More

    ಸೇತುವೆ ಅಡಿಭಾಗ ತುಕ್ಕು, ಸಂಚಾರಕ್ಕಿಲ್ಲ ಲಾಯಕ್ಕು

    ರವೀಂದ್ರ ಕೋಟ
    ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ, ಕೋಡಿಕನ್ಯಾಣ ಸಂಪರ್ಕಿಸುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಈ ಬಗ್ಗೆ ಎಷ್ಟೇ ಎಚ್ಚರಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
    ಈ ಸೇತುವೆ ಶಿಥಿಲಗೊಳ್ಳುತ್ತಿರುವ ಬಗ್ಗೆ ಹಲವು ವರ್ಷಗಳಿಂದ ವರದಿ ಬಿತ್ತರಿಸಿದರೂ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಗಂಭೀರವಾಗಿ ಪರಿಗಣಿಸಿಲ್ಲ. ಭಾರಿ ಗಾತ್ರದ ಕಲ್ಲುಗಳನ್ನು ಹೊತ್ತೊಯ್ಯುವ ಲಾರಿಗಳ ಸಂಚಾರದಿಂದ ಸೇತುವೆಗೆ ಸಂಚಕಾರ ಬಂದೊದಗಿದ್ದು, ಸ್ಥಳೀಯಾಡಳಿತ ಧ್ವನಿ ಎತ್ತದೆ ಸೇತುವೆ ಮರುನಿರ್ಮಾಣ ಅಸಾಧ್ಯ ಎನ್ನುತ್ತಾರೆ ಸ್ಥಳೀಯರು. ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳೇ ಮೌನ ವಹಿಸಿದರೆ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.

    1983-84ರ ಅವಧಿಯಲ್ಲಿ ಅಂದರೆ 38 ವರ್ಷಗಳ ಹಿಂದೆ ಪಾರಂಪಳ್ಳಿ -ಸಾಲಿಗ್ರಾಮ ಸಂಪರ್ಕಕ್ಕೆ ಮರದ ಕಾಲುಸೇತುವೆ ಈ ಜಾಗದಲ್ಲಿತ್ತು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಆ ಕಾಲದಲ್ಲಿ ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿ, ಹೋರಾಟದ ನಾಯಕತ್ವ ವಹಿಸಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದ್ದರು. ನಿರಂತರ ಹೋರಾಟದ ಫಲವಾಗಿ ಪಿಡಬ್ಲುೃಡಿ ಅನುದಾನದಲ್ಲಿ ಆಗಿನ ಶಾಸಕ ಬಸವರಾಜ್ ಅವಧಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ, ಕೇರಳದ ಗುತ್ತಿಗೆದಾರರು ಕೆಲಸ ನಿರ್ವಹಿಸಿದ್ದರು. ಎರಡು ಸ್ಪಾನ್ ಹೊಂದಿರುವ ಸೇತುವೆ ಸುಮಾರು 60 ಮೀಟರ್ ಉದ್ದ, 12 ಅಡಿ ಅಗಲದಲ್ಲಿ ನಿರ್ಮಾಣವಾಗಿ ಶಾಸಕ ಬಸವರಾಜ್ ಉದ್ಘಾಟಿಸಿದ್ದರು. ಸಾಲಿಗ್ರಾಮದಿಂದ ಪಾರಂಪಳ್ಳಿ ಸಂಪರ್ಕಕ್ಕೆ, ಮೀನುಗಾರರ ದೈನಂದಿನ ಕೆಲಸಗಳಿಗೆ, ವಿದ್ಯಾರ್ಥಿಗಳು ಶಾಲೆಗೆ ತೆರಳಲು ಇದೆ ಸೇತುವೆ ಮುಖ್ಯ ಹಾದಿ.

    ಹೀಗಿದೆ ಸೇತುವೆಯ ಸದ್ಯದ ಸ್ಥಿತಿ
    ಸೇತುವೆಯ ಸದ್ಯದ ಸ್ಥಿತಿ ಗಂಭೀರವಾಗಿದೆ ಎನ್ನುತ್ತಾರೆ ಇಲ್ಲಿನ ಜನ . ಸೇತುವೆ ಮೇಲ್ಭಾಗದ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಪಟ್ಟಣ ಪಂಚಾಯಿತಿ ತೇಪೆ ಹಾಕಿ ಸರಿ ಮಾಡುತ್ತಿದೆ. ಸೇತುವೆಯ ಎರಡೂ ಬದಿಯ ಪ್ಯಾನೆಲ್‌ಗಳು ವಾಹನ ಡಿಕ್ಕಿಯಾಗಿದ್ದರಿಂದ ಒಂದು ಕಡೆ ಸಂಪೂರ್ಣ ಕುಸಿದಿದೆ. ಸೇತುವೆಯ ಅಡಿಭಾಗದ ಬೀಮ್‌ಗಳಿಲ್ಲಿ ಸಿಮೆಂಟ್ ಕಿತ್ತು ಹೋಗಿ ಒಳಗಿನ ಕಬ್ಬಿಣದ ಕಂಬಿಗಳು ಉಪ್ಪು ನೀರಿನ ಹೊಡೆತಕ್ಕೆ ತುಕ್ಕು ಹಿಡಿದು ಉದುರುತ್ತಿವೆ. ಮಳೆಗಾಲಕ್ಕೆ ಹೀಗೆಯೇ ಬಿಟ್ಟರೆ ಭಾರಿ ವಾಹನಗಳ ಸಂಚಾರದ ವೇಳೆ ಸೇತುವೆ ಹೊಳೆ ಪಾಲಾಗುವ ಭೀತಿ ಇದೆ. ಸೇತುವೆ ಮುರಿದರೆ ಪಾರಂಪಳ್ಳಿ ಪರಿಸರದವರು ಒಂದೋ ಕೋಡಿಕನ್ಯಾನ ಮೂಲಕ ಸಾಸ್ತಾನಕ್ಕೆ ಬಂದು ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 5 ಕಿ.ಮೀ. ಸುತ್ತು ಹಾಕಿ ಬರಬೇಕು. ಇಲ್ಲವೇ ಪಾರಂಪಳ್ಳಿಯವರು ಮಣೂರು ಪಡುಕರೆಗೆ ಬಂದು ಅಲ್ಲಿನ ಕೋಟ ಅಮೃತೇಶ್ವರಿ ಮೀನಗಾರಿಕಾ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸುಮಾರು 6 ಕಿ.ಮೀ. ಸುತ್ತು ಹಾಕಿ ಸಾಲಿಗ್ರಾಮಕ್ಕೆ ಬರಬೇಕು. ಸದ್ಯ ಪಾರಂಪಳ್ಳಿ ಸೇತುವೆ ಮೇಲೆ ದೊಡ್ಡ ವಾಹನಗಳ ಸಂಚಾರ ನಿಷೇಧಿಸಬೇಕು. ಸ್ಥಳೀಯರು ಹೇಳುವಂತೆ ಸೇತುವೆ ಮುರಿದ ಬಳಿಕ ಸರಿಪಡಿಸುವ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಮರದ ಕಾಲುಸೇತುವೆ
    ಪಾರಂಪಳ್ಳಿ -ಸಾಲಿಗ್ರಾಮ ಸಂಪರ್ಕಕ್ಕೆ ಮತ್ತೊಂದು ಸೇತುವೆ ಇದೆ. ಅದು ನಾಯ್ಕನಬೈಲಿನಲ್ಲಿರುವ ಮರದ ಕಾಲುಸೇತುವೆ. ಪ್ರತಿವರ್ಷ ಈ ಸೇತುವೆಯನ್ನು ಶಾಶ್ವತ ಸೇತುವೆಯಾಗಿಸುವ ಕುರಿತು ಸ್ಥಳೀಯರು ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಈ ಕಾಲುಸೇತುವೆ ಚುನಾವಣೆಯ ಆಶ್ವಾಸನೆಗಷ್ಟೇ ಸೀಮಿತವಾಗಿದ್ದು ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ನಾಯ್ಕನಬೈಲ್‌ನಲ್ಲಿ ಶಾಶ್ವತ ಸೇತುವೆಯಾದಲ್ಲಿ ಪಾರಂಪಳ್ಳಿ ಸೇತುವೆಗೆ ಪರ್ಯಾಯ ವ್ಯವಸ್ಥೆಯಾಗುತ್ತಿತ್ತು. ಪಾರಂಪಳ್ಳಿ ಸೇತುವೆಯ ಮೇಲಿನ ಒತ್ತಡವೂ ಕಡಿಮೆಯಾಗುತ್ತಿತ್ತು.

    ಪಾರಂಪಳ್ಳಿ ಸೇತುವೆ ಕುಸಿತ ಭೀತಿಯಲ್ಲಿದ್ದು, ಅದರ ಬಗ್ಗೆ ನಿಗಾ ವಹಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷೃ ತೋರಿದಂತಿದೆ. ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಪಟ್ಟಣ ಪಂಚಾಯಿತಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಅದಕ್ಕೆ ವಾಹನ ಸಂಚಾರಕ್ಕೆ ತಡೆ ನೀಡಬೇಕು. ಹೊಸ ಸೇತುವೆ ನಿರ್ಮಾಣಕ್ಕೂ ಮುಂದಾಗಬೇಕು.
    ರಾಘವೇಂದ್ರ ಪೂಜಾರಿ, ಮಧ್ಯಸ್ಥರತೋಟ ಪಾರಂಪಳ್ಳಿ

    ಪಾರಂಪಳ್ಳಿ ಸೇತುವೆ ಕುರಿತು ಈ ಹಿಂದೆ ವಿಜಯವಾಣಿಯಲ್ಲಿ ವರದಿ ಪ್ರಕಟಿಸಿದರ ನಂತರ ಅಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿರುವ ಬಗ್ಗೆ ಬ್ಯಾನರ್ ಅಳವಡಿಸಿದ್ದೇವೆ. ಆದರೂ ಸೇತುವೆ ಮೇಲೆ ತಿಯಾದ ಭಾರ ಹೊತ್ತೊಯ್ಯುವ ವಾಹನಗಳ ಸಂಚಾರ ಅತಿಯಾಗಿರುವ ದೂರುಗಳಿವೆ. ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸೇತುವೆಗೆ ಕಾಯಕಲ್ಪ ನೀಡಲು ಪ್ರಯತ್ನಿಸಲಾಗುವುದು. ಸದ್ಯದ ಸ್ಥಿತಿಯಲ್ಲಿ ಭಾರದ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
    ಅರುಣ್ ಬಿ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಸಾಲಿಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts