More

    ಎಪ್ಪತ್ತೈದು ಮಳಿಗೆಗಳ ಹರಾಜಿಗೆ ಒಪ್ಪಿಗೆ

    ಕೆ.ಆರ್.ನಗರ: ಪುರಸಭೆಗೆ ಸೇರಿದ್ದ ಅವಧಿ ಮುಗಿದ 75 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವವರು 13ರಿಂದಲೇ ಭಾಗವಹಿಸಬಹುದು ಎಂದು ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಮಾಹಿತಿ ನೀಡಿದರು.

    ಪಟ್ಟಣದ ಪುರಸಭೆಯಲ್ಲಿ ಸೋಮವಾರ ಕರೆಯಲಾಗಿದ್ದು ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಅ.27ರಂದು ಪುರಸಭಾ ಸದಸ್ಯರ ಸಭೆ ನಡೆಸಿ ಸಭೆಯಲ್ಲಿ ಮಳಿಗೆಗಳನ್ನು ಇ-ಹರಾಜು ಮಾಡಲು ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಕೊಡಲಾಗಿತ್ತು. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

    ಜಿಲ್ಲಾಧಿಕಾರಿಗಳಿಂದ ಸಿಕ್ಕಿರುವ ಒಪ್ಪಿಗೆಯನ್ನು ಸಭೆಯಲ್ಲಿ ಮಂಡಿಸಲಾಗಿದ್ದು, ಆಡಳಿತ ಮಂಡಳಿಯ ಒಪ್ಪಿಗೆ ತೆಗೆದುಕೊಳ್ಳಲಾಗಿದೆ. ಮಳಿಗೆಗಳನ್ನು ನಿಯಮಾನುಸಾರ ಇ ಹರಾಜು ಪ್ರಕ್ರಿಯೆ ಮೂಲಕ ಬಿಡ್ ಮಾಡಲಾಗುವುದು. ಇದಕ್ಕೆ ಯಾರು ಬೇಕಾದರೂ ಮುಕ್ತವಾಗಿ ಬಿಡ್‌ನಲ್ಲಿ ಭಾಗವಹಿಸಬಹುದಾಗಿದೆ. ಮಳಿಗೆಗಳಿಗೆ ಹೆಚ್ಚಿನ ಮೊತ್ತದ ಬಾಡಿಗೆ ನೀಡುವವರಿಗೆ ಮಳಿಗೆಗಳನ್ನು ನೀಡಲಾಗುವುದು ಎಂದರು.

    ನಮ್ಮ ಪ್ರಕ್ರಿಯೆ ಸರಿಯಾಗಿದ್ದರೆ ಜಿಲ್ಲಾಧಿಕಾರಿಗಳು ಅದಕ್ಕೆ ಅನುಮೋದನೆ ನೀಡುತ್ತಾರೆ. ಆನಂತರ ನೂತನವಾಗಿ 75 ಬಿಡ್‌ದಾರರು 12 ವರ್ಷಕ್ಕೆ ಪುರಸಭೆಯೊಂದಿಗೆ ಒಪ್ಪಂದ ಮಾಡಿಕೊಂಡು ಅವರು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳಬಹುದು. ಇದಕ್ಕೆ ಅರ್ಹ ಮಾನದಂಡಗಳು ನಿಗದಿ ಆಗಿರುವ ಮಳಿಗೆಗಳ ಅಡ್ವಾನ್ಸ್, ಬಾಡಿಗೆಯ ಬಗ್ಗೆ ನಮ್ಮ ಪುರಸಭಾ ಕಂದಾಯ ವಿಭಾಗದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
    ತಕ್ಷಣದಿಂದಲೇ ಎಲ್ಲ ಮಳಿಗೆಗಳ ಬಾಗಿಲು ಮುಚ್ಚಿಸಲಾಗುವುದು. ಅಲ್ಲದೆ ಹೆಚ್ಚುವರಿ 3 ತಿಂಗಳ ಬಾಡಿಗೆಯನ್ನು ಪಾವತಿಸಿಕೊಳ್ಳಲಾಗುವುದು. ಫೆ. 13 ರಿಂದ 27ರವರೆಗೆ ಈ ಬಿಡ್‌ನಲ್ಲಿ ಭಾಗವಹಿಸಬಹುದಾಗಿದ್ದು 28ರಂದು ಬಿಡ್ ನಡೆಯಲಿದೆ. ಈ ಬಗ್ಗೆ ಪತ್ರಿಕಾ ಹರಾಜು ಪ್ರಕಟಣೆಯನ್ನು ನೀಡಲಿದ್ದೇವೆ ಎಂದು ಡಾ.ಜಯಣ್ಣ ಹೇಳಿದರು.

    ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಶಿವುನಾಯಕ್ ಮತ್ತಿತರರು ಮಾತನಾಡಿ, ಪ್ರಸ್ತುತ ಮಳಿಗೆದಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ವ್ಯಾಪಾರಿಗಳೇ ಇದ್ದು ಅವರಿಗೆ ತೊಂದರೆ ಆಗಲಿದೆ. ಆದ್ದರಿಂದ ಅವರು ಮಾಡಿಕೊಂಡಿರುವ ಮಳಿಗೆಗಳನ್ನು ಅವರಿಗೆ ಮರು ಟೆಂಡರ್ ನೀಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಇನ್ನಿತರರು ಧ್ವನಿಗೂಡಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿಗಳು, ಕಾನೂನಿನಲ್ಲಿ ಆ ರೀತಿ ಅವಕಾಶ ಇರುವುದಿಲ್ಲ. ಅಲ್ಲದೆ ಈಗಾಗಲೇ ಇ ಹರಾಜಿಗೆ ಕೌನ್ಸಿಲ್ ಬಾಡಿಯಲ್ಲಿ ನಿರ್ಣಯ ತೆಗೆದುಕೊಂಡೇ ನಾವು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಒಪ್ಪಿಗೆ ಪಡೆದಿರುವುದರಿಂದ ಅಂತಹ ಯಾವುದೇ ರೀತಿಯ ನಿಯಮ ಉಲ್ಲಂಘನೆ ಮಾಡಲಾಗುವುದಿಲ್ಲ. ಆದರೆ ಬಿಡ್‌ನಲ್ಲಿ ಭಾಗವಹಿಸುವ ಪ್ರಸ್ತುತ ಮಳಿಗೆದಾರರು ತಾವು ಬಿಡ್‌ನಲ್ಲಿ ಭಾಗವಹಿಸಿಯೂ ಕೂಡ ಬೇರೊಬ್ಬರು ಹೆಚ್ಚಿನ ಮೊತ್ತಕ್ಕೆ ಕೂಗಿದರೆ ಅವರಿಗೆ ನಿಂತ ಹರಾಜಿನ ಮೊತ್ತದ ಮೇಲೆ ಶೇ.5 ರಷ್ಟು ಹೆಚ್ಚಿನ ಬಾಡಿಗೆ ನೀಡಿ ಮಳಿಗೆಯನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

    ಸಭೆ ಮುಂದೂಡಿಕೆ: ಸೋಮವಾರ 10 ಗಂಟೆಗೆ ನಿಗದಿಯಾಗಿದ್ದ ಸಭೆ ಸದಸ್ಯರ ಗೈರು ಹಾಜರಿಯಿಂದ ಕೋರಂ ಅಭಾವದ ಕಾರಣ ಮದ್ಯಾಹ್ನ 1ಗಂಟೆಗೆ ಮುಂದೂಡಲಾಯಿತು. ಮಧ್ಯಾಹ್ನ ನಡೆದ ಸಭೆಯಲ್ಲಿ ಹುಣಸೂರು ಉಪವಿಭಾಗಾಧಿಕಾರಿಗಳು ಹಾಗೂ ಪುರಸಭಾ ಆಡಳಿತಾಧಿಕಾರಿಯಾದ ಮಹಮದ್ ಹ್ಯಾರಿಸ್ ಸುಮೇರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಸೌಮ್ಯಾ ಲೋಕೇಶ್, ಸೈಯದ್ ಸಿದ್ದಿಕ್, ಉಮೇಶ್, ನಟರಾಜ್, ಮಿಕ್ಸರ್ ಶಂಕರ್, ಶಂಕರ್‌ಸ್ವಾಮಿ, ಸಂತೋಷ್‌ಗೌಡ, ಕೆ.ಬಿ.ವೀಣಾ ವೃಷಬೇಂದ್ರಪ್ಪ, ಜಾವೀದ್ ಪಾಷ, ವಾಹೀದ ಬಾನು, ಶಾರದಾ ನಾಗೇಶ್, ಅಶ್ವಿನಿ ಪುಟ್ಟರಾಜು, ಕಂದಾಯಾಧಿಕಾರಿ ರಮೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts