More

    ಅಧೋಗತಿಯತ್ತ 7 ವಿಶ್ವವಿದ್ಯಾಲಯಗಳು ! ; ಕತ್ತಲೆಯತ್ತ ರಾಜ್ಯದ ಸಾವಿರಾರು ಸಿಬ್ಬಂದಿ, ವಿದ್ಯಾರ್ಥಿಗಳ ಭವಿಷ್ಯ; ಹತ್ತು ತಿಂಗಳಿಂದ ಆಗಿಲ್ಲ ಸಂಬಳ

    ಕೇಶವಮೂರ್ತಿ ವಿ.ಬಿ. ಹಾವೇರಿ

    ‘ಜಿಲ್ಲೆಗೊಂದು ವಿಶ್ವವಿದ್ಯಾಲಯ’ ಎಂಬ ಪರಿಕಲ್ಪನೆಯಡಿ ಕಳೆದ ವರ್ಷ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 7 ನೂತನ ವಿಶ್ವವಿದ್ಯಾಲಯಗಳು ಸೂಕ್ತ ಅನುದಾನ, ಸಂಬಳ ಇಲ್ಲದೇ ಅಧೋಗತಿಯತ್ತ ಸಾಗಿವೆ. ಕಾಲೇಜಿಗಿಂತಲೂ ಕಡೆಯಾಗಿರುವ ಈ ವಿವಿಗಳಲ್ಲಿ ಕಂಪ್ಯೂಟರ್, ಪ್ರಿಂಟರ್‌ನಂಥ ಕನಿಷ್ಠ ಮೂಲಸೌಕರ್ಯವೂ ಇಲ್ಲದೇ ವಿದ್ಯಾರ್ಥಿಗಳ ಭವಿಷ್ಯ ಕಗ್ಗತ್ತಲೆಯತ್ತ ಸಾಗುತ್ತಿದೆ.
    ಅಪ್ಪ- ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ನಡುವಿನ ರಾಜಕೀಯ ಮುಸುಕಿನ ಗುದ್ದಾಟದಲ್ಲಿ 7 ವಿವಿಗಳು ಸೊರಗುತ್ತಿರುವುದು ಖೇದಕರ.
    ಸ್ಥಳೀಯ ಮಟ್ಟದಲ್ಲಿ ಉನ್ನತ ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ 2022ರ ನವೆಂಬರ್‌ನಲ್ಲಿ 7 ಹೊಸ ವಿಶ್ವವಿದ್ಯಾಲಯ ಆರಂಭಿಸಿತ್ತು. ಮಾರ್ಚ್ 21, 2023ರಂದು ಅಧಿಕೃತವಾಗಿ ಚಾಲನೆ ನೀಡಿತ್ತು. ಹಾವೇರಿ, ಬಾಗಲಕೋಟ, ಬೀದರ್, ಕೊಪ್ಪಳ, ಹಾಸನ, ಕೊಡಗು, ಚಾಮರಾಜನಗರ ವಿಶ್ವವಿದ್ಯಾಲಯಗಳು ಹೊಸ ಕನಸಿನೊಂದಿಗೆ ತಲೆಎತ್ತಿದ್ದವು. ಆದರೆ, ಒಂದು ವರ್ಷ ಕಳೆಯುವಷ್ಟರಲ್ಲಿ ಇವುಗಳ ನಾಮಫಲಕ ಮಾತ್ರ ಬದಲಾಗಿದೆ. ಬಹುತೇಕ ಪಿಜಿ ಸೆಂಟರ್‌ಗಳೇ ಹೊಸ ವಿವಿಗಳಾಗಿವೆ. ಹೊಸದಾಗಿ ಕುಲಪತಿ, ಕುಲಸಚಿವರನ್ನು ನೇಮಿಸಿದ್ದು ಬಿಟ್ಟರೆ, ಯಾವ ಘನಕಾರ್ಯವೂ ಎರಡೂ ಸರ್ಕಾರಗಳಿಂದ ಆಗಿಲ್ಲ. 10 ತಿಂಗಳಿಂದ ಈ ವಿವಿಗಳ ಕುಲಪತಿ, ಕುಲಸಚಿವರು ಸೇರಿದಂತೆ ಸಿಬ್ಬಂದಿಯ ಸಂಬಳವೂ ಆಗಿಲ್ಲ.
    ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ವಿಶ್ವವಿದ್ಯಾಲಯಗಳಿಗೆ ತಲಾ ಎರಡು ಕೋಟಿ ರೂ. ಅನುದಾನ ಘೋಷಿಸಿದ್ದರು. ಅನುದಾನ ಬಿಡುಗಡೆ ವಿಳಂಭ ಮಾಡಿದರು. ನಂತರ ಬಂದ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸಲು ಆರಂಭಿಸಿತು. ಈ ವಿವಿಗಳನ್ನು ಮುಚ್ಚುವ ಕುರಿತು ಚಿಂತನೆ ನಡೆಸಿತೇ ಹೊರತು ಕಾಯಕಲ್ಪ ಕೊಡುವ ಕೆಲಸ ಮಾಡಲೇ ಇಲ್ಲ.
    ಇಲ್ಲಿನ ಕುಲಪತಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಶಾಭಾವನೆಯಿಂದ ಇದ್ದ ಕನಿಷ್ಠ ಸೌಲಭ್ಯದಲ್ಲೇ ಹಾಗೋ ಹೀಗೋ ದಿನ ಕಳೆಯುತ್ತಿದ್ದಾರೆ. ರಾಜ್ಯ ಸರ್ಕಾರ ತುರ್ತಾಗಿ, ಅಗತ್ಯ ಅನುದಾನ, ಸಂಬಳ ಬಿಡುಗಡೆ ಮಾಡದಿದ್ದರೆ, ಸಿಡಿದೇಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
    ಮನೆಯ ಲ್ಯಾಪ್‌ಟಾಪ್ ಬಳಕೆ
    ಹಾವೇರಿ ವಿವಿ ಸೇರಿದಂತೆ ಇತರ ವಿವಿಗಳಲ್ಲಿ ಪ್ರಮುಖವಾಗಿ ಕಂಪ್ಯೂಟರ್, ಪ್ರಿಂಟರ್‌ಗಳ ಸಮಸ್ಯೆ ತಲೆದೋರಿದೆ. ಇರುವ ಕಂಪ್ಯೂಟರ್‌ಗಳು ಕೆಟ್ಟು ಹೋಗಿವೆ. ಹಾಗಾಗಿ, ಇಲ್ಲಿನ ಸಿಬ್ಬಂದಿ ಮನೆಯಿಂದ ಸ್ವಂತ ಲ್ಯಾಪ್‌ಟಾಪ್ ತಂದು ಕೆಲಸ ಮಾಡಿಕೊಳ್ಳುವ ದುರ್ಗತಿ ಬಂದಿದೆ.
    ಕ್ರೀಡೆ, ಪರೀಕ್ಷೆಗೂ ಅಡ್ಡಿ
    ಹೊಸ ವಿವಿಗಳಲ್ಲಿ ಇಷ್ಟೊತ್ತಿಗಾಗಲೇ ಮೊದಲ ಸೆಮಿಸ್ಟರ್ ಪರೀಕ್ಷೆ ಮುಗಿಯಬೇಕಿತ್ತು. ಆದರೆ, ಪರೀಕ್ಷಾಂಗ ವಿಭಾಗದಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಿಂಟರ್, ಕೋಡಿಂಗ್, ಡಿಕೋಡಿಂಗ್ ಯಂತ್ರಗಳು, ಅಗತ್ಯ ಸಿಬ್ಬಂದಿ ಇಲ್ಲದ ಕಾರಣ ಪರೀಕ್ಷೆ ನಡೆಸುವುದೇ ದುಸ್ತರ ಎನ್ನುವಂತಾಗಿದೆ. ವಿವಿಧ ಕ್ರೀಡೆಗಳಲ್ಲಿ ವಿಜೇತ ತಂಡಗಳನ್ನು ಬೇರೆಡೆ ಕಳುಹಿಸಲೂ ವಿವಿಗಳಿಗೆ ಅನುದಾನ ಇಲ್ಲದಾಗಿದೆ. ಇತ್ತೀಚೆಗಷ್ಟೇ ಹಾವೇರಿ ವಿವಿ ಖೋಖೋ ತಂಡ ಕೇರಳ ಟೂರ್ನಿಯಿಂದ ವಂಚಿತವಾಗಿತ್ತು.
    ಮುಚ್ಚಿ ಇಲ್ಲವೇ ಅನುದಾನ ಕೊಡಿ
    ವಿಶ್ವವಿದ್ಯಾಲಯ ಎಂದರೆ ಅದಕ್ಕೆ ಅದರದ್ದೇ ಆದ ಘನತೆ ಇರುತ್ತದೆ. 7 ಹೊಸ ವಿವಿಗಳು ಸಮಸ್ಯೆಗಳಿಂದ ತುಂಬಿ ತುಳುಕುತ್ತಿವೆ. ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂ. ವ್ಯಯಿಸುವ ಸರ್ಕಾರ ರಾಜಕೀಯ ವೈಷಮ್ಯ ಬಿಟ್ಟು ಹೊಸ ವಿವಿಗಳಿಗೆ ಅಗತ್ಯ ಅನುದಾನ, ಸಿಬ್ಬಂದಿ ನೇಮಿಸಬೇಕು. ಇಲ್ಲವೇ 7 ವಿವಿಗಳನ್ನು ಮುಚ್ಚಿ ಹಳೆಯ ವಿವಿಗಳಿಗೆ ಸೇರಿಸುವ ದಿಟ್ಟ ನಿರ್ಧಾರವನ್ನಾದರೂ ತೆಗೆದುಕೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ‘ವಿಜಯವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

    ಕೋಟ್:
    ಅಗತ್ಯ ಸಿಬ್ಬಂದಿ ನೇಮಕ ಹಾಗೂ ಮೂಲಸೌಕರ್ಯ ಕಲ್ಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಇದೆ. ಫೆಬ್ರವರಿ ಅಂತ್ಯದಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಸಲಾಗುವುದು.
    – ಪ್ರೊ.ಸುರೇಶ ಜಂಗಮಶೆಟ್ಟಿ, ಕುಲಪತಿ, ಹಾವೇರಿ ವಿಶ್ವವಿದ್ಯಾಲಯ

    ಕೋಟ್:
    ಹೊಸ ವಿಶ್ವವಿದ್ಯಾಲಯದ ಸಿಬ್ಬಂದಿಯ ಸಂಬಳದ ಅನುದಾನ ಸರ್ಕಾರದಿಂದ ಈಗಾಗಲೇ ಬಿಡುಗಡೆಯಾಗಿದೆ. ಎಚ್‌ಆರ್‌ಎಂಎಸ್ ಲಿಂಕ್, ಮತ್ತಿತರ ಪ್ರಕ್ರಿಯೆ ಹಿನ್ನೆಲೆ ಸ್ವಲ್ಪ ತಡವಾಗಿದೆ. ಈ ವಾರದೊಳಗೆ ಜಮೆ ಮಾಡಲಾಗುವುದು.
    – ಪ್ರಕಾಶ ಹೊಸಮನಿ, ಜಂಟಿ ನಿರ್ದೇಶಕ (ಪ್ರಭಾರ), ಕಾಲೇಜು ಶಿಕ್ಷಣ ಇಲಾಖೆ

    ಕೋಟ್:
    ಇತ್ತೀಚೆಗೆ ನಾನು ಹಾವೇರಿ ವಿಶ್ವವಿದ್ಯಾಲಯಕ್ಕೆ ಭೇಟಿಯಾಗಿ ಪರಿಶೀಲಿಸಿದಾಗ ಅಲ್ಲಿನ ಸಮಸ್ಯೆಗಳ ದರ್ಶನವಾಯಿತು. ಕಂಪ್ಯೂಟರ್ ಲ್ಯಾಬ್‌ಗಾಗಿ ತುರ್ತಾಗಿ 5.50 ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಂಡಿದ್ದೇನೆ. ಏಳು ವಿವಿಗಳ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಸರಿಪಡಿಸಬೇಕು.
    – ಎಸ್.ವಿ.ಸಂಕನೂರ, ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts