More

    ಆನ್‌ಲೈನ್ ತರಗತಿಗೆ ಕಿಡಿಗೇಡಿಗಳ ಕಾಟ!

    ವೇಣುವಿನೋದ್ ಕೆ.ಎಸ್.ಮಂಗಳೂರು
    ಆನ್‌ಲೈನ್ ಕ್ಲಾಸ್ ಮಾಡುತ್ತಿರುವಾಗ ದಿಢೀರ್ ಪರದೆಯಲ್ಲಿ ಅಶ್ಲೀಲ ಚಿತ್ರ ಕಂಡುಬಂದರೆ, ಪಾಠ ಮಾಡುತ್ತಿರುವ ಪ್ರಾಧ್ಯಾಪಕರ ಸ್ಥಿತಿ ಹೇಗಿರಬೇಡ!, ಪ್ರಾಧ್ಯಾಪಕಿಯೊಬ್ಬರು ಆನ್‌ಲೈನ್ ಕ್ಲಾಸ್ ಮಾಡುತ್ತಿರುವಾಗ ತರಗತಿಯಲ್ಲಿ ಅರಚುವ, ಕಿರುಚುವ, ಬೊಬ್ಬೆ ಹಾಕುವ ಸದ್ದು ಕೇಳಿಬಂದರೆ?
    ಇಂತಹ ಅಪಸವ್ಯಗಳು ಸಾಕಷ್ಟು ನಡೆಯುತ್ತಿವೆ. ನಗರದ ಪದವಿ ಕಾಲೇಜೊಂದರಲ್ಲಿ ಆನ್‌ಲೈನ್ ಕ್ಲಾಸ್ ನಡೆಯುತ್ತಿರುವಾಗ ಯಾರೋ ದಿಢೀರ್ ಆಗಿ ಸ್ಕ್ರೀನ್ ಶೇರ್ ಮೂಲಕ ಅಶ್ಲೀಲ ಫೋಟೋ ಹಾಕಿದ್ದಾರೆ. ಅದನ್ನು ಎಲ್ಲ ವಿದ್ಯಾರ್ಥಿಗಳೂ ನೋಡಿದ್ದಾರೆ. ಇದು ಯಾರು ಮಾಡಿದ್ದಾರೆಂದು ತಿಳಿದುಕೊಳ್ಳಲು ಸಾಧ್ಯವಾಗದೆ ಪ್ರಾಧ್ಯಾಪಕರು ಒದ್ದಾಡಿದ್ದಾರೆ. ಕೆಲವು ವಿದ್ಯಾರ್ಥಿಗಳೇ ಮಾಡಿರಬಹುದು ಅಥವಾ ವಿದ್ಯಾರ್ಥಿಗಳಿಂದ ಕ್ಲಾಸಿನ ಪಾಸ್‌ವರ್ಡ್ ಪಡೆದ ಇತರ ಕಿಡಿಗೇಡಿಗಳು ಮಾಡಿರುವ ಸಾಧ್ಯತೆಯೂ ಇದೆ.

    ಮಕ್ಕಳೇ ಸ್ಮಾರ್ಟ್ ಆಗಿರೋದು ಕಾರಣ
    ಐಟಿ ತಜ್ಞರ ಪ್ರಕಾರ ಇಂತಹ ಆಭಾಸಗಳಿಗೆ ಆನ್‌ಲೈನ್ ವಿಚಾರಗಳಲ್ಲಿ ಪ್ರಾಧ್ಯಾಪಕರು ಅಪ್‌ಡೇಟ್ ಆಗದಿರುವುದು ಮುಖ್ಯ ಕಾರಣ. ಏಪ್ರಿಲ್‌ನಿಂದ ನಮ್ಮಲ್ಲಿ ಆನ್‌ಲೈನ್ ಕ್ಲಾಸ್‌ಗಳು ಹೆಚ್ಚಾಗಿ ಚಾಲ್ತಿಗೆ ಬಂದವು. ಅಲ್ಲಿಯವರೆಗೆ ಯಾರೂ ಇದರ ಬಗ್ಗೆ ಗಮನ ಹರಿಸಿರಲಿಲ್ಲ. ಶುರುವಾದಾಗಿನಿಂದಲೂ ಇಂಟರ್‌ನೆಟ್ ನೆಟ್‌ವರ್ಕ್ ಸಮಸ್ಯೆ, ಕ್ಲಾಸ್ ಮಾಡುವ ಬಗ್ಗೆ ಅರೆಬರೆ ಜ್ಞಾನದಿಂದ ತೊಂದರೆಯಾದರೆ ಕಳೆದ ಕೆಲ ತಿಂಗಳಿನಿಂದ ಈ ರೀತಿಯ ಹ್ಯಾಕಿಂಗ್ ಸಮಸ್ಯೆ ಬಗ್ಗೆ ದೂರು ಬಂದಿದೆ ಎನ್ನುತ್ತಾರೆ ಸೈಬರ್ ತಜ್ಞ, ಪ್ರಾಧ್ಯಾಪಕ ಪ್ರೊ.ಅನಂತ ಪ್ರಭು. ಗೂಗಲ್‌ಮೀಟ್, ಜೂಮ್ ಮೀಟ್, ಸಿಸ್ಕೊ ಇತ್ಯಾದಿ ಆನ್‌ಲೈನ್ ವೇದಿಕೆಗಳಲ್ಲಿ ಇರುವ ಆಯ್ಕೆಗಳ ಸಮರ್ಪಕ ಮಾಹಿತಿ ಇಲ್ಲದ ಕಾರಣ ಈ ರೀತಿಯ ಅಶ್ಲೀಲ ಫೋಟೋ ಪ್ರಸಾರ, ವಿದ್ಯಾರ್ಥಿಗಳಿಂದ ಕಿರಿಕ್ ನಡೆಯುತ್ತಿರುತ್ತದೆ ಎನ್ನುತ್ತಾರೆ ಪ್ರಭು.

    ಪಾಸ್‌ವರ್ಡ್ ಶೇರ್ ಮಾಡ್ಬೇಡಿ
    ಆನ್‌ಲೈನ್ ಕ್ಲಾಸ್ ಅಥವಾ ಸೆಮಿನಾರ್‌ಗಳಿಗೆ ಪ್ರಕ್ರಿಯೆ ಫಾಲೋ ಮಾಡದಿದ್ದರೆ ಯಾರೂ ಒಳನುಗ್ಗಬಹುದು. ಮೀಟಿಂಗ್ ರೂಂ ಕ್ರಿಯೇಟ್ ಮಾಡುವಾಗ ಅದಕ್ಕೆ ಪಾಸ್‌ವರ್ಡ್ ಹಾಕಲೇಬೇಕು, ಇಲ್ಲವಾದರೆ ಯಾರೂ ಮೀಟಿಂಗ್ ಐಡಿ ಸೃಷ್ಟಿಸಿ ಮೀಟಿಂಗ್ ರೂಂ ಒಳಗೆ ಸೇರಿಕೊಳ್ಳುವ ಸಾಧ್ಯತೆ ಇದೆ. ಐಡಿ, ಪಾಸ್‌ವರ್ಡ್‌ಗಳನ್ನು ನಮೂದಿಸಿರುವ ಪೋಸ್ಟರ್‌ಗಳನ್ನು ಹಂಚಲೇಬಾರದು. ವೈಯಕ್ತಿಕವಾಗಿ ಇ-ಮೇಲ್ ಮೂಲಕ ಕಳುಹಿಸುವುದು ಸೂಕ್ತ.

    ಮೀಟಿಂಗ್ ಮೊದಲು ವೈಟಿಂಗ್
    ಆನ್‌ಲೈನ್ ಕ್ಲಾಸ್ ಮೀಟಿಂಗ್ ರೂಮ್‌ಗೆ ವಿದ್ಯಾರ್ಥಿ ಪ್ರವೇಶಿಸುವ ಮೊದಲು ವೈಟಿಂಗ್ ರೂಮ್‌ಗೆ ಹೋಗುವ ಆಯ್ಕೆ ಮಾಡಿಕೊಳ್ಳಿ. ಯೂಸರ್‌ನೇಮ್, ಪಾಸ್‌ವರ್ಡ್ ಹಾಕಿದಾಗ ವೈಟಿಂಗ್ ರೂಂಗೆ ಬರುತ್ತಾರೆ, ಅಲ್ಲಿ ಉಪನ್ಯಾಸಕರು ತಮ್ಮ ವಿದ್ಯಾರ್ಥಿ ಹೌದೇ ಅಲ್ಲವೇ ಎನ್ನುವುದನ್ನು ಪರಿಶೀಲಿಸಿಕೊಂಡು ಅವರನ್ನು ಮೀಟಿಂಗ್ ರೂಂಗೆ ಸೇರಿಸಿಕೊಳ್ಳಬಹುದು, ಇದರಿಂದಲೂ ಕಿಡಿಗೇಡಿಗಳನ್ನು ನಿಯಂತ್ರಿಸಬಹುದು. ಆನ್‌ಲೈನ್ ಕ್ಲಾಸ್ ಬಗ್ಗೆ ರಾಜ್ಯ ಸರ್ಕಾರ ಮಾಡಿರುವ ಮಾಹಿತಿಯುಕ್ತ ಲಿಂಕ್ ಇಲ್ಲಿದೆ. ಪ್ರೊ.ಅನಂತ ಪ್ರಭು ಈ ಮಾಹಿತಿ ಹಂಚಿಕೊಂಡಿದ್ದಾರೆ.

    ಆನ್‌ಲೈನ್ ಕ್ಲಾಸ್ ವೇಳೆ ಸ್ಕ್ರೀನ್ ಶೇರಿಂಗ್ ಮಾಡಲು ಯಾವ ವಿದ್ಯಾರ್ಥಿಗೂ ಅವಕಾಶ ಕೊಡಬಾರದು, ಅದರಿಂದಾಗಿಯೇ ಕೆಲವೊಮ್ಮೆ ಆಭಾಸಗಳು ಉಂಟಾಗುತ್ತವೆ. ಅದಕ್ಕಾಗಿ ವಿದ್ಯಾರ್ಥಿಗಳ ಸ್ಕ್ರೀನ್ ಶೇರ್ ಆಯ್ಕೆಯನ್ನು ಪ್ರಾಧ್ಯಾಪಕರೇ ಡಿಸೇಬಲ್ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳ ಕಿರುಚಾಟ, ಗಲಾಟೆ ನಿಯಂತ್ರಣಕ್ಕೆ ಮೈಕನ್ನೂ ಡಿಸೇಬಲ್ ಮಾಡಬಹುದು.
    – ಪ್ರೊ.ಅನಂತ ಪ್ರಭು, ಸೈಬರ್ ತಜ್ಞ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts