಎಲ್ಲ ಘಟಕ ಮತ್ತು ವಿಭಾಗಗಳಲ್ಲೂ ರಜೆ ಮಂಜೂರು ಮಾಡಲು ಇದೇ ರೀತಿಯ ವ್ಯವಸ್ಥೆ ಅನುಷ್ಠಾನಕ್ಕೂ ನಿರ್ಧರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts