More

    ಹಳೇ ಕಾಮಗಾರಿ ಪೂರ್ಣಗೊಳಿಸುವರೆ ಶಾಸಕ ?

    ವಿಜಯವಾಣಿ ವಿಶೇಷ ಸಿಂಧನೂರು: 2013ರಲ್ಲಿ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿಯವರ ಅವಧಿಯಲ್ಲಿ ಬಾಕಿ ಉಳಿದ ಹಳೇ ಕಾಮಗಾರಿಗಳು ಸವಾಲಾಗಿದ್ದು ಅವುಗಳನ್ನು ಅನುಷ್ಠಾನಕ್ಕೆ ತರುವ ಜತೆಗೆ ಸೇವೆಗೆ ನೀಡುವುದು ಯಾವಾಗ ಎನ್ನುವ ಪ್ರಶ್ನೆ ಎದ್ದಿದೆ.

    ನಗರದ ಏಳುರಾಗಿಕ್ಯಾಂಪ್‌ನಲ್ಲಿ 2012-13ನೇ ಸಾಲಿನ ವಾಜಪೇಯ ವಸತಿ ಯೋಜನೆಯಡಿ 381 ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆದರೆ ಮನೆಗಳ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಕ್ಯಾಷುಟಿಕ್ ಎಜೆನ್ಸಿಯವರು ಮನೆ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದ್ದರು. ಸದ್ಯ ಏಳುರಾಗಿಕ್ಯಾಂಪ್ ಒಳಗೆ ತಿರುಗಾಡಿ ನೋಡಿದರೆ, ಬಡವರ ಗೋಳು ಹೇಳತೀರದು. ಮನೆ ನಿರ್ಮಾಣಕ್ಕೆ ಉಂಟಾದ ಅನುದಾನ ಕೊರತೆ, ಜನತೆಯ ಅಸಹಕಾರದಿಂದ ಸಮಸ್ಯೆ ಉದ್ಭವಿಸಿದೆ. ಈ ಹಿಂದೆ ಕೆಡಿಪಿ ಸಭೆಯೊಂದರಲ್ಲಿ ಇದುವರೆಗೆ 8 ಮನೆ ಮಾತ್ರ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಬಡವರಿಗೆ ಸುಭದ್ರ ಸೂರು ಒದಗಿಸಬೇಕಾದ ಯೋಜನೆಯೊಂದು, ಹಳ್ಳ ಹಿಡಿದಿರುವುದು ನೋವಿನ ಸಂಗತಿಯಾಗಿದೆ.

    ಇದನ್ನೂ ಓದಿ:ಮನೆ ಕಟ್ಟಲು ನಿವೇಶನ ದೊರಕಿಸಿಕೊಡಿ: ರಾಷ್ಟ್ರಪತಿಗೆ ಪತ್ರ ಬರೆದ ಬಾಲಕಿ…

    ಮಂಜುಳಾ ಪಾಟೀಲ್ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಗರಸಭೆಯಿಂದ ಸುಕಾಲಪೇಟೆ ಹಳ್ಳದ ಹತ್ತಿರ ಅಂದಾಜು 11 ಎಕರೆ, ಬಪ್ಪೂರು ರಸ್ತೆಯಲ್ಲಿ ಅಂದಾಜು 18 ಎಕರೆ ಭೂಮಿಯನ್ನು ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆಗಾಗಿ ಖರೀದಿಸಲಾಗಿತ್ತು. ಭೂಮಿ ಖರೀದಿಸಿದ ಬಳಿಕ ನಿವೇಶನ ಹಂಚಿಕೆಗೆ ಅರ್ಜಿಗಳನ್ನು ಕರೆದಿದ್ದು, 5 ಸಾವಿರಕ್ಕೂ ಅಧಿಕ ಬಡಜನರು ಅರ್ಜಿ ಹಾಕಿದ್ದರು. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನಿವೇಶನ ಮಾಡಿ, ಬಡವರಿಗೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಇದಲ್ಲದೆ ಸುಕಾಲಪೇಟೆಯ ಹಳ್ಳದ ಹತ್ತಿರ ಖರೀದಿ ಮಾಡಿರುವ ಭೂಮಿಯ ಕುರಿತಂತೆ ಅಪಸ್ವರವಿದ್ದು, ಈ ಕುರಿತು ಕೆಲವರು ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ.


    ನೀರಾವರಿ ಯೋಜನೆಗೂ ವಿಘ್ನ:


    ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ನೀರಾವರಿ ಇಲಾಖೆಯಿಂದ ತಿಮ್ಮಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಬಳಿಕ 2018ರಲ್ಲಿ ಶಾಸಕರಾದ ವೆಂಕಟರಾವ ನಾಡಗೌಡರು, ಏತ ನೀರಾವರಿ ಯೋಜನೆಗೆ ಅನುದಾನವಿಲ್ಲವೆಂದು, ಮತ್ತೊಮ್ಮೆ 97ಕೋಟಿಗೂ ಅಧಿಕ ಅನುದಾನ ಮಂಜೂರು ಮಾಡಿ ಯೋಜನೆಗೆ ಮರು ಚಾಲನೆ ನೀಡಿದ್ದರು. ಇದಾಗಿ ಐದು ವರ್ಷ ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. 14,000 ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿಗೆ ನೀರುಣಿಸುವ ಮಹತ್ತರ ಯೋಜನೆ ಇದಾಗಿದ್ದು, ಯೋಜನೆ ಪೂರ್ಣಗೊಂಡರೆ ರೈತರಿಗೂ ಫಲಪ್ರದವಾಗಲಿದೆ.


    ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಈ ಎಲ್ಲಾ ಯೋಜನೆಗಳ ವಿಚಾರವಾಗಿ ಶಾಸಕ ಹಂಪನಗೌಡ ಬಾದರ್ಲಿಯವರು ಕಾಳಜಿವಹಿಸಿ, ಯೋಜನೆಗಳ ಪೂರ್ಣಕ್ಕೆ, ಬಡವರ ಮನೆ ಹಂಚಿಕೆಗೆ ಮುತುವರ್ಜಿವಹಿಸಬೇಕೆಂಬುದು ಜನರ ಒತ್ತಾಸೆಯಾಗಿದೆ.



    ಸಿಂಧನೂರಿನ ಏಳುರಾಗಿ ಕ್ಯಾಂಪ್‌ನಲ್ಲಿ ಬಡಜನರಿಗಾಗಿ ವಾಜಪೇಯಿ ವಸತಿ ಯೋಜನೆಯ ಮನೆಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ನೂತನ ಶಾಸಕರು ಗಮನಹರಿಸಬೇಕು. ಹಾಗೆಯೇ ಬಡವರಿಗೆ ನಿವೇಶನ ಹಂಚಿಕೆ ಮಾಡಲೆಂದು ಖರೀದಿಸಿದ ಹೊಲಗಳನ್ನು ಅಭಿವೃದ್ದಿಪಡಿಸಬೇಕು. ಸುಕಾಲಪೇಟೆ ಹತ್ತಿರ ಖರೀದಿಸಿದ ಹೊಲವು ಹಳ್ಳದಲ್ಲಿ ಇರುವುದು ಸಮಸ್ಯೆಯಾಗಿದೆ.


    ನಾಗರಾಜ ಪೂಜಾರ್
    ಸಿಪಿಐ(ಎಂಎಲ್) ರಾಜ್ಯ ಸಮಿತಿ ಸದಸ್ಯ, ಸಿಂಧನೂರು.


    2013ರ ಸಂದರ್ಭದಲ್ಲಿ ಏಳುರಾಗಿಕ್ಯಾಂಪ್‌ನ ಬಡ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಯೋಚನೆಯಿಂದ ವಾಜಪೇಯಿ ವಸತಿ ಯೋಜನೆಯಡಿ 381ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಕೆಲವು ತಾಂತ್ರಿಕ ತೊಂದರೆಯಿಂದ ಪೂರ್ಣಗೊಂಡಿಲ್ಲ. ಈಗ ಸಂಪೂರ್ಣ ಮಾಹಿತಿ ಪಡೆದುಕೊಂಡು, ಯೋಜನೆ ಪೂರ್ಣಗೊಳಿಸಲು ಮುಂದಾಗುವೆ.


    ಹಂಪನಗೌಡ ಬಾದರ್ಲಿ

    ಶಾಸಕ, ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts