More

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಲಂಡನ್: ಒಲಿಂಪಿಕ್ಸ್ ಪದಕ ಗೆಲುವು ಪ್ರತಿ ಕ್ರೀಡಾಪಟುವಿನ ಕನಸು. ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಪೋಲೆಂಡ್‌ನ ಮರಿಯಾ ಆಂಡ್ರೆಜಿಕ್ ಈ ಕನಸು ನನಸಾಗಿಸಿದ್ದರು. ಆದರೆ ಟೋಕಿಯೊದಿಂದ ತವರಿಗೆ ಮರಳಿದ ಬೆನ್ನಲ್ಲೇ ಈ ಪದಕವನ್ನು ಅವರು ಹರಾಜಿಗೆ ಇಟ್ಟಿದ್ದರು! 8 ತಿಂಗಳ ಮಗುವೊಂದರ ಹೃದಯ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವುದು ಇದರ ಹಿಂದಿನ ಸದುದ್ದೇಶವಾಗಿತ್ತು.

    ಅಪಧಮನಿಯ ಸಮಸ್ಯೆಯಿಂದ ಬಳಲುತ್ತಿದ್ದ ಮಿಲೋಜೆಕ್ ಎಂಬ ಹೆಸರಿನ ಗಂಡು ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಇದಕ್ಕಾಗಿ 2.86 ಕೋಟಿ ರೂ. ವೆಚ್ಚ ಮಾಡಬೇಕಾಗಿತ್ತು. ಹೀಗಾಗಿ ಆ ಬಡ ಕುಟುಂಬಕ್ಕೆ ನೆರವಾಗುವ ಸಲುವಾಗಿ 25 ವರ್ಷದ ಮರಿಯಾ ತಾವು ಗೆದ್ದ ಪದಕವನ್ನು ಹರಾಜಿಗೆ ಇಡಲು ನಿರ್ಧರಿಸಿದ್ದರು.

    ಇದನ್ನೂ ಓದಿ: ಲಾರ್ಡ್ಸ್‌ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಮೊಹಮದ್ ಸಿರಾಜ್

    ‘ಈ ಬೆಳ್ಳಿ ಪದಕ ಧೂಳು ಹಿಡಿಯುವ ಬದಲು ಜೀವವನ್ನು ರಕ್ಷಿಸಲಿ’ ಎಂದು ಪದಕವನ್ನು ಹರಾಜಿಗೆ ಇಡುತ್ತಿರುವ ಬಗ್ಗೆ ಮರಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅದರಂತೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪೋಲೆಂಡ್‌ನ ಸೂಪರ್‌ಮಾರ್ಕೆಟ್ ಕಂಪನಿ ‘ಜಬ್ಕಾ’ 1.4 ಕೋಟಿ ರೂ. ನೀಡಿ ಈ ಪದಕವನ್ನು ಖರೀದಿಸಿತು. ಜತೆಗೊಂದು ಟ್ವಿಸ್ಟ್ ನೀಡಿ, ಆ ಪದಕವನ್ನು ಮರಿಯಾ ಅವರಿಗೆ ಮರಳಿಸಿತು. ಮಗುವಿನ ಶಸಚಿಕಿತ್ಸೆಗೆ ಬೇಕಾದ ಉಳಿದ ಮೊತ್ತವನ್ನು ದೇಣಿಗೆ ಸಂಗ್ರಹದ ಮೂಲಕ ಕಲೆಹಾಕಲಾಗಿದೆ.

    ಈ ಮುನ್ನ 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದ ಮರಿಯಾ, ಕೇವಲ 2 ಸೆಂಟಿಮೀಟರ್ ಅಂತರದಿಂದ ಪದಕ ವಂಚಿತರಾಗಿದ್ದರು. 2017ರಲ್ಲಿ ಭುಜದ ಶಸಚಿಕಿತ್ಸೆಗೆ ಒಳಗಾದರೂ ಕುಗ್ಗದ ಅವರು, 2018ರಲ್ಲಿ ಎಲುಬಿನ ಕ್ಯಾನ್ಸರ್‌ಗೂ ಚಿಕಿತ್ಸೆ ಪಡೆದುಕೊಂಡಿದ್ದರು. ಸಂಪೂರ್ಣ ಗುಣಮುಖರಾದ ಬಳಿಕ ಟೋಕಿಯೊದಲ್ಲಿ ರಜತ ಪದಕ ಗೆದ್ದು ಬೀಗಿದ್ದರು.

    ಈ ಬಾರಿ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿ ಬಯಸಿರುವ ಉಡುಗೊರೆ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts