More

    ಈರುಳ್ಳಿ ಬೆಳೆ ನಷ್ಟ, ದರ ಬಲು ಗರಿಷ್ಠ

    ಬೆಳಗಾವಿ: ಧಾರಾಕಾರ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾನಿ ಹಾಗೂ ಉತ್ಪಾದನೆ ಕುಸಿತದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಈರಳ್ಳಿ ದರ ಗಗನಮುಖಿಯಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿಗೆ 70ರಿಂದ 75 ರೂ. ದರ ನಿಗದಿಸಲಾಗಿದೆ. ಬೆಳೆ ನಷ್ಟದಿಂದ ರೈತರಿಗೆ ಹಾಗೂ ದರ ಏರಿಕೆಯಿಂದ ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದೆ.

    ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಅಲ್ಲದೆ, ಒಕ್ಕಣೆ ಮಾಡಲಾಗಿದ್ದ ಸಾವಿರಾರು ಕ್ವಿಂಟಾಲ್ ಈರುಳ್ಳಿ ಬೆಳೆ ಮಳೆಗೆ ನೆನೆದು ಕೊಳೆತಿದೆ.

    ಕ್ವಿಂಟಾಲ್‌ಗೆ 6,800 ರೂ.: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ಎಪಿಎಂಸಿಯಲ್ಲಿ ಶನಿವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಾಲ್ ಈರುಳ್ಳಿ 6,800 ರೂ. ವರೆಗೆ ಮಾರಾಟವಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ 4,500 ಕ್ವಿಂಟಾಲ್ ಈರುಳ್ಳಿ ಆವಕವಾಗಿತ್ತು. ಇಷ್ಟು ಕನಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬಂದಿರುವುದು ಉತ್ಪಾದನೆಯ ಕುಸಿತಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ 20 ಸಾವಿರ ಕ್ವಿಂಟಾಲ್‌ನಷ್ಟು ಈರುಳ್ಳಿ ಬಂದಿತ್ತು.

    ಸರಾಸರಿ ದರ: ಶನಿವಾರದ ಈರುಳ್ಳಿ ಹರಾಜಿನಲ್ಲಿ ಉತ್ತಮ ದರ್ಜೆಯ ಕ್ವಿಂಟಲ್ ಈರುಳ್ಳಿ ದರ 6,000-6,500ರಿಂದ 6,800 ರೂ., ಮಧ್ಯಮ ಗಾತ್ರದ ಈರುಳ್ಳಿ 4,500 ರಿಂದ 5,800 ರೂ. ಹಾಗೂ ಸಣ್ಣ ಗಾತ್ರದ ಈರುಳ್ಳಿ 3,200ರಿಂದ 4,000 ರೂ.ವರೆಗೆ ಮಾರಾಟವಾಗಿದೆ. ರಾಜ್ಯದ ಕೃಷಿ ಉತ್ಪನ್ನ ಸಗಟು ಮಾರುಕಟ್ಟೆಗಳಲ್ಲಿ ಜೂನ್ ಮತ್ತು ಆಗಸ್ಟ್ ತಿಂಗಳ ನಡುವಿನ ಅವಧಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 1,250ರಿಂದ 2,120 ರೂ. ವರೆಗೆ ಗರಿಷ್ಠ ಬೆಲೆಯಿತ್ತು ಎಂದು ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

    ಖರೀದಿಗೆ ವ್ಯಾಪಾರಿಗಳಲ್ಲಿ ಪೈಪೋಟಿ: ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಎಪಿಎಂಸಿಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಅಲ್ಲದೆ, ಇದೀಗ ಹೋಟೆಲ್ ತೆರದಿದ್ದು, ಸಭೆ-ಸಮಾರಂಭಗಳೂ ಜರುಗುತ್ತಿವೆ. ಹೀಗಾಗಿ ಈರುಳ್ಳಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೇಡಿಕೆ ತಕ್ಕಂತೆ ಲಭ್ಯವಾಗುತ್ತಿಲ್ಲ. ಇದರ ಮಧ್ಯೆಯೇ ಗೋವಾ, ಮಹಾರಾಷ್ಟ್ರದ ವ್ಯಾಪಾರಿಗಳೂ ಸಹ ಬೆಳಗಾವಿಯಲ್ಲಿ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಹೀಗಾಗಿ ವ್ಯಾಪಾರಿಗಳ ನಡುವೆ ಈರುಳ್ಳಿ ಖರೀದಿ ಪೈಪೋಟಿ ಏರ್ಪಟ್ಟಿದೆ. ಮುಂದಿನ ಎರಡು ವಾರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬರದಿದ್ದಲ್ಲಿ ಕ್ವಿಂಟಾಲ್ ಈರುಳ್ಳಿ ದರ 10ರಿಂದ 15 ಸಾವಿರ ರೂ. ಗಡಿ ದಾಟಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಬೆಳಗಾವಿಯ ಈರುಳ್ಳಿ ವ್ಯಾಪಾರಿ ರಾಜಾಸಾಬ್ ನದ್ಾ ಹಾಗೂ ಮಾರುತಿ ಸುಂಡೇಕರ್.

    ಧಾರಾಕಾರ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾನಿಗೊಂಡಿದ್ದು ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಹೀಗಾಗಿ ವಾರದಿಂದ ವಾರಕ್ಕೆ ದರದಲ್ಲಿ ಏರಿಕೆ ಆಗುತ್ತಲೇ ಇದೆ.
    | ಡಾ. ಕೆ.ಕೋಡಿಗೌಡ ಎಪಿಎಂಸಿ ಕಾರ್ಯದರ್ಶಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts