More

    ಬಸ್ ಸಂಚಾರ ಸಂಪೂರ್ಣ ಸ್ತಬ್ಧ

    ಕಾರವಾರ: ಎನ್​ಡಬ್ಲ್ಯುಕೆಆರ್​ಟಿಸಿ ಉದ್ಯೋಗಿಗಳು ಶನಿವಾರ ಜಿಲ್ಲೆಯೆಲ್ಲೆಡೆ ಪ್ರತಿಭಟನೆ ನಡೆಸಿದರು. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಸರ್ಕಾರಿ ನೌಕರರು, ವಿದ್ಯಾರ್ಥಿಗಳು ತಂಗುದಾಣಗಳಲ್ಲೇ ಕಾದು ವಾಪಸ್ ಮನೆಗೆ ಮರಳಿದರು. ಕೆಲವರು ಹೆಚ್ಚುವರಿ ದರ ತೆತ್ತು ಖಾಸಗಿ ವಾಹನಗಳಲ್ಲಿ ತೆರಳಬೇಕಾಯಿತು.

    ಜಿಲ್ಲೆಯ ಶೇ.70ರಷ್ಟು ಬಸ್​ಗಳು ಶುಕ್ರವಾರ ಸಂಚರಿಸಿದ್ದವು. ಶಿರಸಿ ಸಾರಿಗೆ ವಿಭಾಗದಲ್ಲಿ ಹೆಚ್ಚು ಸ್ಪಂದನೆ ದೊರೆತಿರಲಿಲ್ಲ. ಧಾರವಾಡ ವಿಭಾಗಕ್ಕೆ ಸೇರಿದ ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಬಸ್​ಗಳ ಓಡಾಟ ಬಂದ್ ಆಗಿತ್ತು. ಆದರೆ, ಶನಿವಾರ ಬೆಳಗ್ಗಿನಿಂದ ಒಂದೇ ಒಂದು ಬಸ್ ಸಂಚಾರ ಮಾಡಿಲ್ಲ. ಕಾರವಾರ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಪ್ರಯಾಣಿಕರಿಗೆ ಮಧ್ಯಾಹ್ನದ ಊಟ ನೀಡಿದರು.

    ಗೋವಾ ಬಸ್ ವಿರಳ: ಕಾರವಾರ-ಗೋವಾ ನಡುವಿನ ಗ್ರಾಮಗಳಿಗೆ ಗೋವಾ ಸರ್ಕಾರಿ ಸ್ವಾಮಿತ್ವದ ಕದಂಬ ಸಾರಿಗೆ ಬಸ್​ಗಳು ಪ್ರತಿನಿತ್ಯ ಓಡಾಡುತ್ತಿದ್ದವು. ಆದರೆ, ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರದ ಸುದ್ದಿ ಕೇಳಿ, ಗಲಾಟೆಯಾಗಬಹುದು ಎಂಬ ಭಯದಿಂದ ಶನಿವಾರ ಆ ಬಸ್​ಗಳೂ ಕಾರವಾರದತ್ತ ಬಂದಿಲ್ಲ.

    ಗೋವಾದಲ್ಲಿ ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಹಲವು ಬಸ್​ಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಕದಂಬ ಸಾರಿಗೆ ಬಸ್​ಗಳ ಓಡಾಟ ಮೊಟಕು ಮಾಡಲು ಇನ್ನೊಂದು ಕಾರಣ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬಿಕೋ ಎನ್ನುತ್ತಿದ್ದ ನಿಲ್ದಾಣ

    ಸಿದ್ದಾಪುರ: ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಪಟ್ಟಣದಲ್ಲಿ ಸಂಚಾರ ವ್ಯತ್ಯಯ ವಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕೆಎಸ್​ಆರ್​ಟಿಸಿ ಬಸ್ ಇಲ್ಲದ ಕಾರಣ ಜನರು ಖಾಸಗಿ ವಾಹನಗಳ ಮೊರೆ ಹೋದರು. ಸಿದ್ದಾಪುರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸಾಗರ- ಶಿರಸಿ ಸೇರಿ ಗ್ರಾಮೀಣ ಭಾಗಕ್ಕೆ ತೆರಳಲು ತೊಂದರೆಯಾಗಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು.

    ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ

    ಅಂಕೋಲಾ: ಅಂಕೋಲಾ ಸಾರಿಗೆ ಘಟಕದ ಬಸ್ ಚಾಲಕ ಹಾಗೂ ನಿರ್ವಾಹಕರು ಶನಿವಾರ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು. ಮಷ್ಕರ ನಿರತರ ಪರವಾಗಿ ರಾಜೇಶ ನಾಯಕ, ದಿನೇಶ ನಾಯ್ಕ, ಪುಷ್ಪಾ ಮಾತನಾಡಿ, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ನಮಗೂ ದೊರೆಯುವಂತಾಗಬೇಕು ಎಂದರು. ಮುರಳೀಧರ ನಾಯ್ಕ, ಗಂಗಾಧರ ನಾಯ್ಕ, ಡಿ.ಟಿ. ನಾಯ್ಕ, ಶಿವಕುಮಾರ, ಗಜಾನನ ಮಡಿವಾಳ, ಗೋಪಾಲ ಪಟಗಾರ ಇದ್ದರು.

    ನಿಲ್ಲದ ಮುಷ್ಕರ

    ದಾಂಡೇಲಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ 2ನೇ ದಿನ ಶನಿವಾರವೂ ದಾಂಡೇಲಿ ಘಟಕದ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ನಗರ ಡಿಪೋದಿಂದ ಬಸ್ ಸಂಚರಿಸಲಿಲ್ಲ. ದಾಂಡೇಲಿಯಿಂದ ಪರ ಊರಿಗೆ ಪ್ರಯಾಣಿಸುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕೆಲವರು ಟ್ರ್ಯಾಕ್ಸ್ ಮತ್ತು ಬಾಡಿಗೆ ವಾಹನ ಮಾಡಿಕೊಂಡು ಊರುಗಳಿಗೆ ಪ್ರಯಾಣಿಸಿದ್ದು ಕಂಡು ಬಂತು. ಮುಷ್ಕರಕ್ಕೆ ದಾಂಡೇಲಿ ಸಮಗ್ರ ಹೋರಾಟ ಸಮಿತಿ ಬೆಂಬಲ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts