More

    ಆನ್‌ಲೈನ್ ತರಗತಿಗೆ ಮರ ಹತ್ತಿದರು

    ಸುಬ್ರಹ್ಮಣ್ಯ: ಸುಳ್ಯ ತಾಲೂಕು ಕೇಂದ್ರದ ಕಟ್ಟಕಡೆಯ ಗ್ರಾಮ ಬಾಳುಗೋಡು. ಈ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದೆ. ಈ ಭಾಗದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಈಗ ಅನಿವಾರ್ಯವಾಗಿ ಗುಡ್ಡಕ್ಕೆ ತೆರಳಿ ಮರ ಹತ್ತಿ ನೆಟ್‌ವರ್ಕ್‌ಗಾಗಿ ಸರ್ಕಸ್ ಮಾಡಿ ಆನ್‌ಲೈನ್ ಬೋಧನೆ ಕೇಳುತ್ತಿದ್ದಾರೆ.

    ಬಾಳುಗೋಡು ಪ್ರದೇಶದಲ್ಲಿ ಯಾವುದೇ ಕಂಪನಿಯ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್‌ವರ್ಕ್ ಇಲ್ಲದಿರುವುದರಿಂದ ಈ ಹಿಂದಿನಿಂದಲೇ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದರು. ಈಗ ಲಾಕ್‌ಡೌನ್ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಕಲಿಯಬೇಕಾದುದರಿಂದ ನೆಟ್‌ವರ್ಕ್‌ನ ಮೊರೆ ಹೋಗುವುದು ಅನಿವಾರ್ಯವಾಗಿದೆ. ಈ ಪರಿಸರದ ವಿದ್ಯಾರ್ಥಿಗಳು ಗುಡ್ಡ ಹತ್ತಿ ನೆಟ್‌ಗಾಗಿ ತಡಕಾಡುವಂತಾಗಿದೆ. ಬೆಟ್ಟುಮಕ್ಕಿಯ ವಿದ್ಯಾರ್ಥಿಗಳು ಪಕ್ಕದ ಕಾಡಿನಲ್ಲಿ ಟೆಂಟ್ ನಿರ್ಮಿಸಿ ಆನ್‌ಲೈನ್ ಪಾಠ ಪ್ರವಚನ ಆಲಿಸುತ್ತಿದ್ದರೆ, ಇನ್ನು ಕೆಲವರು ಕಾಡಿನೊಳಗೆ ಮರ ಏರಿ ಮೊಬೈಲ್‌ನಲ್ಲಿ ಪಾಠ ಕೇಳುತ್ತಿದ್ದಾರೆ.

    ವಿದ್ಯಾರ್ಥಿಗಳಿಗೆ ಸಂಕಷ್ಟ: ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನೇ ನೋಡಲಾಗದ ಸ್ಥಿತಿ ನಮ್ಮದಾಗಿದೆ. ಮಾತನಾಡಲು ನೆಟ್‌ವರ್ಕ್ ಸಿಗುತ್ತಿಲ್ಲ. ಇನ್ನು ಇಂಟರ್ನೆಟ್ ಬಳಸುವುದು ಕನಸಿನ ಮಾತಾಗಿದೆ. ಲಾಕ್‌ಡೌನ್ ಬಳಿಕ ವಿದ್ಯಾಭ್ಯಾಸಕ್ಕಾಗಿ ಇಂಟರ್ನೆಟ್ ಮೊರೆ ಹೋಗುವುದು ಅನಿವಾರ್ಯವಾದರೂ, ನೆಟ್‌ವರ್ಕ್ ಸಿಗದ ಕಾರಣ ಸಮಸ್ಯೆ ಎದುರಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

    ಬಾಳುಗೋಡು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿಯೂ ನೆಟ್‌ವರ್ಕ್ ಸಿಗುತ್ತಿಲ್ಲ. ಇದರಿಂದ ತುರ್ತು ಸಂದರ್ಭ ಹೆಚ್ಚು ಸಂಕಷ್ಟ ಉಂಟಾಗುತ್ತದೆ. ಈಗ ವಿದ್ಯಾರ್ಥಿಗಳು ನೆಟ್‌ವರ್ಕ್ ಇಲ್ಲದೆ ಪಾಠ ಪ್ರವಚನ ಕೇಳಲು ಕಷ್ಟಪಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಈ ಸಂಕಷ್ಟ ಅರಿತು ಜನಪ್ರತಿನಿಧಿಗಳು ಇಲ್ಲಿ ಮೊಬೈಲ್ ಟವರ್ ನಿರ್ಮಿಸಲು ಆದ್ಯತೆ ಮೇರೆಗೆ ಪ್ರಯತ್ನಿಸಿದರೆ ಒಳಿತು.
    ಜಯಂತ ಬಾಳುಗೋಡು, ಸ್ಥಳೀಯರು

    ಅತ್ತ ಕರೊನಾದ ಭಯವಾದರೆ, ಇತ್ತ ವಿಷಯ ಜ್ಞಾನ ಪಡೆಯಬೇಕಾದ ಚಿಂತೆ. ಕನಿಷ್ಠ ನೆಟ್‌ವರ್ಕ್ ನಾವಿರುವ ಮನೆಗಳಲ್ಲಿ ಸಿಗುತ್ತಿದ್ದರೆ ಪಠ್ಯ ಜ್ಞಾನವನ್ನು ಪಡೆಯಲು ಅನುಕೂಲವಾಗುತ್ತಿತ್ತು.
    ಆದಿತ್ಯ ಎಂ.ಎಸ್., ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts