More

    ಕಳ್ಳನೇ ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​!; ಕಳ್ಳತನದಲ್ಲಿ 12 ವರ್ಷಗಳ ಅನುಭವ, ಈಗ ಕೊಡುತ್ತಿದ್ದಾನೆ ಮನೆಗಳವು ತಡೆಯುವಂಥ ಐಡಿಯಾ!

    ಲಂಡನ್​: ಕ್ಲಾಸ್​ರೂಮ್​ನಲ್ಲಿ ಜಾಸ್ತಿ ಗಲಾಟೆ ಮಾಡುವ ವಿದ್ಯಾರ್ಥಿಯನ್ನು ಕ್ಲಾಸ್​ ಲೀಡರ್​ ಮಾಡುವುದನ್ನು ಬಹಳಷ್ಟು ಮಂದಿ ನೋಡಿರುತ್ತಾರೆ, ಕೇಳಿರುತ್ತಾರೆ. ಅದೇರೀತಿ ಒಂದು ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​ ಆಗಿ ದೊಡ್ಡ ಕಳ್ಳನನ್ನೇ ನೇಮಿಸಿದರೆ ಹೇಗಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

    ಏಕೆಂದರೆ ಇಲ್ಲೊಂದು ಸ್ಮಾರ್ಟ್​ ಹೋಮ್​ ಸೆಕ್ಯುರಿಟಿ ಸಂಸ್ಥೆಗೆ ಮನೆಗಳ್ಳನೊಬ್ಬನನ್ನೇ ಕನ್ಸಲ್ಟೆಂಟ್​ ಆಗಿ ನೇಮಿಸಲಾಗಿದೆ. ವಿಶೇಷವೆಂದರೆ, ಈತ 12 ವರ್ಷಗಳ ಕಾಲ ಕಳ್ಳತನದಲ್ಲಿ ತೊಡಗಿದ್ದು, ಈಗ ಅದನ್ನೆಲ್ಲ ತೊರೆದು ಉತ್ತಮ ರೀತಿಯ ಜೀವನ ನಡೆಸಲು ನಿರ್ಧರಿಸಿ ಸೆಕ್ಯುರಿಟಿ ಸಂಸ್ಥೆಯ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದಾನೆ.

    ಇಂಗ್ಲೆಂಡ್​ನ ವಿಲ್ಟ್​ಶೈರ್​ನ ವಾರ್ಮಿನಿಸ್ಟರ್​ನ ಲ್ಯೂಕ್ ಹ್ಯಾರಿಸ್ ಎಂಬಾತನೇ ಈ ಸೆಕ್ಯುರಿಟಿ ಕನ್ಸಲ್ಟೆಂಟ್​. ತಾನು ಕಳ್ಳತನ ಮಾಡಿದ ಬೆನ್ನಿಗೆ ಕೆಲವು ಮನೆಗಳವರು ಸಾವಿಗೀಡಾದ್ದರಿಂದ ಬೇಸತ್ತ ಈತ ಕಳ್ಳತನ ಮಾಡುವ ಚಾಳಿ ತೊರೆದು ಸಭ್ಯ ಹಾದಿಯನ್ನು ಹಿಡಿದಿದ್ದಾನೆ. ಕಳ್ಳತನ ಬಿಟ್ಟ ಬಳಿಕ ಬೇರೆ ಕೆಲವು ಕೆಲಸಗಳನ್ನು ಮಾಡಿದ್ದ ಈತ ಸದ್ಯ ಸೆಕ್ಯುರಿಟಿ ಸಂಸ್ಥೆಯ ಸಲಹೆಗಾರನಾಗಿದ್ದಾನೆ.

    ಇನ್ನೂ ವಿಶೇಷ ಎಂದರೆ ಈತ ಕಳ್ಳತನದಲ್ಲಿನ ತನ್ನ 12 ವರ್ಷಗಳ ಅನುಭವದ ಆಧಾರದ ಮೇರೆಗೆ ಈಗ ಮನೆಗಳ್ಳತನ ಆಗದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ಉಪಾಯಗಳನ್ನು ಕೂಡ ಹೇಳುತ್ತಿದ್ದಾನೆ. ಕ್ರಿಸ್​ಮಸ್​ ರಜೆ ಸಂದರ್ಭದಲ್ಲಿ ನಡೆಯುವ ಕಳ್ಳತನ ತಡೆಯುವಲ್ಲಿ ಕೆಲವು ಟಿಪ್ಸ್ ಕೂಡ ನೀಡಿದ್ದು, ಅವು ಇಂತಿವೆ.

    1. ಬೆಲೆಬಾಳುವ ವಸ್ತುಗಳು ಕಿಟಕಿ ಮೂಲಕ ಹೊರಗೆ ಕಾಣದಂತೆ ಇರಿಸಿ.
    2. ಕೆಲವು ವಸ್ತುಗಳನ್ನು ನಿಮ್ಮ ಕುಟುಂಬ ಸದಸ್ಯರಿಂದ ಮರೆಮಾಚಿ ಇಡಲು ಮನೆಯಲ್ಲಿನ ಗ್ಯಾರೇಜ್​-ಷೆಡ್​ ಸೂಕ್ತ ಸ್ಥಳ ಎನಿಸಿದರೂ ಅಂಥವನ್ನು ಅಲ್ಲಿಡಬೇಡಿ. ಏಕೆಂದರೆ ಅಂಥ ಸ್ಥಳಗಳನ್ನು ಬೇಧಿಸಿ ಒಳನುಗ್ಗುವುದು ಸುಲಭ.
    3. ಮನೆಬಿಟ್ಟು ಹೋಗುವಾಗ ಬೀಗ ಹಾಕಿರುವುದೂ ಸೇರಿ ಎಲ್ಲ ಭದ್ರತಾ ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ಎರಡೆರಡು ಬಾರಿ ಪರಿಶೀಲಿಸಿಕೊಂಡು ಹೊರಡಿ.
    4. ಮನೆಯಿಂದ ಹೊರಗೆ ಪ್ರವಾಸ ಇತ್ಯಾದಿ ಹೋಗುವಾಗ ಸೋಷಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಪೋಸ್ಟ್ ಹಾಕಬೇಡಿ. ಅದೊಂಥರ ಕಳ್ಳರಿಗೆ ಆಹ್ವಾನ ನೀಡಿದಂತೆ.
    5. ನೆರೆಹೊರೆಯುವರ ಜತೆ ಉತ್ತಮ ಸಂಬಂಧವಿದ್ದರೆ ಅವರ ಬಳಿ ನಿಮ್ಮ ಮನೆ ಮೇಲೊಂದು ನಿಗಾ ಇರಿಸಲು ಹೇಳಿ. ಆಗಾಗ ಅವರಿಗೆ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿರಿ.
    6. ಮನೆಯಲ್ಲಿ ಯಾರೂ ಇಲ್ಲ ಎಂಬುದು ಗೊತ್ತಾಗುವಂತಹ ವಾತಾವರಣ ಇರದಂತೆ ನೋಡಿಕೊಳ್ಳಿ.
    7. ರಾತ್ರಿ ಹೊತ್ತು ಇಂತಿಷ್ಟೇ ಕಾಲ ಬೆಳಗುವಂಥ ಕೆಲವು ಆಟೋಮ್ಯಾಟಿಕ್​ ಹಾಲಿಡೇ ಮೋಡ್ ಲೈಟ್​ಗಳು ಸಿಗುತ್ತವೆ. ಮನೆ ಬಿಟ್ಟು ದೂರ ಇರಬೇಕಾದ ಸಂದರ್ಭಗಳಲ್ಲಿ ಅಂಥ ಲೈಟ್ಸ್ ಬಳಸಿ. (ಏಜೆನ್ಸೀಸ್​)

    ಪೊಲೀಸ್​ ಕ್ವಾರ್ಟರ್ಸ್​ನ 6ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts