More

    ಚಿರತೆಗೆ ಆಹಾರವಾದ ಮಹಿಳೆ; ಕಣ್ಣೆದುರೇ ಎಳೆದೋಯ್ತು ಸಾರ್ ! ಜತಗೆಗಾರರ ಕಣ್ಣೀರು

    ನ್ಯಾಮತಿ: ನ್ಯಾಮತಿ ತಾಲೂಕಿನ ಫಲವನಹಳ್ಳಿ ಮತ್ತು ದಾಸರಹಟ್ಟಿ ಬೇಚಾರ್ ಗ್ರಾಮದ ಮಧ್ಯೆ ಹರಮಘಟ್ಟ ರಾಜ್ಯ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೆಕ್ಕೆಜೋಳದ ಹೊಲದಲ್ಲಿ ಮಂಗಳವಾರ ಸಂಜೆ ಕಳೆ ತೆಗೆಯುತ್ತಿದ್ದ ಮಹಿಳೆಯೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾರೆ.

    ಕಮಲಾಬಾಯಿ (55) ಮೃತ ಮಹಿಳೆ. 7-8 ಮಹಿಳೆಯರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ದಾಳಿ ಮಾಡಿದ ಚಿರತೆ ಕಮಲಾಬಾಯಿ ಅವರ ಕುತ್ತಿಗೆಗೆ ಬಾಯಿ ಹಾಕಿ ಸುಮಾರು 100 ಅಡಿಯಷ್ಟು ದೂರ ಎಳೆದೋಯ್ದಿದೆ.

    ತಕ್ಷಣವೇ ಜತೆಗಿದ್ದ ಮಹಿಳೆಯರು ಕೂಗಿಕೊಂಡಿದ್ದಾರೆ. ಆಗ ಚಿರತೆ ಮಹಿಳೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ. ಅಷ್ಟು ಹೊತ್ತಿಗೆ ಕಮಲಾಬಾಯಿ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

    ಮಹಿಳೆ ದೇಹವನ್ನು ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಯಿತು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಿಪಿಐ ದೇವರಾಜ್ ಸೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಮಹಿಳೆಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

    ಸೆರೆ ಹಿಡಿಯಲು ಕಾರ್ಯಾಚರಣೆ
    ಮಹಿಳೆಯನ್ನು ಕೊಂದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಚಿರತೆ ಓಡಾಡಿದ ಪ್ರದೇಶದಲ್ಲಿ ಬೋನನ್ನು ಇಡಲಾಗಿದ್ದು ಕ್ಯಾಮರಾಗಳ ನೆರವಿನಿಂದ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ. ಟಾಂ ಟಾಂ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
    ಚಿರತೆಯು ಒಂದೆರಡು ವಾರಗಳಿಂದ ಆ ಭಾಗದಲ್ಲಿ ಓಡಾಡುತ್ತಿತ್ತು ಎನ್ನಲಾಗಿದ್ದು, ಘಟನೆ ಹಿನ್ನೆಲೆಯಲ್ಲಿ ಫಲವನಹಳ್ಳಿ ಸೇರಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ದಾಳಿಗೆ ಒಳಗಾದ ಮಹಿಳೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು, ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts