More

    ನಿವೃತ್ತ ಡಿವೈಎಸ್​ಪಿ ಮನೆ ಒಳಗೆ ಹೋದ್ರೂ ಬಿಡದೆ ಕೊಚ್ಚಿ ಕೊಂದ್ರು!

    ಬೆಳಗಾವಿ: ವಿಜಯದಶಮಿಯಂದೇ ಭಾನುವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ರೌಡಿಯನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

    ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಬಸವರಾಜ ಹೊಳೆಪ್ಪ ದಡ್ಡಿ (26) ಮತ್ತು ಬಸವಣ್ಣಿ ಸಿದ್ದಪ್ಪ ನಾಯಿಕ(27) ಬಂಧಿತರು. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬೆಳಗಾವಿ ಸಂಗಮೇಶ್ವರ ನಗರದ ಶಹಬಾಜ್ ಶೇರಖಾನ್ ಪಠಾಣ(24) ಎಂಬಾತನನ್ನು ಶಿವಬಸವ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಪರಾರಿಯಾಗಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಬಾಜ್ ಅವರ ತಂದೆ ಶೇರಖಾನ್ ಪಠಾಣ ಅವರು ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 2016ರಲ್ಲಿ ಶಹಬಾಜ್ ಭಾಗಿಯಾಗಿದ್ದ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಹತ್ಯೆಗೈದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಹತ್ಯೆಯಾದ ಶಹಬಾಜ್ ಪಠಾಣ್ ವಿರುದ್ಧ ವ್ಯಕ್ತಿಯೊಬ್ಬನ ಹತ್ಯೆ ಹಾಗೂ ಹತ್ಯೆಗೆ ಯತ್ನ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದ್ದವು. ದೂರುಗಳು ದಾಖಲಾಗುತ್ತಿದ್ದಂತೆ ಶಹಬಾಜ್ ಕಾಕತಿ ತೊರೆದು ಬೆಳಗಾವಿಯ ಆಜಂ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. 

    ಭಾನುವಾರ ರೆಸ್ಟೋರೆಂಟ್‌ವೊಂದರಲ್ಲಿ ಸ್ನೇಹಿತನ ಬರ್ತಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ 11.30ಕ್ಕೆ ಹೊರಬಂದಾಗ, ಗುಂಪೊಂದು ಆತನ ಹತ್ಯೆಗೆ ಪ್ರಯತ್ನಿಸಿದೆ. ಆದರೆ, ಶಹಬಾಜ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬೆನ್ನಟ್ಟಿದ ಗುಂಪು ಗ್ಯಾಂಗ್‌ವಾಡಿ ಪ್ರದೇಶಕ್ಕೆ ಬರುತ್ತಿದ್ದಂತೆ ದಾಳಿಗೆ ಮುಂದಾಗಿದ್ದಾರೆ. ಶಹಬಾಜ್ ಹಂತಕರ ಕೈಗೆ ಸಿಗುತ್ತಿದ್ದಂತೆ, ಮಚ್ಚಿನಿಂದ ಆತನ ಕೈ ಕತ್ತರಿಸಿದ್ದಾರೆ. ಈ ವೇಳೆ, ಜೀವ ರಕ್ಷಿಸಿಕೊಳ್ಳಲು ಶಹಬಾಜ್ ನಿವೃತ್ತ ಡಿವೈಎಸ್ಪಿಯೊಬ್ಬರ ಮನೆಯೊಳಗೆ ನುಗ್ಗಿದ್ದಾನೆ. ಅಲ್ಲಿಗೂ ತೆರಳಿದ ಆರೋಪಿಗಳು, ಮಚ್ಚಿನಿಂದ ಆತನ ಕುತ್ತಿಗೆಗೆ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಶಹಬಾಜ್‌ನನ್ನು ಹಂತಕರು ಬೆನ್ನಟ್ಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೌಡಿ ಶಹಬಾಜ್‌ನನ್ನು ಸ್ಥಳೀಯರು ರಾತ್ರಿಯೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    2016 ರಲ್ಲಿ ಇಬ್ಬರ ನಡುವೆ ಜಗಳವಾದ ಬಗ್ಗೆ ಶಹಬಾಜ್ ಹಾಗೂ ಇತರ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದೇವೆ.
    |ವಿಕ್ರಮ ಆಮಟೆ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts