More

    ಅಡಕೆ ತೋಟಕ್ಕೆ ಇಂಗುಗುಂಡಿ ಆಸರೆ

    ಟಿ.ಎನ್.ಜಗದೀಶ್ ಚನ್ನಗಿರಿ: ಕೊಳವೆಬಾವಿ ಕೈಕೊಟ್ಟಿತೆಂದು ಮತ್ತೊಂದು ಕೊರೆಸಲು ಮುಂದಾಗುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬ ರೈತ ಇಂಗು ಗುಂಡಿ ನಿರ್ಮಿಸುವ ಮೂಲಕ ಮರುಪೂರಣ ಮಾಡಿ ಐದು ಎಕರೆ ಅಡಕೆ ತೋಟ ಉಳಿಸಿಕೊಂಡು ಮಾದರಿಯಾಗಿದ್ದಾರೆ.

    ಚನ್ನಗಿರಿ ತಾಲೂಕಿನ ಮಾಚನಾಯಕಹಳ್ಳಿಯ ಎಂ.ಇ. ಶಿವಕುಮಾರ 1992ರಲ್ಲಿ ಕೊಳವೆಬಾವಿ ಕೊರೆಸಿ ಹೊಸದಾಗಿ ಅಡಕೆ ತೋಟ ಕಟ್ಟಿದರು. ಇದಾದ ಎರಡೇ ವರ್ಷದಲ್ಲಿ ಬರಗಾಲ ಎದುರಿಸಬೇಕಾಯಿತು. ಕೊಳವೆಬಾವಿ ವಿಫಲವಾಗಿ ಅಡಕೆ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸಪಡಬೇಕಾಯಿತು. ತೋಟಗಾರಿಕೆ, ಕೃಷಿ ಅಧಿಕಾರಿಗಳ ಸಲಹೆಗಳೂ ಕೈಗೂಡಲಿಲ್ಲ.

    ಆದರೆ, ಒಮ್ಮೆ ಸಿರಿಗೆರೆಯ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಆಗಮಿಸಿದ್ದ ರಾಜಸ್ಥಾನದ ಜಲತಜ್ಞ ರಾಜೇಂದ್ರ ಸಿಂಗ್ ಅವರಿಂದ ನೀರಿನ ಸಮಸ್ಯೆಗಳ ನಿವಾರಣೆ ಕುರಿತ ಸಲಹೆಗಳನ್ನು ತಿಳಿದುಕೊಂಡಿದ್ದರು.

    ಬಳಿಕ ಚಿತ್ರದುರ್ಗ ಜಲತಜ್ಞ ದೇವರಾಜ ರೆಡ್ಡಿ ಅವರನ್ನು 2002ರಲ್ಲಿ ಗ್ರಾಮಕ್ಕೆ ಕರೆತಂದು ಇಂಗುಗುಂಡಿ ನಿರ್ಮಿಸಿದರು. ಅಂದಿನಿಂದ ಇಂದಿನವರೆಗೂ ಕೊಳವೆಬಾವಿಯಲ್ಲಿ 2 ಇಂಚು ನೀರು ನಿರಂತರವಾಗಿ ಬರುತ್ತಿದ್ದು, ಐದು ಎಕರೆ ಅಡಕೆ ತೋಟ ಸೊಂಪಾಗಿದೆ.

    ಪ್ರತಿ ವರ್ಷ ಎಕರೆಗೆ ತಲಾ 10 ಕ್ವಿಂಟಾಲ್‌ನಂತೆ ಅಡಕೆ ಬೆಳೆದು 25 ಲಕ್ಷ ಗಳಿಸುತ್ತಿದ್ದಾರೆ. ಜತೆಗೆ ಆಂತರಿಕ ಬೆಳೆಯಾಗಿ ಬಾಳೆ, ಸೇಬು, ಮಾವು, ತೆಂಗು, ಪುಷ್ಪಕೃಷಿ ಕೈಗೊಂಡು 2 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

    ಇಂಗು ಗುಂಡಿ ನಿರ್ಮಾಣ: ಕೊಳವೆಬಾವಿ ಕೊರೆಸುವಾಗ ಕೇಸಿಂಗ್ ಪೈಪ್ ಸುತ್ತಲೂ 12 ಅಡಿ ಉದ್ದ, 6 ಅಡಿ ಅಗಲ ಗುಂಡಿ ತೆಗೆದು ಬೋಲ್ಡರ್ಸ್‌ ಕಲ್ಲು ಹಾಕಿ ಅದನ್ನು ಮರಳಿನಿಂದ ಮುಚ್ಚಲಾಗಿತ್ತು. ನಂತರ ಕೇಸಿಂಗ್ ಪೈಪ್ ಸುತ್ತಲೂ ರಂದ್ರಗಳನ್ನು ಮಾಡಿಸಿ ಮೆಸ್ ಅಳವಡಿಸಿ ಮೋಟಾರ್ ಬಿಡಲಾಗಿತ್ತು. ಮಳೆ ನೀರನ್ನು ಇಂಗು ಗುಂಡಿಗೆ ಹೋಗುವಂತೆ ದಾರಿ ಮಾಡಲಾಗಿತ್ತು. ಆಗ ಮಳೆ ನೀರು ಶೇಖರಣೆಯಾಗಿ ವರ್ಷದ ಎಲ್ಲ ಕಾಲದಲ್ಲೂ ಕೊಳವೆಬಾವಿಯಲ್ಲಿ ನೀರು ದೊರೆಯುವಂತಾಯಿತು.

    ಸಾಲ ಮಾಡಿ ತೋಟ ಬೆಳೆಸಿದ್ದೆ. ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಜಲತಜ್ಞರು ನೀಡಿದ ಮಾಹಿತಿ ಪಡೆದು ತೋಟದಲ್ಲಿ ಇಂಗು ಗುಂಡಿ ಮಾಡಿಸಿದ ನಂತರ ನೀರಿನ ಸಮಸ್ಯೆ ಮತ್ತೆ ಕಾಣಿಸಿಕೊಂಡಿಲ್ಲ. 12 ವರ್ಷದಿಂದ ನೆಮ್ಮದಿಯಿಂದ ಇದ್ದೇವೆ.
    l ಎಂ.ಇ.ಶಿವಕುಮಾರ್, ಕೃಷಿಕ, ಮಾಚನಾಯಕಹಳ್ಳಿ, ಚನ್ನಗಿರಿ ತಾಲೂಕು.

    ಉದ್ಯೋಗ ಖಾತ್ರಿ ಯೋಜನೆಯಡಿ ಇಂಗು ಗುಂಡಿ ನಿರ್ಮಾಣಕ್ಕೆ ಅವಕಾಶವಿದೆ. ಅನೇಕ ಬಾರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಕೆಲವರು ಮಾತ್ರ ಇಂಗು ಗುಂಡಿ ಮಾಡಿಕೊಂಡಿದ್ದಾರೆ.
    l ಕೆ.ಎಸ್.ಶ್ರೀಕಾಂತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಚನ್ನಗಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts