More

    ಸತ್ಕಾರ್ಯಗಳಿಗೆ ಅಡ್ಡಿ, ಆತಂಕ ಸಹಜ

    ಶೃಂಗೇರಿ: ಭಗವಂತ, ಗುರು ಹಾಗೂ ಸಮಾಜದ ಸೇವೆ ಜೀವನದ ಮೂರು ಉತ್ಕೃಷ್ಟವಾದ ಸೇವೆಗಳು. ಈ ಸೇವೆಗಳನ್ನು ನಾವು ಶ್ರದ್ಧಾಭಕ್ತಿಯಿಂದ ಮಾಡಿದರೆ ಬದುಕಿನ ಪರಿಪೂರ್ಣತೆ ಲಭ್ಯವಾಗುತ್ತದೆ ಎಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

    ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ 74ನೇ ವರ್ಧಂತಿ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣಗೈದು ಮಾತನಾಡಿದರು.
    ಹಲವಾರು ಸಾಮಾನ್ಯ ಕಲ್ಲುಗಳ ಮಧ್ಯದಲ್ಲಿ ಒಂದು ವಜ್ರದ ಕಲ್ಲು ಸೇರಿದಾಗ ಅದು ವಜ್ರ ಎಂದು ಅರಿಯಬೇಕಾದರೆ ಅದರ ಮಹತ್ತದ ಕುರಿತು ನಮಗೆ ಅರಿವು ಇರಬೇಕು. ಹಾಗೆಯೇ ಗುರುವಿನ ಮಹತ್ವ ಅರಿಯಬೇಕಾದರೆ ಅವರ ಕುರಿತು ನಮಗೆ ವಿಶೇಷವಾದ ಶ್ರದ್ಧಾಭಕ್ತಿ ಇರಬೇಕು. ಜೀವನದಲ್ಲಿ ಸೇವೆ ಮಾಡಲು ನಮಗೆ ಸಾಕಷ್ಟು ಅವಕಾಶವಿರುತ್ತದೆ. ಅದರ ಸದುಪಯೋಗ ಮಾಡುವ ಪರಿಜ್ಞಾನತೆ ಎಲ್ಲರಲ್ಲೂ ಇರಬೇಕು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ ಸೇವೆ ಮಾಡುವುದು ನಮ್ಮ ಪೂರ್ವಜನ್ಮದ ಸುಕೃತ. ಏಕೆಂದರೆ ಅವರು ಸಾಕ್ಷಾತ್ ಶಾರದೆಯ ಸ್ವರೂಪಿ. ಅವರ ಒಳ್ಳೆಯ ಗುಣಗಳನ್ನು ಅರಿಯಲು ನಮ್ಮಲ್ಲಿ ಉತ್ತಮ ಗುಣವಿರಬೇಕು. ಒಬ್ಬರ ಬಲದ ಕುರಿತು ನಾವು ಅರಿಯಬೇಕಾದರೆ ನಮ್ಮಲ್ಲಿರುವ ಬಲಾಢ್ಯದ ಕುರಿತು ಪರಿಜ್ಞಾನ ಇರಬೇಕು ಎಂದರು.
    ಭಗವಂತನ ಹಾಗೂ ಗುರುಸೇವೆಯನ್ನು ನಾವು ನಿಷ್ಠೆಯಿಂದ ಮಾಡಬೇಕು. ಲೋಕದಲ್ಲಿ ಸತ್ಕಾರ್ಯ ಮಾಡುವಾಗ ಅನೇಕ ಅಡ್ಡಿ, ಆತಂಕಗಳು ಎದುರಾಗುವುದು ಸಹಜ. ಒಬ್ಬ ಉತ್ತಮ ಪಂಡಿತನಾಗಬೇಕಾದರೆ ಆತನ ಗುರುಗಳು ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಾರೆ.ನಾವು ದೃಢವಾದ ಚಿತ್ತಶುದ್ಧಿಯಿಂದ ಗುರುಗಳನ್ನು ಆರಾಧಿಸಿದರೆ ಮಾತ್ರ ನಮಗೆ ಪುಣ್ಯಲಭ್ಯವಾಗುತ್ತದೆ. ಜೀವನದಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕಾರ್ಯ ಮಾಡಬೇಕು. ದೇಶ ಹಾಗೂ ಧರ್ಮಕ್ಕೂ ಒಳಿತಾಗಲಿ ಎಂದ ದೂರದೃಷ್ಟಿತ್ವ ಸರ್ವರಲ್ಲಿ ಇರಬೇಕು. ಆಗ ಮಾತ್ರ ಸರ್ವರ ಉನ್ನತಿ ಸಾಧ್ಯ ಎಂದು ಹೇಳಿದರು.
    ವಸಂತ ಋತುವಿನ ಮಹತ್ವದ ಕುರಿತು ಕೋಗಿಲೆಗೆ ಮಾತ್ರ ಅರಿವು ಇರುತ್ತದೆ. ಸಿಂಹಕ್ಕೆ ಎಷ್ಟು ಬಲ ಇದೆ ಎಂಬ ಜ್ಞಾನ ಆನೆಗೆ ಇರುತ್ತದೆ. ಇರುವೆಗೆ ಸಿಂಹದ ಬಲದ ಕುರಿತು ಅರಿವು ಇರುವುದಿಲ್ಲ. ಲೋಕದಲ್ಲಿ ಯಾವುದೇ ವ್ಯಕ್ತಿ ಅಥವಾ ಶಕ್ತಿಯ ಸುಗುಣದ ಕುರಿತು ತಿಳುವಳಿಕೆ ಇರಬೇಕು. ಅಂತಹ ವ್ಯಕ್ತಿತ್ವದ ಕುರಿತು ನಾವು ವೈಶಿಷ್ಟಪೂರ್ಣವಾದ ದೃಷ್ಟಿತ್ವದಿಂದ ನೋಡಬೇಕು. ಜ್ಞಾನ ಯಾವುದು?, ಅಜ್ಞಾನ ಯಾವುದು? ಎಂಬ ತಿಳುವಳಿಕೆಯ ನೆಲೆಗಟ್ಟಿನಲ್ಲಿ ನಾವು ಜೀವನ ಸಾಗಿಸಬೇಕು. ಆಗ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
    ಇದೇ ವೇಳೆ ಶ್ರೀ ಮಠದಿಂದ ಜೇಸಿ ಶಾಲೆಗೆ ಎರಡು ಬಸ್ಸುಗಳನ್ನು ಹಸ್ತಾಂತರಿಸಲಾಯಿತು. ಮಠದ ಆಡಳಿತಾಧಿಕಾರಿ ಮುರಳಿ, ಶ್ರೀ ಮಠದ ಋತ್ವಿಜರಾದ ಕೃಷ್ಣಭಟ್, ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts