More

    ನೂರಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲೇ ಉದ್ಯೋಗ

    ನೂರಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲೇ ಉದ್ಯೋಗನೂರಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲೇ ಉದ್ಯೋಗ

    ಚಿತ್ರದುರ್ಗ: ಉದ್ಯೋಗ ಅರಸಿ ಸಾವಿರಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ಇದರಲ್ಲಿ ಅನೇಕರು ನಿರೀಕ್ಷೆಯೊಂದಿಗೆ ಸಂದರ್ಶನ ಎದುರಿಸಲು ಸಿದ್ಧತೆ ಮಾಡಿಕೊಂಡು ಬಂದಿದ್ದರು. ಈಗಷ್ಟೇ ಪದವಿ, ವೃತ್ತಿಪರ ಕೋರ್ಸ್ ಮುಗಿಸಿದವರು ಹೆಚ್ಚಾಗಿ ಕಂಡು ಬಂದರು. ಈಗಾಗಲೇ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಉಳ್ಳವರು ಪಾಲ್ಗೊಂಡಿದ್ದರು.

    ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಕಂಡುಬಂದ ದೃಶ್ಯಗಳಿವು.

    ಇದೇ ಪ್ರಥಮ ಬಾರಿ ಸಂದರ್ಶನಕ್ಕೆ ಹಾಜರಾಗುತ್ತಿದ್ದೇವೆ. ಈವರೆಗೂ ಯಾವ ಮೇಳದಲ್ಲಿಯೂ ಭಾಗವಹಿಸಿಲ್ಲ. ಇಂಗ್ಲೀಷ್‌ನಲ್ಲಿಯೇ ಮಾತನಾಡಬೇಕೆ… ಹೀಗೆ ತಮಗೆ ತಾವೇ ಪ್ರಶ್ನಿಸಿಕೊಳ್ಳುತ್ತಲೇ ಸಂದರ್ಶನಕ್ಕೂ ಮುನ್ನವೇ ಕೆಲವರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಕನ್ನಡದಲ್ಲೇ ಅನೇಕ ಕಂಪನಿಗಳು ಸಂದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಂತಸ ಇಮ್ಮಡಿಗೊಂಡಿತು.

    ಕೃಷಿಯಿಂದ ನಷ್ಟ ಅನುಭವಿಸಿದ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಕಂಡುಬಂದರು. ಎಸ್ಸೆಸ್ಸೆಲ್ಸಿ, ಪಿಯು, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮುಗಿಸಿದ ಅನೇಕರು, ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಕೆಲವರು ಭಾಗವಹಿಸಿದ್ದರು.

    ಕಂಪನಿಗಳು ಯಾವ ರೀತಿ ಸಂದರ್ಶನ ಮಾಡುತ್ತವೆ ಎಂಬುದನ್ನು ತಿಳಿಯಲು ಅಂತಿಮ ವರ್ಷ ವ್ಯಾಸಂಗ ಮಾಡುವವರಲ್ಲಿ ಕಾತುರ ಹೆಚ್ಚಿತ್ತು. ನೇರ ಸಂದರ್ಶನ ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳಿಗೆ ವರವಾಯಿತು. ಮೊದಲ ಸಂದರ್ಶನದಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಹಲವರು ಸಫಲರಾದರು. ಇನ್ನೂ ಅನೇಕರಿಗೆ ಮನೆಗೆ ನೇಮಕಾತಿ ಆದೇಶ ಕಳುಹಿಸುತ್ತೇವೆ ಎಂಬುದಾಗಿ ಕಂಪನಿಗಳು ಹೇಳಿದಾಗ ಬರುತ್ತದೋ, ಇಲ್ಲವೋ ಎಂದು ನಿರಾಸೆಯಿಂದ ಹಿಂದಿರುಗಿದರು. ಚಿತ್ರದುರ್ಗ ಜಿಲ್ಲೆಯವರೇ ಹೆಚ್ಚಾಗಿ ಕಂಡು ಬಂದರಾದರೂ ದಾವಣಗೆರೆ ಜಿಲ್ಲೆಯಿಂದಲೂ ಒಂದಿಷ್ಟು ಮಂದಿ ಬಂದಿದ್ದರು.

    ಬೆಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲಸ ಮಾಡಲು ಉತ್ಸಾಹ ಇರುವವರ ಪೈಕಿ ಕೆಲವರಿಗೆ ಮನ್ನಣೆ ನೀಡಲಾಯಿತು. ಇಲ್ಲವೆಂದವರಿಗೆ ಮರು ಪ್ರಶ್ನಿಸದೆಯೇ ಕಳುಹಿಸಲಾಯಿತು.

    ಹಲವೆಡೆ ಉದ್ಯೋಗಕ್ಕಾಗಿ ಅಲೆದಾಡಿದ್ದೇವೆ. ಈ ಮೇಳದಲ್ಲಿ ಅನೇಕ ಕಂಪನಿಗಳು ಬಂದಿದ್ದು, ಕೆಲಸ ಗಿಟ್ಟಿಸಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಿರುವುದು ಸಂತೋಷದ ಸಂಗತಿ. ಸಂದರ್ಶನ ಎದುರಿಸಿದ್ದೇವೆ. ಕಂಪನಿಯೊಂದು ನೇಮಕಾತಿ ಪತ್ರ ನೀಡಿದೆ. ಎಲ್ಲಿಲ್ಲದ ಸಂತಸ ಉಂಟಾಗಿದೆ ಎಂದು ಚಿತ್ರದುರ್ಗದ ಕೆ.ಎಂ.ಶೋಭಾ, ಎಸ್.ಆರ್.ಸಂಗನಾ, ಜಾನುಕೊಂಡ ಗ್ರಾಮದ ಸಂಗೀತಾ, ಮದಕರಿಪುರದ ಶಿವಕುಮಾರ್, ರಘು, ಎನ್.ಜೀವಿತಾ, ಮನು, ಪ್ರಶಾಂತ್, ರಚನಾ, ಸ್ವಾತಿ ಅನಿಸಿಕೆ ಹಂಚಿಕೊಂಡರು. ಜಿಪಂ ಸಿಇಒ ಎಂ.ಎಸ್.ದಿವಾಕರ್ ಮೇಳ ಉದ್ಘಾಟಿಸಿದರು.

    *ಕೋಟ್
    ಇಂಜಿನಿಯರಿಂಗ್ ಮುಗಿಸಿದವರಿಗೆ ಸಂದರ್ಶಿಸಲು ಎರಡು ಕಂಪನಿ ಬಂದಿವೆ. ಹಾಜರಾಗಿ ಭಾಗವಹಿಸಿದ್ದೇವೆ. ಆನ್‌ಲೈನ್ ಮೂಲಕ ಎರಡು ಸುತ್ತಿನಲ್ಲಿ ಸಂದರ್ಶನ ನಡೆಸಿದರು. ತುಂಬಾ ಜನರು ಭಾಗವಹಿಸಿದ್ದು, ಉದ್ಯೋಗ ಸಿಗುವ ನಿರೀಕ್ಷೆ ಇದೆ.
    ಪಿ.ಭಾರತಿ ವಿದ್ಯಾರ್ಥಿನಿ
    ಎಸ್‌ಜೆಎಂಐಟಿ ಕಾಲೇಜ್

    *ಕೋಟ್
    30ಕ್ಕೂ ಹೆಚ್ಚು ಕಂಪನಿ ಭಾಗವಹಿಸಿದ್ದು, 1505 ಜನ ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2023ರ ಜ.15ರೊಳಗೆ ನೂರಾರು ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ವಿದ್ಯಾಭ್ಯಾಸಕ್ಕೆ ತಕ್ಕಂತೆ ಸಂದರ್ಶನ ನಡೆದಿದೆ.
    ಕೆ.ಗೋಪಾಲರೆಡ್ಡಿ
    ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts