More

    ಕ್ರಿಕೆಟ್​ ಬೆಟ್ಟಿಂಗ್​ ಸಾಲ ತೀರಿಸಲು ದೊಡ್ಡಮ್ಮನ ಮನೆಗೇ ಕನ್ನ ಹಾಕಿದ; ಆಮೇಲೇನಾಯಿತು?

    ಬೆಂಗಳೂರು: ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ಪರದಾಡುತ್ತಿದ್ದ ಯುವಕನೊಬ್ಬನಿಗೆ, ಒಂದು ವರ್ಷದ ಹಿಂದೆ ದೊಡ್ಡಮ್ಮನ ಮನೆಯಲ್ಲಿ ಕಂಡಿದ್ದ ಚಿನ್ನಾಭರಣ ನೆನಪಾಗಿದೆ. ಅಂದು ಕಂಡಿದ್ದ ಚಿನ್ನಾಭರಣಗಳನ್ನು ಕದ್ದಿದ್ದ ಆತ ಈಗ ಪೊಲೀಸರ ಅತಿಥಿ.

    ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ದೊಡ್ಡಮ್ಮನ ಮನೆಗೆ ಕನ್ನ ಹಾಕಿದ್ದ ಪಾಪರೆಡ್ಡಿಪಾಳ್ಯ ನಿವಾಸಿ ಅಭಿಷೇಕ್ (28) ಎಂಬಾತನನ್ನು ಬಂಧಿಸಿ, 4.55 ಲಕ್ಷ ರೂ. ಮೌಲ್ಯದ 144 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.

    ಆರೋಪಿ ಅಭಿಷೇಕ್ ಬಿ.ಕಾಂ ಪದವಿ ವ್ಯಾಸಂಗ ಮುಗಿಸಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದಿದ್ದ. ಆನ್‌ಲೈನ್ ಪೋರ್ಟಲ್‌ಗಳಲ್ಲಿ ಬೆಟ್ಟಿಂಗ್‌ಗೆ ಹಣ ಕಟ್ಟಿ ಲಕ್ಷಾಂತರ ರೂ. ಕಳೆದುಕೊಂಡಿದ್ದ. ಇದರಿಂದ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಆಗಿಲ್ಲ. ಹಣ ವಾಪಸ್ ಕೊಡುವಂತೆ ಸಾಲಗಾರರು ಒತ್ತಾಯಿಸುತ್ತಿದ್ದರು. ಒಂದು ವರ್ಷದ ಹಿಂದೆ ಮಾರುತಿನಗರದ ತನ್ನ ದೊಡ್ಡಮ್ಮನ ಮನೆಯಲ್ಲಿದ್ದಾಗ, ಆಕೆಯ ಬಳಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಇರುವುದು ಗೊತ್ತಾಗಿತ್ತು.

    ಅಭಿಷೇಕ್ ಅ.13ರಂದು ದೊಡ್ಡಮ್ಮನ ಮನೆಗೆ ಹೋಗಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹಿಂಬಾಗಿಲಿಂದ ಮನೆಗೆ ನುಗ್ಗಿ, ಮನೆಯೊಳಗಿನಿಂದ ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿ, ಚಿನ್ನದಸರ, ಕಿವಿಯೋಲೆ, ಉಂಗುರ ಸೇರಿ 144 ಗ್ರಾಂ ಒಡವೆಗಳನ್ನು ದೋಚಿ, ಪರಾರಿಯಾಗಿದ್ದ. ಮಹಿಳೆ ಮನೆಗೆ ಬಂದಾಗ, ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿರುವುದು ಕಂಡು ಬಂದಿತ್ತು. ಹಿಂಬಾಗಿಲಿಗೆ ಹೋಗಿ ನೋಡಿದಾಗ, ಯಾರೋ ಅಪರಿಚಿತರು ಮನೆಗೆ ನುಗ್ಗಿ ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಈ ಕುರಿತು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಬೈಕ್ ಸುಳಿವು ಸಿಕ್ಕಿತ್ತು. ಇದನ್ನು ಆಧರಿಸಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣ ಮಾರಾಟ ಮಾಡಿದ್ದು, ಅದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts