More

    ತಹಸೀಲ್ದಾರ್ ಎದುರು ಮಚ್ಚು ಝಳಪಿಸಿದ ಒತ್ತುವರಿದಾರರು

    ಸಾಗರ: ಸರ್ಕಾರಿ ಜಾಗ ಒತ್ತುವರಿ ತೆರವು ಮಾಡಿ ಅಗಳ ನಿರ್ಮಿಸಲು ಹೋಗಿದ್ದ ಸಾಗರ ತಹಸೀಲ್ದಾರ್ ಮತ್ತು ವಲಯ ಅರಣ್ಯಾಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಏಳು ಜನರನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
    ತಾಲೂಕಿನ ಕಸಬಾ ಹೋಬಳಿ ಮಡಸೂರು ಗ್ರಾಮದ ಸರ್ವೇ ನಂ.71ರ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ನೇತೃತ್ವದ ಕಂದಾಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಸ್ಥಳದಲ್ಲಿ ಬೀಟೆ, ನಂದಿ, ಹೊನ್ನೆ ಇತ್ಯಾದಿ ಕಾಡು ಜಾತಿಯ ಮರಗಳನ್ನು ಕಡಿತಲೆ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ತಹಸೀಲ್ದಾರ್ ಅವರು ವಲಯ ಅರಣ್ಯಾಧಿಕಾರಿ ಅರವಿಂದ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಜಂಟಿ ಸರ್ವೇ ನಡೆಸಿದಾಗ ಸರ್ಕಾರಿ ಜಾಗದಲ್ಲಿ ಮರ ಕಡಿತಲೆ ಮಾಡಿ, ಒತ್ತುವರಿ ಮಾಡುವ ಪ್ರಯತ್ನ ನಡೆಸಿದ್ದು ಕಂಡು ಬಂದಿತ್ತು. ಸ್ಥಳದಲ್ಲಿದ್ದ ಗ್ರಾಮಸ್ಥರು ಸರ್ಕಾರಿ ಜಮೀನು ಒತ್ತುವರಿಯಾಗದಂತೆ ಟ್ರೆಂಚ್ ಹೊಡೆಯಲು ಮನವಿ ಮಾಡಿ, ಟ್ರಂಚ್ ಹೊಡೆಯಲು ಜೆಸಿಬಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರ ಮನವಿ ಮೇರೆಗೆ ಟ್ರೆಂಚ್ ಹೊಡೆಯಲು ಬಂದ ಜೆಸಿಬಿ ಚಾಲಕರಿಗೆ ಒತ್ತುವರಿದಾರರು ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ.
    ನಂತರ ಗ್ರಾಮಸ್ಥರು ಬೇರೆ ಕಡೆಯಿಂದ ಜೆಸಿಬಿಯನ್ನು ತೆಗೆದುಕೊಂಡು ಬಂದು ತಹಸೀಲ್ದಾರ್ ಸಮ್ಮುಖದಲ್ಲಿ ಟ್ರೆಂಚ್ ಹೊಡೆಯಲು ಪ್ರಯತ್ನ ನಡೆಸಿದಾಗ ಒತ್ತುವರಿದಾರರು ಜೆಸಿಬಿ ಚಾಲಕರನ್ನು ಬೆದರಿಸಿ, ಜೆಸಿಬಿ ಎದುರು ಬಂದು ನಮ್ಮನ್ನು ಸಾಯಿಸಿ ಎಂದು ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ತಹಸೀಲ್ದಾರ್ ಮತ್ತು ವಲಯ ಅರಣ್ಯಾಧಿಕಾರಿಗಳು ಒತ್ತುವರಿದಾರರಿಗೆ ಅಲ್ಲಿಂದ ತೆರಳುವಂತೆ ಸೂಚನೆ ನೀಡಿದ್ದಾರೆ. ಆದರೆ ಒತ್ತುವರಿದಾರರು ಜೆಸಿಬಿ ಕೀ ಕಿತ್ತುಕೊಂಡಿದ್ದಾರೆ. ಮತ್ತೆ ಕೆಲವರು ಕತ್ತಿ, ದೊಣ್ಣೆ, ಮಚ್ಚು ಇತರ ಆಯುಧಗಳನ್ನು ಬಳಸಿ ತಹಸೀಲ್ದಾರ್, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ.ಈ ಸಂಬಂಧ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ತಹಸೀಲ್ದಾರ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹುಚ್ಚಪ್ಪ, ಆನಂದ್, ಗಂಗಾಧರ, ದೇವರಾಜ್, ವೀರೇಂದ್ರ, ಉಮೇಶ್, ಲಂಕೇಶ್ ಎಂಬುವವರ ವಿರುದ್ದ ಸಿ.ಆರ್. ನಂ.161/2023 ಕಲಂ 353, 307, 506, 504, 149 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಜನರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts