More

    ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಆಮಿಷ, ಬಿಲ್ಡರ್​ಗೂ ಮೋಸ; ಯುವರಾಜನ ಮತ್ತೊಂದು ವಂಚನೆ ಬಯಲು

    ಬೆಂಗಳೂರು: ಮಹಾವಂಚಕ ಯುವರಾಜ ಅಲಿಯಾಸ್ ಸ್ವಾಮಿಯ ಮೋಸದ ಜಾಲ ದಿನೇದಿನೆ ವಿಸ್ತಾರವಾಗುತ್ತಲೇ ಇದೆ. ಕೇಂದ್ರ ರೇಷ್ಮೆ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಬಿಲ್ಡರ್​ವೊಬ್ಬರಿಗೆ ಆಸೆ ತೋರಿಸಿ 30 ಲಕ್ಷ ರೂ. ಪಡೆದು ಮೋಸ ಮಾಡಿರುವ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗಿರಿನಗರದ ಎಂ.ಸಿ.ಇನಿತ್​ಕುಮಾರ್ (40) ಹಣ ಕಳೆದುಕೊಂಡ ಬಿಲ್ಡರ್. ಇವರು ಕೊಟ್ಟ ದೂರಿನ ಮೇರೆಗೆ ಯುವರಾಜನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 4 ತಿಂಗಳ ಹಿಂದೆ ಸ್ನೇಹಿತನ ಮೂಲಕ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್​ಎಂಡ್ ಹೋಟೆಲ್​ನಲ್ಲಿ ಯುವರಾಜನ ಭೇಟಿ ಆಯಿತು. ಆಗ ಯುವರಾಜ ‘ನಾನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅಣ್ಣನ ಮಗ’ ಎಂದು ಪರಿಚಯ ಮಾಡಿಕೊಂಡಿದ್ದು, ‘ನೀವು ನೋಡಲು ಯೂತ್ ಆಗಿದ್ದೀರಿ. ರಾಜಕೀಯಕ್ಕೆ ಬರಬೇಕು. ನನಗೆ ಗೊತ್ತಿರುವವರಿಂದ ನಿಮಗೆ ರಾಜಕೀಯ ಭವಿಷ್ಯ ಕೊಡಿಸುತ್ತೇನೆ. ನಿಮ್ಮನ್ನು ನ್ಯಾಷನಲ್ ಯೂತ್ ಐಕಾನ್ ಮಾಡುತ್ತೇನೆ’ ಎಂದು ಆಮಿಷ ಒಡ್ಡಿದ್ದ.

    ಅದಕ್ಕೆ ಬಿಲ್ಡರ್ ಒಪ್ಪಿದಾಗ, ‘ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಸ್ಥಾನ ಖಾಲಿ ಇದೆ. ಅದನ್ನು ನಿಮಗೇ ಕೊಡಿಸುತ್ತೇನೆ. ಯುವಕರು ಮುಂದೆ ಬರಬೇಕೆಂದು’ ಯುವರಾಜ ಪುಸಲಾಯಿಸಿದ. ಬಿಲ್ಡರ್ ಇನಿತ್​ಕುಮಾರ್, ಎಷ್ಟು ಖರ್ಚು ಆಗಬಹುದು ಎಂದು ಕೇಳಿದಾಗ, ‘ಅಂದಾಜು 3 ಕೋಟಿ ರೂ. ಆಗುತ್ತದೆ’ ಎಂದಿದ್ದಾನೆ. ಅಷ್ಟೊಂದು ದೊಡ್ಡವರಲ್ಲ. ನಮ್ಮಿಂದ ಆಗುವುದಿಲ್ಲ ಎಂದು ಬಿಲ್ಡರ್ ಸ್ನೇಹಿತರೊಂದಿಗೆ ಹೊರಟು ಹೋಗಿದ್ದಾರೆ. 3 ದಿನಗಳ ನಂತರ ಬಿಲ್ಡರ್​ಗೆ ಕರೆ ಮಾಡಿದ ಯುವರಾಜ, ರಾಜಕೀಯಕ್ಕೆ ಬನ್ನಿ. 2 ಕೋಟಿ ಖರ್ಚು ಮಾಡಿದರೆ ನಿಮಗೆ ಒಳ್ಳೆಯ ರಾಜಕೀಯ ಭವಿಷ್ಯ ಸಿಗುವಂತೆ ಮಾಡುತ್ತೇನೆ ಎಂದಿದ್ದಾನೆ. ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲವೆಂದು ಬಿಲ್ಡರ್ ಹೇಳಿದಾಗ, 50 ಲಕ್ಷ ರೂ. ಆದರೂ ಕೊಡಿ. ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಮಾಡುತ್ತೇನೆ ಎಂದು ಯುವರಾಜ ಚೌಕಾಸಿ ಮಾಡಿದ್ದಾನೆ.

    ಇದಕ್ಕೊಪ್ಪಿದ ಬಿಲ್ಡರ್​ಗೆ ಮರುದಿನ ಕರೆ ಮಾಡಿ ಕೇಂದ್ರ ಸಚಿವರು ಒಪ್ಪಿಕೊಂಡಿದ್ದಾರೆ. ನಿಮ್ಮ ಬಯೋಡೇಟಾ ಕಳುಹಿಸಿಕೊಡಿ ಎಂದು ವಾಟ್ಸ್​ಆಪ್​ನಲ್ಲಿ ಪಡೆದು, ಮತ್ತೆ ಕರೆ ಮಾಡಿ ತುರ್ತಾಗಿ 30 ಲಕ್ಷ ರೂ. ಕೊಡುವಂತೆ ಕೇಳಿದ್ದಾನೆ. ಬಿಲ್ಡರ್, ತಾಜ್ ವೆಸ್ಟ್​ಎಂಡ್ ಹೋಟೆಲ್​ನಲ್ಲಿ ಯುವರಾಜನ ಭೇಟಿ ಮಾಡಿ 2 ಲಕ್ಷ ರೂ. ಕೊಟ್ಟಿದ್ದಾರೆ. ಇದಾದ ಮೇಲೆ ಆರೋಪಿ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 30 ಲಕ್ಷ ರೂ. ಜಮೆ ಮಾಡಿದ್ದಾರೆ. 15 ದಿನ ಕಳೆದರೂ ಸರ್ಕಾರದಿಂದ ಯಾವುದೇ ಆದೇಶ ಪ್ರತಿ ಸಿಗದೆ ಇದ್ದಾಗ, ಯುವರಾಜನ ಬಳಿ ಬಿಲ್ಡರ್ ಹಣ ವಾಪಸ್ ಕೇಳಿದ್ದಾರೆ. ಅಷ್ಟರಲ್ಲಿ ಯುವರಾಜನ ಬಂಧನವಾಗಿತ್ತು ಎಂದು ದೂರಿನಲ್ಲಿ ಬಿಲ್ಡರ್ ಉಲ್ಲೇಖಿಸಿದ್ದಾರೆ.

    ಅಸ್ಸಾಂನಿಂದ ಬರುವಷ್ಟರಲ್ಲಿ ಜೈಲಿಗೆ: ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಸ್ಥಾನ ಸಿಗದೆ ಇದ್ದಾಗ ಹಣ ವಾಪಸ್ ಕೊಡುವಂತೆ ಯುವರಾಜನ ಬಳಿ ಕೇಳಿದ್ದೆ. ಆತ ಹಣ ಪಡೆದಿರುವುದು ವಾಪಸ್ ಕೊಡುವುದಕ್ಕಲ್ಲ. ಮತ್ತೆ ಕೇಳಿದರೆ ಕೊಲೆ ಮಾಡಿಸುತ್ತೇನೆ ಎಂದು ಬೆದರಿಸಿದ್ದಾನೆ. ಸ್ವಲ್ಪ ದಿನ ಬಿಟ್ಟು ಕರೆ ಮಾಡಿದಾಗ, ನಾಳೆ ಬೆಳಗ್ಗೆ ಮನೆ ಹತ್ತಿರ ಬಾ ಎಂದಿದ್ದ. ಅಸ್ಸಾಂನಿಂದ ಬೆಂಗಳೂರಿಗೆ ಬಂದು ಆತನ ಮನೆ ಹತ್ತಿರ ಹೋಗುವಷ್ಟರಲ್ಲಿ ಸಿಸಿಬಿ ಪೊಲೀಸರು ಬಂಧಿಸಿ ರುವುದು ಗೊತ್ತಾಯಿತು ಎಂದು ಇನಿತ್ ಹೇಳಿದ್ದಾರೆ.

    ರಾಧಿಕಾ ಅಣ್ಣನ ವಿಚಾರಣೆ: ಯುವರಾಜನ ಕಡೆಯಿಂದ 75 ಲಕ್ಷ ರೂ. ಪಡೆದಿರುವ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಅಣ್ಣ ರವಿರಾಜ್​ನನ್ನು ಭಾನುವಾರ ಸಹ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೆಲ ದಾಖಲೆಗಳನ್ನು ಕೇಳಿದ್ದ ಕಾರಣ ಸಿಸಿಬಿ ಕಚೇರಿಗೆ ಕರೆಸಲಾಗಿತ್ತು ಎನ್ನಲಾಗಿದೆ. ಮತ್ತೆ ಅಗತ್ಯ ಇದ್ದರೆ ವಿಚಾರಣೆಗೆ ಕರೆಯುವುದಾಗಿ ಸೂಚನೆ ಕೊಟ್ಟು ಸಿಸಿಬಿ ಪೊಲೀಸರು ರವಿರಾಜ್​ನನ್ನು ಕಳುಹಿಸಿದ್ದಾರೆ.

    ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ?

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಜನರು ಡಾಕ್ಟರ್ ಆಗೋದೇ ಕೈತುಂಬ ವರದಕ್ಷಿಣೆ ಪಡೆಯೋಕಂತೆ!; ಹೇಳಿಕೆ ವಿರೋಧಿಸಿ ಮುಖ್ಯಮಂತ್ರಿಗೆ ದೂರಿತ್ತ ಐಎಂಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts