More

    ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಟೋಕಿಯೋ: ಲಿಂಗ ಸಮಾನತೆಗೆ ಹೆಚ್ಚಿನ ಒತ್ತು ನೀಡಿರುವ ಈ ಸಲದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ತೋರಿಸುವಂತಿಲ್ಲ ಎಂದು ಕ್ರೀಡಾಕೂಟದ ಪ್ರಸಾರ ವಾಹಿನಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಸೂಚಿಸಿದೆ. ಈ ಮೂಲಕ ಒಲಿಂಪಿಕ್ಸ್ ವೇಳೆ ಮಹಿಳಾ ಕ್ರೀಡಾಪಟುಗಳ ಸೆಕ್ಸಿ ಚಿತ್ರ, ವಿಡಿಯೋಗಳು ಹರಿದಾಡದಂತೆ ಎಚ್ಚರಿಕೆ ವಹಿಸಿದೆ. ‘ಕ್ರೀಡಾ ಆಕರ್ಷಣೆ ಮಾತ್ರ ಇರಬೇಕು, ಲೈಂಗಿಕ ಆಕರ್ಷಣೆ ಬೇಡ’ ಎಂಬ ಮಂತ್ರವನ್ನು ಒಲಿಂಪಿಕ್ಸ್ ಅಧಿಕಾರಿಗಳು ಪಠಿಸಿದ್ದಾರೆ.

    ಒಲಿಂಪಿಕ್ಸ್ ಚಿತ್ರಣದ ಮಾರ್ಗಸೂಚಿಗೆ ತಿದ್ದುಪಡಿ ತಂದಿರುವ ಐಒಸಿ, ‘ಅನಗತ್ಯವಾಗಿ ಕ್ರೀಡಾಪಟುಗಳ ಲುಕ್, ಉಡುಪು ಅಥವಾ ಖಾಸಗಿ ಭಾಗಗಳ ಮೇಲೆ ಕ್ಯಾಮರಾವನ್ನು ಕೇಂದ್ರೀಕರಿಸಿ ಚಿತ್ರಿಸುವಂತಿಲ್ಲ. ಅಚಾನಕ್ ಆಗಿ ಉಡುಗೆ ಸರಿದು ಖಾಸಗಿ ಅಂಗಗಳು ಕಾಣಿಸಿದರೆ (ವಾರ್ಡ್‌ರೋಬ್ ಮಾಲ್‌ಫಂಕ್ಷನ್) ಅಂಥ ವಿಡಿಯೋ ಡಿಲೀಟ್ ಮಾಡಬೇಕು ಅಥವಾ ಫ್ರೇಮ್ ಬದಲಿಸಬೇಕು. ಈ ಮೂಲಕ ಕ್ರೀಡಾಪಟುಗಳ ಖಾಸಗಿತನವನ್ನು ಗೌರವಿಸಬೇಕು’ ಎಂದು ಐಒಸಿ ಸೂಚಿಸಿದೆ. ಅಲ್ಲದೆ ಕ್ರೀಡಾಪಟುಗಳು ಧರಿಸಿರುವ ಉಡುಪುಗಳನ್ನು ಹೈಲೈಟ್ ಮಾಡಿ ತೋರಿಸಬಾರದು ಎಂದೂ ಸೂಚಿಸಲಾಗಿದೆ. ಈ ಮೂಲಕ ಕ್ರೀಡಾಸ್ಪರ್ಧೆಗಳ ಪ್ರಸಾರದಲ್ಲೂ ಲಿಂಗ ಸಮಾನತೆಗೆ ಆದ್ಯತೆ ನೀಡಲಾಗಿದೆ.

    ಇದನ್ನೂ ಓದಿ: ಒಲಿಂಪಿಕ್ಸ್ ​ಬೆಳ್ಳಿ ವಿಜೇತೆ ಮೀರಾಬಾಯಿ ಚಿನ್ನದ ಕಿವಿಯೋಲೆಗೆ ಅನುಷ್ಕಾ ಶರ್ಮ ಫಿದಾ!

    ಈ ಮುನ್ನ ತುಂಡುಡುಗೆಯೊಂದಿಗೆ ಸ್ಪರ್ಧಿಸುವ ಬೀಚ್ ವಾಲಿಬಾಲ್, ಜಿಮ್ನಾಸ್ಟಿಕ್ಸ್, ಈಜು ಮತ್ತು ಅಥ್ಲೆಟಿಕ್ಸ್‌ನ ಮಹಿಳಾ ಕ್ರೀಡಾಪಟುಗಳನ್ನು ಕಾಮಪ್ರಚೋದಕವಾಗಿ ತೋರಿಸುವ ಬಗ್ಗೆ ಆಕ್ಷೇಪಗಳು ಎದ್ದಿದ್ದವು. ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಕೆಲ ಕ್ರೀಡೆಗಳ ಪ್ರಸಾರದ ವೇಳೆ ಮಹಿಳೆಯರ ದೇಹದ ಭಾಗಗಳನ್ನು ಕ್ಲೋಸ್‌ಅಪ್‌ನಲ್ಲಿ ತೋರಿಸಲಾಗಿತ್ತು. ಆದರೆ ಈ ಬಾರಿ ಆ ರೀತಿ ಇರುವುದಿಲ್ಲ ಎಂದು ಒಲಿಂಪಿಕ್ಸ್ ಪ್ರಸಾರ ವಾಹಿನಿ ಅಧಿಕಾರಿ ಹೇಳಿದ್ದಾರೆ.

    ಜಿಮ್ನಾಸ್ಟಿಕ್ಸ್‌ನಲ್ಲಿ ದೇಹ ಪ್ರದರ್ಶನ ಅತಿಯಾಗಿರುವ ದೂರಿನ ನಡುವೆ ಜರ್ಮನಿಯ ಜಿಮ್ನಾಸ್ಟ್‌ಗಳು ಈ ಬಾರಿ ಮೊಣಕಾಲಿನವರೆಗೆ ಮೈಮುಚ್ಚುವಂಥ ಸಮವಸಗಳನ್ನು ಧರಿಸಿ ಈಗಾಗಲೆ ಹೊಸ ಕ್ರಾಂತಿ ಸೃಷ್ಟಿಸಿದ್ದಾರೆ. ಒಲಿಂಪಿಕ್ಸ್‌ಗೆ ಒಂದು ತಿಂಗಳು ಮುನ್ನ ಯುರೋಪಿಯನ್ ಬೀಚ್ ಹ್ಯಾಂಡ್‌ಬಾಲ್ ಟೂರ್ನಿ ವೇಳೆ ನಾರ್ವೆ ಮಹಿಳೆಯರು ಬಿಕಿನಿ ಧರಿಸಿ ಆಡಲು ನಿರಾಕರಿಸಿದ್ದರು ಮತ್ತು ಮೈಗಂಟಿದಂಥ ಶಾರ್ಟ್ಸ್ ಧರಿಸಿ ಆಡಿದ್ದರು. ಇದಕ್ಕಾಗಿ ಅಂತಾರಾಷ್ಟ್ರೀಯ ಹ್ಯಾಂಡ್‌ಬಾಲ್ ಸಂಸ್ಥೆ ಅವರಿಗೆ ದಂಡ ವಿಧಿಸಿತ್ತು. ಇದರ ವಿರುದ್ಧ ಭಾರಿ ಪ್ರತಿಭಟನೆಗಳೂ ವ್ಯಕ್ತವಾಗಿದ್ದವು.

    ಲಿಂಗ ಸಮಾನತೆಯ ಆದ್ಯತೆಯಿಂದ ಈ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಮಿಶ್ರ ಸ್ಪರ್ಧೆಗಳನ್ನೂ ಸೇರಿಸಲಾಗಿದೆ. ಅಲ್ಲದೆ ಕೂಟದ ವೇಳಾಪಟ್ಟಿ ರೂಪಿಸುವಲ್ಲೂ ಮಹಿಳೆಯರ ಸ್ಪರ್ಧೆಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ಹೀಗಾಗಿ ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್ ಕ್ರೀಡೆಗಳಲ್ಲಿ ಪುರುಷರ ಫೈನಲ್ ಪಂದ್ಯದ ಬಳಿಕವೇ ಮಹಿಳಾ ವಿಭಾಗದ ಫೈನಲ್ ಪಂದ್ಯಗಳು ನಡೆಯಲಿವೆ.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್‌ಗೆ ಕೈಕೊಟ್ಟ ಪಿಸ್ತೂಲ್, ತಪ್ಪಿದ ಪದಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts