More

    ಅಡಕೆ ತೋಟಗಳಲ್ಲಿ ನುಸಿ ಬಾಧೆ: ನಿಯಂತ್ರಣಕ್ಕೆ ತಜ್ಞರ ಸಲಹೆ

    ರಮೇಶ ಜಹಗೀರದಾರ್ ದಾವಣಗೆರೆ
    ಬೇಸಿಗೆಯಲ್ಲಿ ಸಾಮಾನ್ಯವಾಗಿ ಅಡಕೆ ಬೆಳೆಯಲ್ಲಿ ಕಂಡುಬರುವ ನುಸಿ ಕೀಟಗಳು ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಾಧಿಸಿವೆ.

    ವಾತಾವರಣದಲ್ಲಿ ಉಂಟಾಗುವ ಉಷ್ಣಾಂಶದಿಂದಾಗಿ ಅಡಕೆ ಬೆಳೆಯಲ್ಲಿ ನುಸಿಕೀಟ ಬಾಧೆ ಕಾಣಿಸಿಕೊಳ್ಳುತ್ತದೆ. ಕಳೆದ ಒಂದು ತಿಂಗಳಿಂದ ತಾಪಮಾನ 37 ಡಿಗ್ರಿ ದಾಟಿ ಹೋಗಿದ್ದರಿಂದ ಈ ಸಮಸ್ಯೆ ಕಾಡುತ್ತಿದೆ.

    ಕಳೆದ ವರ್ಷ ಮೇ 15ರ ಹೊತ್ತಿಗೆ ಉತ್ತಮ ಮಳೆಯಾಗಿತ್ತು, ಈ ಬಾರಿ ಅದರ ಶೇ. 25ರಷ್ಟೂ ಮಳೆಯಾಗಿಲ್ಲ. ಕಳೆದ ಎರಡು ತಿಂಗಳ ಸರಾಸರಿ ಉಷ್ಣಾಂಶ 38-39 ಡಿಗ್ರಿ ಇತ್ತು. ಇದರಿಂದ ತಾಪಮಾನ ಹೆಚ್ಚಾಗಿ ಸಮಸ್ಯೆ ಕಾಣಿಸಿಕೊಂಡಿದೆ.

    ಕೆಂಪು ನುಸಿ ಮತ್ತು ಬಿಳಿ ನುಸಿ ಕೀಟಗಳು ಅಡಕೆ ಬೆಳೆಗಾರರ ನಿದ್ದೆ ಕೆಡಿಸಿವೆ. ಈ ಕೀಟಗಳು ಎಲೆಯ ಕೆಳಗಿನ ರಸ ಹೀರುವುದರಿಂದ ಪತ್ರಹರಿತ್ತು ನಾಶವಾಗಿ ಎಲೆಗಳು ಬಿಳಿ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತವೆ.

    ಇದರಿಂದಾಗಿ ಗಿಡಗಳಿಗೆ ನಿರೋಧಕ ಶಕ್ತಿಯು ಕಡಿಮೆಯಾಗಿ ಇತರ ರೋಗಗಳಿಗೆ ತುತ್ತಾಗುತ್ತವೆ. ಸಮಸ್ಯೆ ಇನ್ನೂ ತೀವ್ರವಾದರೆ ಸುಳಿ ಕೊಳೆ ರೋಗ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಹೊಸ ಗಿಡಗಳಲ್ಲಿ ಹೆಚ್ಚು

    ಜಿಲ್ಲೆಯಲ್ಲಿ ಪ್ರಸ್ತುತ 86 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತದೆ. ಈ ಪೈಕಿ ಶೇ. 30 ರಿಂದ 40ರಷ್ಟು ಪ್ರದೇಶದಲ್ಲಿರುವ ಹೊಸ ಗಿಡಗಳಲ್ಲಿ ಈ ಬಾಧೆ ಹೆಚ್ಚಾಗಿದೆ. ಅದರಲ್ಲೂ ನೀರಾವರಿ ಪ್ರದೇಶಗಳಾದ ಚನ್ನಗಿರಿ, ದಾವಣಗೆರೆ, ಹೊನ್ನಾಳಿ ತಾಲೂಕುಗಳಲ್ಲಿ ಕಂಡುಬಂದಿದೆ.


    ಅಡಕೆ ಬೆಳೆಯುವ ಪ್ರದೇಶ (2021-22ನೇ ಸಾಲಿನ ಅಂಕಿ ಅಂಶ)
    ತಾಲೂಕು- ಹೆಕ್ಟೇರ್
    ಚನ್ನಗಿರಿ – 33,884
    ದಾವಣಗೆರೆ -17,786
    ಹರಿಹರ -4931
    ಹೊನ್ನಾಳಿ -11,894
    ಜಗಳೂರು -2417
    ನ್ಯಾಮತಿ -5884

    ಕೀಟ ಬಾಧೆಯಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅಡಕೆ ಜತೆಗೆ ಬಾಳೆ, ನುಗ್ಗೆ, ಸಣಬು ಮುಂತಾದ ಅಂತರ ಬೆಳೆಗಳನ್ನು ಬೆಳೆದಾಗ ಸಮಸ್ಯೆ ಇರುವುದಿಲ್ಲ. ವಾತಾವರಣ ಬದಲಾಗಿ ಉತ್ತಮ ಮಳೆಯಾದರೆ ಸರಿ ಹೋಗುತ್ತದೆ.

    >ಡಾ. ಜಿ.ಸಿ. ರಾಘವೇಂದ್ರ ಪ್ರಸಾದ್, ತೋಟಗಾರಿಕೆ ಉಪ ನಿರ್ದೇಶಕ

    ನುಸಿ ಕೀಟ ಬಾಧೆ ತಡೆಯಲು ಎಲೆಗಳ ಕೆಳಗೆ ರಾಸಾಯನಿಕ ಸಿಂಪರಣೆ ಮಾಡಬೇಕು. ಪ್ರತಿ ಲೀಟರ್ ನೀರಿಗೆ 1.5 ಮಿ.ಲೀ. ಹೆಕ್ಸಿ ತಯೋಜಾಕ್ಸೃ್, ಅಥವಾ 1 ಮಿ.ಲೀ. ಸ್ಪೈರೋ ಮೆ ಫೆ ಸನ್ ಬೆರೆಸಿ ಸಿಂಪರಣೆ ಮಾಡಬೇಕು.

    >ಡಾ.ಎಂ.ಜಿ. ಬಸವನಗೌಡ, ತೋಟಗಾರಿಕೆ ವಿಜ್ಞಾನಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts