More

    ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ ನಿರುಪಯುಕ್ತ ವಾಹನಗಳ ನಿಲುಗಡೆ

    ಹರೀಶ್ ಮೋಟುಕಾನ ಮಂಗಳೂರು
    ಮಂಗಳೂರು ನಗರದ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ ಹಾಗೂ ರಸ್ತೆ ಬದಿ ನೂರಾರು ಗುಜರಿ ವಾಹನಗಳು ಕೊಳೆಯುತ್ತಿವೆ. ಇದರಿಂದ ಅಪಘಾತ ಸಂಭವಿಸುವ ಜತೆಗೆ ಸ್ಮಾರ್ಟ್ ಸಿಟಿಯ ಸೌಂದರ್ಯಕ್ಕೂ ಕಪ್ಪು ಚುಕ್ಕೆಯಾಗಿದೆ.

    ಉರ್ವ ಪೊಲೀಸ್ ಠಾಣೆ ಬಳಿ ಜೀಪು, ಟಿಪ್ಪರ್, ಕಾರುಗಳು, ಬೈಕ್ ಸಹಿತ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಲಾಗಿದೆ. ಕೆಲವು ವಾಹನಗಳ ಸುತ್ತ ಗಿಡಿಗಳು ಬೆಳೆದು ಕಾಡಿನಂತೆ ಕಾಣುತ್ತಿವೆ. ಮುಡಾ ಕಚೇರಿ ಆವರಣದೊಳಗೆ ಪೊಲೀಸ್ ಇಲಾಖೆಗೆ ಸೇರಿದ ಜೀಪು ತುಕ್ಕು ಹಿಡಿದು ಕೊಳೆಯುತ್ತಿದೆ. ಬರ್ಕೆ ಠಾಣೆಯ ಎದುರು ರಸ್ತೆ ಬದಿ ಲಾರಿ, ಟ್ಯಾಂಕರ್ ತುಕ್ಕು ಹಿಡಿಯುತ್ತಿದೆ. ಕಾವೂರು ಪೊಲೀಸ್ ಠಾಣೆ ಬಳಿ ರಸ್ತೆ ಬದಿ ಲಾರಿ, ಬಸ್ ಮತ್ತಿತರ ವಾಹನಗಳನ್ನು ನಿಲ್ಲಿಸಲಾಗಿದೆ. ಕದ್ರಿ ಠಾಣೆ ಎದುರಲ್ಲೂ ವಾಹನಳಿವೆ. ಇಲ್ಲಿದ್ದ ಹೆಚ್ಚಿನ ವಾಹನಗಳನ್ನು ರಸ್ತೆ ಕಾಮಗಾರಿ ಸಂದರ್ಭ ತೆರವು ಮಾಡಲಾಗಿದೆ.

    ಸರ್ಕಾರಿ ಇಲಾಖೆ ವಾಹನಗಳು ನಿರುಪಯುಕ್ತವಾದಾಗ ಅದನ್ನು ವಿಲೇವಾರಿ ಮಾಡಬೇಕು. ಆದರೆ ಬಹುತೇಕ ಇಲಾಖೆಗಳಲ್ಲಿ ಅವುಗಳು ತುಕ್ಕು ಹಿಡಿದು ಮಣ್ಣಾಗಿ ಹೋಗುವುದು ಸಾಮಾನ್ಯ. ರಸ್ತೆ ಬದಿ ನಿರುಪಯುಕ್ತ ವಾಹನಗಳನ್ನು ನಿಲ್ಲಿಸುವುದರಿಂದ ಅಪಘಾತಕ್ಕೂ ಕಾರಣವಾಗುತ್ತದೆ. ಕೆಲ ಸಮಯದ ಹಿಂದೆ ಮರೋಳಿಯಲ್ಲಿ ನಿಲ್ಲಿಸಲಾಗಿದ್ದ ನಿರುಪಯುಕ್ತ ಟಿಪ್ಪರ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದು ಮೀನು ವ್ಯಾಪಾರಿ ಮೃತಪಟ್ಟಿದ್ದರು. ನಗರದ ಹೆಚ್ಚಿನ ಗ್ಯಾರೇಜ್ ಬಳಿಯಲ್ಲೂ ನಿರುಪಯುಕ್ತ ವಾಹನಗಳು ತುಕ್ಕು ಹಿಡಿಯುತ್ತಿವೆ. ಕೆಲವು ಗ್ಯಾರೇಜ್‌ಗಳು ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿ ವಾಹನ ನಿಲ್ಲಿಸುತ್ತಿವೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಇಲ್ಲಿ ಸ್ವಚ್ಛತೆಯನ್ನೂ ಕಡೆಗಣಿಸಲಾಗುತ್ತಿದೆ. ಮಳೆಗಾಲದಲ್ಲಿ ವಾಹನದೊಳಗೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂೆ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಹೆದ್ದಾರಿ ಬದಿಯಲ್ಲೇ ವಾಹನ: ಪಂಪ್‌ವೆಲ್‌ನಿಂದ ಪಡೀಲ್ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಕಂಕನಾಡಿ ಗರೋಡಿ ಬಳಿ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಗಳಿವೆ. ಅಪಘಾತಕ್ಕೊಳಗಾದ ವಾಹನಗಳು, ಅಪರಾಧ ಚಟುವಟಿಕೆಗಳಿಗೆ ಬಳಸಿದ ವಾಹನಗಳನ್ನು ತಂದು ಇಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನಿಲ್ಲಿಸಲಾಗುತ್ತಿದೆ. ಪ್ರತಿದಿನ ಸಾವಿರಾರು ವಾಹನಗಳು ಹೆದ್ದಾರಿಯಲ್ಲಿ ಹಾದು ಹೋಗುತ್ತವೆ. ಲಾರಿ, ಟಿಪ್ಪರ್‌ಗಳನ್ನು ತಂದು ರಸ್ತೆ ಬದಿ ನಿಲ್ಲಿಸುವುದರಿಂದ ಅಗಲ ಕಿರಿದಾಗಿರುವ ಇಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ನಿರುಪಯುಕ್ತ ಹಾಗೂ ಮುಟ್ಟುಗೋಲು ಹಾಕಿರುವ ವಾಹನಗಳನ್ನು ಇಡಲು ನಗರದ ಹೊರ ವಲಯದಲ್ಲಿ ಪ್ರತ್ಯೇಕ ಜಾಗ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ, ಸಾರಿಗೆ ಹಾಗೂ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಮನವಿ ನೀಡಿದ್ದಾರೆ.

    ಮಂಗಳೂರು ನಗರದ ಪೊಲೀಸ್ ಠಾಣೆಗಳ ರಸ್ತೆ ಬದಿ, ವಿವಿಧ ಇಲಾಖೆಗಳ ಕಚೇರಿಗಳ ಬಳಿ ನಿರುಪಯುಕ್ತ ವಾಹನಗಳನ್ನು ಒಂದೇ ಕಡೆ ಜೋಡಿಸಿಡಲು ಪ್ರತ್ಯೇಕ ಜಾಗದ ಅವಶ್ಯಕತೆ ಇದೆ. ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು.
    ವೇದವ್ಯಾಸ ಕಾಮತ್, ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts