More

    ನ್ಯಾಯಬೆಲೆ ಅಂಗಡಿ ಸರ್ವರ್ ಡೌನ್| ಅಕ್ಕಿಗಾಗಿ ಕಾದು ಕುಳಿತು ರೋಸಿಹೋದ ಜನ

    ಗದಗ: ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಯಾಗದಿದ್ದರಿಂದ ಗದಗ ಬೆಟಗೇರಿ ಅವಳಿ ನಗರದ ಫಲಾನುಭವಿಗಳು ಪರದಾಡುತ್ತಿದ್ದಾರೆ.

    ಕೆಲಸ ಕಾರ್ಯಗಳನ್ನು ಬದಿಗೊತ್ತಿ ದಿನಪೂರ್ತಿ ನ್ಯಾಯಬೆಲೆ ಅಂಗಡಿ ಮುಂದೆ ಸರದಿಯಲ್ಲಿ ನಿಂತರೂ ಪ್ರಯೋಜನ ಇಲ್ಲದಂತಾಗಿದ್ದು, ರೋಸಿಹೋದ ಜನ ನಗರದ ಒಕ್ಕಲಗೇರಿ ಓಣಿಯ ನ್ಯಾಯಬೆಲೆ ಅಂಗಡಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ಅಲ್ಲದೆ, ಕೆವೈಸಿ ಪದ್ಧತಿಗೆ ವಿರೋಧ ವ್ಯಕ್ತಪಡಿಸಿದರು.

    ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಯನ್ನು ಪಡಿತರದಾರರು ತರಾಟೆಗೆ ತೆಗೆದುಕೊಂಡರು. ಎಷ್ಟು ದಿನ ನ್ಯಾಯಬೆಲೆ ಅಂಗಡಿ ಮುಂದೆ ಕಾಯಬೇಕು ಎಂದು ಪ್ರಶ್ನಿಸಿದರು.

    ಕಳೆದ ನಾಲ್ಕು ದಿನಗಳಿಂದ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗೆ ಎಡತಾಕುತ್ತಿದ್ದೇವೆ. ಅತ್ತ ದುಡಿಮೆಯೂ ಇಲ್ಲ, ಇತ್ತ ತಿನ್ನಲು ಅಕ್ಕಿ ಕೂಡ ಸಿಗುತ್ತಿಲ್ಲ. ಹೀಗಾದರೆ ಜೀವನ ಮಾಡುವುದಾರೂ ಹೇಗೆ ಎಂದು ಗಂಡಿಮಡಿ ಪ್ರದೇಶ ಮಹಿಳೆಯರು ಗೋಳು ತೋಡಿಕೊಂಡರು.

    ನೆಟ್ ಇಲ್ಲ, ಸರ್ವರ್ ಸಿಗುತ್ತಿಲ್ಲ ಎಂದು ನಾಲ್ಕು ದಿನಗಳಿಂದ ಹೇಳುತ್ತಿದ್ದಾರೆ. ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ಕಾಯುತ್ತ ಕುಳಿತಿದ್ದೇವೆ. ಈ ಕುರಿತು ನ್ಯಾಯಬೆಲೆ ಅಂಗಡಿಯವರಿಗೆ ಪ್ರಶ್ನಿಸಿದರೆ ಸರ್ವರ್ ಸಿಗುತ್ತಿಲ್ಲ, ನಾವೇನು ಮಾಡಬೇಕು ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ ಎಂದು ಫಲಾನುಭವಿಗಳು ಅಳಲು ತೋಡಿಕೊಂಡರು.

    ಕೂಡಲೆ ಸಮಸ್ಯೆ ಬಗೆಹರಿಸಿ: ಗಂಗಿಮಡಿಯಿಂದ ಒಕ್ಕಲಗೇರಿಗೆ 20 ರೂ. ಅಟೋ ದರ ನೀಡಬೇಕು. ಇಲ್ಲಿಗೆ ಬಂದರೆ ಸರ್ವರ್ ಸಮಸ್ಯೆ, ಬರಿಗೈಲಿ ಮತ್ತೆ 20 ರೂ. ಖರ್ಚು ಮಾಡಿಕೊಂಡು ಹೋಗಬೇಕು. ಕೆಲಸಕ್ಕೂ ಹೋಗಲು ಆಗಲಿಲ್ಲ. ಪಡಿತರವೂ ಸಿಗಲಿಲ್ಲ. ಹೀಗೆ ನಾಲ್ಕು ದಿನಗಳನ್ನು ಕಳೆದಿದ್ದೇವೆ. ಇನ್ನೂ ಎಷ್ಟು ದಿನ ಕಾಯಬೇಕು. ಕೂಡಲೆ ಸಮಸ್ಯೆ ಬಗೆಹರಿಸಿ ಪಡಿತರ ವಿತರಿಸಬೇಕು ಎಂದು ಗಂಗಿಮಡಿಯ ವಿಜಯಲಕ್ಷ್ಮಿ, ಬಸವಣ್ಣೆವ್ವ, ಮಲ್ಲಮ್ಮ ಮತ್ತಿತರರು ಒತ್ತಾಯಿಸಿದರು.

    ಪಡಿತರಕ್ಕಾಗಿ ಶಾಲೆಗೆ ಮಕ್ಕಳನ್ನು ಕಳಿಸದೇ ನಮ್ಮೊಂದಿಗೆ ಕರೆದುಕೊಂಡು ಬಂದು ಇಲ್ಲಿ ಕಾದೂ ಕಾದು ಸುಸ್ತಾಗಿದೆ. ಪರೀಕ್ಷೆ ಹತ್ತಿರವಿದ್ದು ಆದರೂ ಅನಿವಾರ್ಯವಾಗಿ ಮಕ್ಕಳನ್ನು ಕರೆದುಕೊಂಡು ಬರಲೇಬೇಕಾಗಿದೆ. ಬೇಗನೆ ಪಡಿತರ ಹಂಚಿದರೆ ಅನುಕೂಲವಾಗುತ್ತದೆ. ಸಂಬಂಧಿಸಿದವರು ಕೂಡಲೆ ಕ್ರಮಕೈಗೊಂಡರೆ ಪುಣ್ಯ ಬರುತ್ತದೆ ಎಂದು ಗಂಗಿಮಡಿಯ ಬಸಮ್ಮ ಮತ್ತು ಗೌರಮ್ಮ ಹಂದ್ರಾಳ ಒತ್ತಾಯಿಸಿದರು.

    ಪಡಿತರ ವಿತರಣೆಯ ಸರ್ವರ್ ಜಾಮ್ ಆಗಿ ಸಮಸ್ಯೆ ಉಂಟಾಗಿದೆ. ಗದಗ ಬೆಟಗೇರಿ ಮಾತ್ರವಲ್ಲ ರಾಜ್ಯದಲ್ಲಿಯೇ ಈ ಸಮಸ್ಯೆ ಎದುರಾಗಿದೆ. ಇನ್ನೆರಡು ದಿನದೊಳಗೆ ಸಮಸ್ಯೆ ಪರಿಹಾರವಾಗಲಿದೆ. ಫಲಾನುಭವಿಗಳು ಸಹಕರಿಸಬೇಕು.
    | ಪಿ.ಎಸ್.ಹಿರೇಮಠ, ಸಹಾಯಕ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts