More

    ಅಕ್ಟೋಬರ್ ಒಳಗೆ ಕ್ರೀಡಾ ಕೇಂದ್ರ ಉದ್ಘಾಟನೆ

    ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಿರ್ಮಿಸುತ್ತಿರುವ ಸ್ಪೋರ್ಟ್ಸ್ ಸೆಂಟರ್‌ಅನ್ನು ಅಕ್ಟೋಬರ್ ಒಳಗೆ ಉದ್ಘಾಟಿಸಲಾಗುವುದು ಎಂದು ಕಾರ್ಯದರ್ಶಿ ಸಂತೋಷ ಮೆನನ್ ಹೇಳಿದರು.

    ನಗರದಲ್ಲಿ ಮಂಗಳವಾರ ಕ್ರೀಡಾಂಗಣದ ಗುಣಮಟ್ಟ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಕೋಟಿ ರೂ. ವೆಚ್ಚದಲ್ಲಿ ಸ್ಪೋರ್ಟ್ಸ್ ಸೆಂಟರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 16 ಕೋಟಿ ರೂ. ವ್ಯಯಿಸಿ, ಶೇ.70 ಕಾಮಗಾರಿ ಕೈಗೊಳ್ಳಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿತ್ತು. ಕಾಮಗಾರಿಗೆ ವೇಗ ನೀಡಲಾಗುವುದು ಎಂದರು.

    ಸ್ಪೋರ್ಟ್ಸ್ ಸೆಂಟರ್ ನಿರ್ಮಾಣವಾದರೆ, ಇಲ್ಲಿ ಜರುಗುವ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವ ಆಟಗಾರರಿಗೆ ವಸತಿ ಹಾಗೂ ಅಭ್ಯಾಸಕ್ಕೂ ಅನುಕೂಲವಾಗಲಿದೆ. ಜಿಮ್, ಈಜುಕೊಳ, ಹೋಟೆಲ್ ಮತ್ತಿತರ ಸೌಲಭ್ಯ ಒಳಗೊಂಡಿರುವ ಈ ಸೆಂಟರ್‌ನಿಂದ ಬರುವ ಆದಾಯದಲ್ಲಿ ಕ್ರೀಡಾಂಗಣ ನಿರ್ವಹಣೆ ಸುಲಭವಾಗಲಿದೆ ಎಂದು ಮಾಹಿತಿ ನೀಡಿದರು.

    ಕೆಪಿಎಲ್ ಶೀಘ್ರ ಆರಂಭ: ರಾಜ್ಯದಲ್ಲಿ ಈ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಆಯೋಜಿಸಲು ಚಿಂತನೆ ನಡೆಸಿದ್ದೇವೆ. ಈ ನಿಟ್ಟಿನಲ್ಲಿ ಬಿಸಿಸಿಐ ಪ್ರಕಟಿಸುವ ವಿವಿಧ ಟೂರ್ನಿಗಳ ದಿನಾಂಕ, ಮೈದಾನಗಳ ಲಭ್ಯತೆ ಆಧರಿಸಿ ಕೆಪಿಎಲ್‌ಗೆ ದಿನಾಂಕ ನಿಗದಿಪಡಿಸಲಾಗುವುದು. ಬೆಳಗಾವಿ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ಪಂದ್ಯ ಆಯೋಜಿಸಲು ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಹೀಗಾಗಿ, ಬೆಳಗಿನ ಅವಧಿಯಲ್ಲಿ ಇಲ್ಲಿ ಕೆಲ ಪಂದ್ಯ ಆಯೋಜಿಸಲು ಪ್ರಯತ್ನಿಸಲಾಗುವುದು. ಕರೊನಾ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಯಾವುದೇ ಮಹತ್ವದ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇನ್ನು ಹಂತ-ಹಂತವಾಗಿ ಒಂದೊಂದೇ ಟೂರ್ನಿ ನಡೆಸಲಾಗುವುದು ಎಂದು ಹೇಳಿದರು. ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, ಬೆಳಗಾವಿ ಕ್ರಿಕೆಟ್ ಮೈದಾನ ಗುಣಮಟ್ಟದಿಂದ ಕೂಡಿದೆ. ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳೂ ಇಲ್ಲಿ ನಡೆದಿದ್ದು, ಬಿಸಿಸಿಐ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

    ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲೂ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲಾಗುವುದು ಎಂದರು. ಧಾರವಾಡ ವಲಯದ ಚೇರ್ಮನ್ ವೀರಣ್ಣ ಸವಡಿ, ಸಂಯೋಜಕ ಅವಿನಾಶ ಪೋತದಾರ, ಜೆ.ಅಭಿರಾಮ, ತಿಲಕ ನಾಯ್ಡು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts