More

    ರಸ್ತೆಗಳಲ್ಲಿ ಮಾಸ್ಕ-ಗ್ಲೌಸ್ ಗುಮ್ಮ

    ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸುವಂತೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಆದರೆ, ಅವುಗಳ ವಿಲೇವಾರಿಯೇ ಈಗ ಸಾರ್ವಜನಿಕರಿಗೆ ತೊಡಕಾಗಿ ಪರಿಣಮಿಸಿದೆ.!

    ಕರೊನಾ ವೈರಸ್‌ನಿಂದ ಜನರು ಮೊದಲೇ ಭಯದಲ್ಲಿದ್ದಾರೆ. ಹೀಗಿರುವಾಗ, ಜನರು ತಾವು ಬಳಸಿದ ಮಾಸ್ಕ್, ಗ್ಲೌಸ್‌ಗಳನ್ನು ರಸ್ತೆಬದಿ ಬೇಕಾಬಿಟ್ಟಿಯಾಗಿ ಎಸೆಯುತ್ತಿರುವುದು ಮತ್ತೊಂದು ಸಮಸ್ಯೆಯನ್ನೇ ಸೃಷ್ಟಿಸಿದೆ. ನಿತ್ಯ ಬೆಳಗ್ಗೆ ಕಸ ಸಂಗ್ರಹಿಸಲು ಮನೆಬಾಗಿಲಿಗೇ ಬರುವ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರಿಗೆ ಮಾಸ್ಕ್, ಗ್ಲೌಸ್ ಪ್ರತ್ಯೇಕವಾಗಿ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಿರ್ದೇಶನ, ಸಲಹೆ ನೀಡುತ್ತಿದ್ದಾರೆ. ಆದರೆ, ಬಹಳಷ್ಟು ಜನರು ಇದನ್ನು ಪಾಲಿಸುತ್ತಲೇ ಇಲ್ಲ. ಇನ್ನೂ ಅನೇಕರಿಗೆ ಈ ಬಗ್ಗೆ ಮಾಹಿತಿಯೇ ಲಭ್ಯವಾಗಿಲ್ಲ ಎನ್ನಲಾಗಿದೆ.

    28 ಸಾವಿರ ಕೆ.ಜಿ. ಕೋವಿಡ್ ತ್ಯಾಜ್ಯ: ಬೆಳಗಾವಿ ಜಿಲ್ಲೆಯ ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳು, ಕರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯಗಳು, ಕ್ವಾರಂಟೈನ್ ಕೇಂದ್ರಗಳು, ಫೀವರ್ ಕ್ಲಿನಿಕ್‌ಗಳಲ್ಲಿ ಉತ್ಪತ್ತಿಯಾಗುವ ಅಪಾಯಕಾರಿ ಕೋವಿಡ್-19 ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ನಿತ್ಯವೂ ಸಂಗ್ರಹಿಸಲಾಗುತ್ತಿದೆ. ಈವರೆಗೆ 28,797 ಕೆ.ಜಿ. ಕೋವಿಡ್ ಜೈವಿಕ ತ್ಯಾಜ್ಯ ಸಂಗ್ರಹವಾಗಿದ್ದು, ಬೆಳಗಾವಿಯ ಖಾಸಬಾಗ ಮತ್ತು ಸವದತ್ತಿ ತಾಲೂಕಿನ ಹಾರೂಗೊಪ್ಪದ ಘಟಕಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ವಿಲೇವಾರಿಗೊಳಿಸಲಾಗಿದೆ. ಇದರ ಮಾಹಿತಿಯನ್ನು ಮಂಡಳಿಯ ಪೋರ್ಟಲ್‌ನಲ್ಲೂ ಅಳವಡಿಸಲಾಗಿದೆ.

    ಆದರೀಗ, ಜನರು ಬಳಸಿ ಬಿಸಾಡುತ್ತಿರುವ ಮಾಸ್ಕ್ ಹಾಗೂ ಗ್ಲೌಸ್‌ಗಳು ರಸ್ತೆಬದಿಗಳಲ್ಲಿ ಗೋಚರಿಸುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಅವುಗಳ ವಿಲೇವಾರಿ ವಿಚಾರವಾಗಿಯೂ ಮುತುವರ್ಜಿ ವಹಿಸಿ ಸರ್ಕಾರ ಅಗತ್ಯ ಮಾರ್ಗಸೂಚಿ ಪ್ರಕಟಿಸಬೇಕಿದೆ ಎನ್ನುತ್ತಾರೆ ಪ್ರಜ್ಞಾವಂತರು.

    ವಿಲೇವಾರಿ ಮಾಡುವುದು ಹೇಗೆ?: ಜನರು ಅಗತ್ಯ ಕೆಲಸಗಳ ನಿಮಿತ್ತ ಹೊರಗಡೆ ಸುತ್ತಾಡಿ ಮನೆಗೆ ಮರಳಿದ ತಕ್ಷಣವೇ, ತಾವು ಧರಿಸಿದ್ದ ಮಾಸ್ಕ್ ತೆಗೆದು ನಿಗದಿತ ಜಾಗದಲ್ಲಿ ತೂಗುಹಾಕಬೇಕು. ಮರುಬಳಕೆ ಮಾಡಬಹುದಾದ ಮಾಸ್ಕ್‌ಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಒಂದೇ ಬಾರಿ ಬಳಸಬಹುದಾದ ಮಾಸ್ಕ್ ಆಗಿದ್ದರೆ, ಚೀಲದಲ್ಲಿ ತೆಗೆದಿಟ್ಟು ಪೌರ ಕಾರ್ಮಿಕರಿಗೆ ನೀಡಬೇಕು. ಒಬ್ಬರು ಬಳಕೆ ಮಾಡಿದ ಮಾಸ್ಕ್ ಮತ್ತೊಬ್ಬರು ಬಳಸಬಾರದು. ಆಗ ಕರೊನಾ ಸೋಂಕಿನಿಂದ ಪಾರಾಗಬಹುದು ಎನ್ನುತ್ತಾರೆ ಬೈಲಹೊಂಗಲದ ವೈದ್ಯ ಡಾ.ಮಹಾಂತೇಶ ರಾಮಣ್ಣವರ.

    ಕೋವಿಡ್-19 ಹಿಮ್ಮೆಟ್ಟಿಸಲು ಪ್ರತಿಯೊಬ್ಬರೂ ಸುರಕ್ಷತಾ ತಂತ್ರ ಅನುಸರಿಸುತ್ತಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ ತಾವು ಬಳಸಿದ ಮಾಸ್ಕ್, ಗ್ಲೌಸ್‌ಗಳನ್ನು ನಿಯಮಾವಳಿಯಂತೆ ವಿಲೇವಾರಿಗೊಳಿಸಲು ಕೈಜೋಡಿಸಬೇಕು. ಅವುಗಳನ್ನು ರಸ್ತೆಗೆ ಎಸೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸಬಾರದು.
    | ಗೋಪಾಲಕೃಷ್ಣ ಸಣತಂಗಿ
    ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ

    ಜನರು ಬಳಕೆ ಮಾಡಿದ ನಂತರ ಮಾಸ್ಕ್, ಗ್ಲೌಸ್‌ಗಳನ್ನು ರಸ್ತೆಬದಿ ಬೇಕಾಬಿಟ್ಟಿಯಾಗಿ ಎಸೆಯುತ್ತಿರುವುದು ಕಂಡುಬಂದಿದೆ. ಇದರಿಂದ ಕರೊನಾ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆಯೂ ಇದೆ. ಹೀಗಾಗಿ ಕಸ ಸಂಗ್ರಹಕ್ಕಾಗಿ ಬರುವ ಪೌರ ಕಾರ್ಮಿಕರಿಗೆ ಅವುಗಳನ್ನು ಪ್ರತ್ಯೇಕವಾಗಿ ನೀಡಬೇಕು. ಆಗ ವಿಲೇವಾರಿಯೂ ಸುಲಭವಾಗುತ್ತದೆ.
    | ಕೆ.ಎಚ್. ಜಗದೀಶ ಆಯುಕ್ತ, ಮಹಾನಗರ ಪಾಲಿಕೆ, ಬೆಳಗಾವಿ

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts