More

    ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಸಿಬ್ಬಂದಿ ಎಡವಟ್ಟು: ಒಬ್ಬರ ಪರಿಹಾರ ಇನ್ನೊಬ್ಬರ ಖಾತೆಗೆ !

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ರಸ್ತೆ ನಿರ್ವಣಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ತಾಲೂಕಿನ ರೈತರೊಬ್ಬರು 3 ವರ್ಷದಿಂದ ಚಿತ್ರದುರ್ಗದ ಕಚೇರಿಗೆ ಅಲೆದಾಡುವಂತಾಗಿದೆ.

    ತಾಲೂಕಿನ ಹೂಲಿಹಳ್ಳಿ ಗ್ರಾಮದ ರೈತ ರವಿ ಅಜರೆಡ್ಡಿ ಎಂಬುವರ ಕಜ್ಜರಿ ಗ್ರಾಮ ವ್ಯಾಪ್ತಿಯ ಸರ್ವೆ ನಂ. 193/3ರ 720 ಚ.ಮೀ. ಜಮೀನಿನನ್ನು ಎನ್​ಎಚ್-48 ರಸ್ತೆ ಅಗಲೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಗಳು 3 ವರ್ಷದ ಹಿಂದೆ ಸ್ವಾಧೀನ ಪಡಿಸಿಕೊಂಡಿದ್ದರು.

    ಆಗ ಸರ್ಕಾರದ ಮಾರುಕಟ್ಟೆಗೆ ಬೆಲೆಯಂತೆ ಜಮೀನಿನ ಬೆಲೆ 68 ಸಾವಿರ ರೂಪಾಯಿ ಹಾಗೂ ಗಿಡ-ಮರ, ಎಂ.ಎಸ್. ಗೇಟ್, ಪಿಲ್ಲರ್, ತಂತಿಬೇಲಿ ಬೆಲೆ 1.32 ಲಕ್ಷ ರೂ. ಸೇರಿ ಒಟ್ಟು 2 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಪ್ರಾಧಿಕಾರ ಹೇಳಿತ್ತು. ಅದರಲ್ಲಿ 68 ಸಾವಿರ ರೂಪಾಯಿ ರೈತ ರವಿ ಅಜರೆಡ್ಡಿ ಖಾತೆಗೆ ಜಮಾ ಮಾಡಲಾಗಿದೆ. ಆದರೆ, ಬಾಕಿ ಮೊತ್ತ 1.32 ಲಕ್ಷ ರೂಪಾಯಿ ಜಮಾ ಆಗಿರಲಿಲ್ಲ. ಈ ಕುರಿತು ರೈತ ರವಿ ಚಿತ್ರದುರ್ಗದಲ್ಲಿರುವ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದಾಗ, ಇವರ ಬದಲು ಪಕ್ಕದ ಜಮೀನಿನ ರೈತ ಅಬೀಬುಲ್ಲಾ ಕಂಬಳಿ ಅವರ ಖಾತೆಗೆ ಹಣ ಜಮಾ ಆಗಿರುವುದು ತಿಳಿದು ಬಂದಿದೆ.

    ಆದ್ದರಿಂದ ಬಾಕಿಯಿರುವ ಪರಿಹಾರವನ್ನು ನಮ್ಮ ಖಾತೆಗೆ ಜಮಾ ಮಾಡಿ ಎಂದು ರೈತ ರವಿ ಕಳೆದ ಮೂರು ವರ್ಷದಿಂದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ರೈತ ಅಬೀಬುಲ್ಲಾ ಕಂಬಳಿಯವರಿಗೆ ಹಣ ಮರಳಿ ಕೊಡುವಂತೆ 2021 ಮೇ 21ರಂದು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಈವರೆಗೂ ಜಮೀನು ಕಳೆದುಕೊಂಡ ನನಗೆ ನಯಾಪೈಸೆ ದೊರೆತಿಲ್ಲ ಎಂದು ರೈತ ರವಿ ಅಜರೆಡ್ಡಿ ಆರೋಪಿಸಿದ್ದಾರೆ.

    ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದ ಸರ್ವೆಗೆ ಬಂದಾಗ ಎಲ್ಲ ದಾಖಲೆಗಳನ್ನು ಸರಿಯಾಗಿ ನೀಡಿದ್ದೇವೆ. ಭೂಮಿಯ ಪರಿಹಾರ ಸರಿಯಾಗಿ ಹಾಕಿದ ಅಧಿಕಾರಿಗಳು ಬಾಕಿಯಿದ್ದ ಪರಿಹಾರ ಹಣವನ್ನು ಪಕ್ಕದ ಜಮೀನಿನ ರೈತನ ಖಾತೆಗೆ ಹಾಕಿ ಎಡವಟ್ಟು ಮಾಡಿದ್ದಾರೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ 3 ವರ್ಷದಿಂದ ಅಲೆದಾಡಿದರೂ ನಮಗೆ ನ್ಯಾಯ ಸಿಕ್ಕಿಲ್ಲ.
    | ರವಿ ಅಜರೆಡ್ಡಿ, ಭೂಮಿ ಕಳೆದುಕೊಂಡ ರೈತ

    ರಾಣೆಬೆನ್ನೂರಿನ ರೈತ ರವಿ ಅಜರೆಡ್ಡಿಯವರ ಪರಿಹಾರ ಹಣ ಕಣ್ತಪ್ಪಿನಿಂದ ಪಕ್ಕದ ರೈತನ ಖಾತೆಗೆ ಜಮಾ ಆಗಿದೆ. ಅವರಿಗೆ ಹಣ ವಾಪಸ್ ನೀಡುವಂತೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದೇವೆ. ಮುಂದಿನ ಒಂದು ವಾರದೊಳಗೆ ಮೂಲ ರೈತನ ಖಾತೆಗೆ ಪರಿಹಾರ ಜಮಾ ಮಾಡಲಾಗುವುದು.
    | ಲಕ್ಷ್ಮಣಕುಮಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶಿರಸ್ತೇದಾರ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts