More

    ಆನ್‌ಲೈನ್‌ನಲ್ಲಿ 79 ಸಾವಿರ ರೂ. ವಂಚನೆ

    ಸಿದ್ದಾಪುರ: ಅಪರಿಚಿತರಿಗೆ ಒಟಿಪಿ, ಎಟಿಎಂ ಸಂಖ್ಯೆ ನೀಡುವುದು ಅಥವಾ ಮೊಬೈಲ್ ಫೋನ್‌ಗೆ ಬರುವ ಅನಾಮಿಕ ಲಿಂಕ್‌ಗಳ ಮೇಲೆ ಒತ್ತಿ ಹಣ ಕಳೆದುಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಬ್ಯಾಂಕ್ ಖಾತೆದಾರನ ಮೊಬೈಲ್ ಫೋನ್‌ಗೆ ಯಾವುದೇ ಸಂದೇಶ ಬಂದಿಲ್ಲ, ಒಟಿಪಿ ಕೇಳಿಲ್ಲ. ಆದರೂ ಖಾತೆಯಲ್ಲಿದ್ದ 79,900 ರೂ. ಆನ್‌ಲೈನ್ ಮೂಲಕ ವರ್ಗಾವಣೆಯಾಗಿದೆ.


    ಮಾಲ್ದಾರೆಯ ಬಾಡಗಬಾಣಂಗಾಲ ನಿವಾಸಿ ಎಂ.ಎ.ಶಮೀರ್ ಅವರ ಕೆನರಾ ಬ್ಯಾಂಕ್ ಸಿದ್ದಾಪುರದ ಶಾಖೆಯ ಉಳಿತಾಯ ಖಾತೆಯಿಂದ ಮೇ 7ರಂದು 50 ಸಾವಿರ ರೂ., 25 ಸಾವಿರ ರೂ. ಹಾಗೂ 4,900 ರೂ. ಆನ್‌ಲೈನ್ ಮೂಲಕ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ. ವಿಷಯ ತಿಳಿದ ತಕ್ಷಣ ಖಾತೆದಾರ ಸಿದ್ದಾಪುರ ಕೆನರಾ ಬ್ಯಾಂಕಿನ ವ್ಯವಸ್ಥಾಪಕರ ಗಮನಕ್ಕೆ ತಂದು, ಅವರ ಸೂಚನೆಯಂತೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


    ಮೇ 7ರಂದು ಬೆಳಗ್ಗೆ 8.30ರಲ್ಲಿ ಮೊಬೈಲ್ ಪೋನ್‌ನಿಂದ ವಾಟ್ಸ್‌ಆ್ಯಪ್ ಅಪ್ಲಿಕೇಶನ್ ಮಾಯವಾಗಿತ್ತು. ಬಳಿಕ 3 ಗಂಟೆಗಳ ನಂತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಸಂದೇಶಗಳು ಬರಲಾರಂಭಿಸಿತ್ತು. ಆದರೆ ತನಗೆ ಯಾವುದೇ ಕರೆಗಳು ಬಂದಿರಲಿಲ್ಲ, ಒಟಿಪಿ ಸಂದೇಶಗಳೂ ಬಂದಿರಲಿಲ್ಲ.

    ಹಾಗಾಗಿ ಕೂಡಲೇ ಬ್ಯಾಂಕ್ ಗಮನಕ್ಕೆ ತಂದು ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಅತ್ಯಂತ ಸುರಕ್ಷಿತವಾಗಿರುವ ಬ್ಯಾಂಕ್ ಅಪ್ಲಿಕೇಶನ್‌ನಿಂದ ಈ ರೀತಿ ಹಣ ವರ್ಗಾವಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇಡೀ ವರ್ಷ ಸಂಪಾದನೆ ಮಾಡಿದ ಹಣ ಕಳೆದುಕೊಂಡಿರುವುದರ ಬಗ್ಗೆ ಶಮೀರ್ ಮಾಧ್ಯಮಗಳೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.


    ಅನಾಮಿಕ ಲಿಂಕ್‌ಗಳನ್ನು ಒತ್ತುವುದು, ಒಟಿಪಿ ನೀಡುವುದು ಅಥವಾ ಬೇರೆಯವರಿಗೆ ಮೊಬೈಲ್ ನೀಡಿದರೆ ಈ ರೀತಿ ಸಂಭವಿಸಲು ಸಾಧ್ಯವಿದೆ. ಆದರೆ ಇದು ಯಾವುದೂ ಮಾಡದೆ ಹಣ ವರ್ಗಾವಣೆ ಆಗಿರುವುದು ಅಚ್ಚರಿಯಾಗಿದೆ. ಈ ಬಗ್ಗೆ ಹಣ ಕಳೆದುಕೊಂಡಿರುವವರಿಂದ ಲಿಖಿತ ಮನವಿಯನ್ನು ಪಡೆದು ಮುಖ್ಯ ಕಚೇರಿಗೆ ರವಾನಿಸಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts