More

    ಒಲಿಂಪಿಕ್ ದರ್ಜೆ ಈಜುಕೊಳ, ಎಮ್ಮೆಕೆರೆಯಲ್ಲಿ ಕಾಮಗಾರಿಗೆ ವೇಗ

    ಭರತ್ ಶೆಟ್ಟಿಗಾರ್ ಮಂಗಳೂರು

    ಪರ ವಿರೋಧಗಳ ಹೋರಾಟಗಳ ನಡುವೆ ನಗರದ ಎಮ್ಮೆಕೆರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಆರಂಭವಾಗಿರುವ ಒಲಿಂಪಿಕ್ ದರ್ಜೆಯ ಈಜುಕೊಳ ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಸ್ತುತ ವೇಗವಾಗಿ ಸಾಗಿದೆ. 2022ರ ಅಂತ್ಯದೊಳಗೆ ಲೋಕಾರ್ಪಣೆಯಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

    ಪ್ರಸ್ತುತ ಸ್ವಿಮ್ಮಿಂಗ್‌ಪೂಲ್ ಸಂಕೀರ್ಣದ ತಳ ಅಂತಸ್ತಿನ ಸ್ಲ್ಯಾಬಿಂಗ್ ಕಾಮಗಾರಿ ಪೂರ್ಣಗೊಂಡಿದೆ. ತಳಅಂತಸ್ತು ವಾಹನಗಳ ಪಾರ್ಕಿಂಗ್ ಉದ್ದೇಶಕ್ಕೆ ಬಳಕೆಯಾಗಲಿದ್ದು, ಮೊದಲ ಅಂತಸ್ತಿನಲ್ಲಿ ಈಜು ಕೊಳ ನಿರ್ಮಾಣವಾಗಲಿದೆ. ತಳ ಅಂತಸ್ತಿನ ಸೀಲಿಂಗ್ ಈಜುಕೊಳದ ತಳವಾಗಲಿದ್ದು, ಕೊಳದ ಬದಿಯ ಗೋಡೆಗಳು ಮತ್ತು ಪ್ರೇಕ್ಷಕರು ಕುಳಿತುಕೊಳ್ಳುವ ಭಾಗದ ಕೆಲಸ ನಡೆಯುತ್ತಿದೆ. ಇದರ ಇನ್ನೊಂದು ಭಾಗದಲ್ಲಿ ಕಚೇರಿ, ಜಿಮ್ ಮೊದಲಾದವುಗಳು ನಿರ್ಮಾಣವಾಗಲಿದೆ. ಸ್ವಿಮ್ಮಿಂಗ್‌ಪೂಲ್ ಮೇಲ್ಭಾಗದಲ್ಲಿ ರೂಫಿಂಗ್ ಬರಲಿದೆ.

    24.94 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಪೂರ್ಣಗೊಂಡು ಲೋಕಾರ್ಪಣೆಯಾದ ಬಳಿಕ ಮಂಗಳೂರಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ಆಯೋಜಿಸಲು ಅನುಕೂಲವಾಗಲಿದೆ. ಇನ್ನೊಂದೆಡೆ ಮಂಗಳೂರಿನ ಸ್ಪರ್ಧಿಗಳಿಗೂ ಅಂತಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಪಾಲ್ಗೊಳ್ಳುವ ಉದ್ದೇಶಕ್ಕೆ ತರಬೇತಿ ಪಡೆಯಲು ಸಹಕಾರಿಯಾಗಲಿದೆ.

    ಸಂಕೀರ್ಣದಲ್ಲಿ ಏನೇನು ಇರಲಿವೆ?: ಸ್ವಿಮ್ಮಿಂಗ್‌ಪೂಲ್ ಸಂಕೀರ್ಣದಲ್ಲಿ ಒಟ್ಟು ಮೂರು ಈಜುಕೊಳ ಇರಲಿವೆ. ಒಂದು ಸ್ಪರ್ಧೆಯ ಉದ್ದೇಶಕ್ಕಾದರೆ, ಉಳಿದವು ಅಭ್ಯಾಸ ಈಜುಕೊಳ ಹಾಗೂ ಮಕ್ಕಳಿಗಾಗಿ ಇರುವ ಸಣ್ಣ ಕೊಳ. ಉಳಿದಂತೆ ಪ್ರಥಮ ಚಿಕಿತ್ಸಾ ಕೊಠಡಿ, ಅ್ಯಂಟಿ ಡೂಪಿಂಗ್, ತೀರ್ಪುಗಾರರ ಕೊಠಡಿ, ಅಧಿಕಾರಿಗಳ ಕೊಠಡಿ, ಫಿಸಿಯೋಥೆರಪಿ, ರೆಕಾರ್ಡ್ ರೂಂ, ಶೌಚಗೃಹ, ಶವರ್ ರೂಂ, ಫಿಲ್ಟರೇಶನ್ ಪ್ಲಾೃಂಟ್, ಪಂಪ್‌ರೂಂ ಮೊದಲಾದವುಗಳು ಇರಲಿವೆ. ತಳ ಅಂತಸ್ತಿನಲ್ಲಿ 50ಕ್ಕೂ ಅಧಿಕ ಕಾರು ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದೆ.

    ಎಮ್ಮೆಕೆರೆ ಮೈದಾನ ಅಭಿವೃದ್ಧಿ: ಈಜುಕೊಳದ ಪಕ್ಕದಲ್ಲಿರುವ ಎಮ್ಮೆಕೆರೆ ಮೈದಾನವನ್ನೂ ಅಭಿವೃದ್ಧಿ ಪಡಿಸುವುದು ಯೋಜನೆಯಲ್ಲಿ ಸೇರಿದೆ. ಮಣ್ಣು ಹಾಕಿ ಸಮತಟ್ಟು ಮಾಡಿ, ಆಟವಾಗಲು ಸುಗಮವಾಗಿವಂತೆ ಮಾಡುವುದು, ಒಂದು ಭಾಗದಲ್ಲಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಮೆಟ್ಟಿಲುಗಳ ಮಾದರಿಯ ಗ್ಯಾಲರಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನೊಂದು ಸ್ಲ್ಯಾಬ್ ಪೂರ್ಣಗೊಂಡರೆ ಸಂಕೀರ್ಣದ ಸ್ಟ್ರಕ್ಚರ್ ಪೂರ್ಣಗೊಂಡಂತಾಗುತ್ತದೆ. ಡಿಸೆಂಬರ್ ಅಂತ್ಯದೊಳಗೆ ಈ ಕಾಮಗಾರಿಗಳು ಮುಗಿಯುವ ಸಾಧ್ಯತೆಯಿದೆ. ಮಾರ್ಚ್ ಒಳಗೆ ಛಾವಣಿ ಸೇರಿದಂತೆ ವಿವಿಧ ಕೆಲಸಗಳು ಮುಗಿಯಬಹುದು. ಆ ಬಳಿಕ ಈಜುಕೊಳಕ್ಕೆ ಬೇಕಾದ ಸಲಕರಣೆಗಳ ಅಳವಡಿಕೆ, ಟೈಲಿಂಗ್ ಮೊದಲಾದ ಕೆಲಸಗಳು ನಡೆದು ಕಟ್ಟಡ ಉದ್ಘಾಟನೆಗೆ ಸಿದ್ಧವಾಗಲಿದೆ.

    ಅರುಣ್ ಪ್ರಭಾ ಕೆ.ಎಸ್.
    ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ ಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts