More

    ಶುಶ್ರೂಷಕ ಸೇವೆ ಅಗ್ರಣೀಯ: ಡಾ. ವಿಜಯಮಹಾಂತೇಶ ದಾನಮ್ಮನವರ

    ವಿಜಯಪುರ: ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಸೇವೆ ಅತ್ಯವಶ್ಯ ಹಾಗೂ ಮೌಲ್ಯಯುತ. ಕರೊನಾ ಮಾರಿ ಆವರಿಸಿದ ಸಂದರ್ಭದಲ್ಲಿ ಅವರ ಸೇವೆ ಅಗ್ರಣೀಯವಾಗಿತ್ತು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

    ಬುಧವಾರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲೋಣಿ ಗ್ರೂಪ್ ಆಫ್ ಎಜ್ಯುಕೇಶನ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯಲ್ಲಿ ‘ಫ್ಲಾರೆನ್ಸ್ ನೈಟಿಂಗೇಲ್’ ಅವರ ಮೂರ್ತಿಗೆ ಗೌರವಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.

    ವೈದ್ಯಕೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಶುಶ್ರೂಷಕರು ರೋಗಿಗಳ ಸೇವೆಯನ್ನು ಹೃದಯಪೂರ್ವಕವಾಗಿ ಮಾಡುತ್ತಾರೆ. ಸೇವೆಯಲ್ಲೇ ದೇವರನ್ನು ಕಾಣುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಅವರು ತಮ್ಮ ನಿಸ್ವಾರ್ಥ ಸೇವೆಯಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಉತ್ತಮ ಪರಿಜ್ಞಾನ ಹೊಂದಿರುವ ಶುಶ್ರೂಷಕರಿಗೆ ದೇಶ, ವಿದೇಶಗಳಲ್ಲಿ ಅಧಿಕ ಬೇಡಿಕೆ ಇದೆ. ಕೇವಲ ಕೇರಳದ ಯುವಕ-ಯುವತಿಯರು ಶುಶ್ರೂಷಕ ಹುದ್ದೆಗೆ ಪ್ರಾಧ್ಯಾನ್ಯ ಕೊಡುತ್ತಿದ್ದರು. ಆದರೆ ಈಗ ಎಲ್ಲಾ ಭಾಗದಲ್ಲೂ ಅರಿವು ಮೂಡಿದ್ದು, ಗುಣಮಟ್ಟದ ಶುಶ್ರೂಷಕ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉತ್ತಮ ಶುಶ್ರೂಷಕರನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

    ಕರ್ನಾಟಕ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಪ್ರತಿ ವರ್ಷ ಮೇ 12, ಶುಶ್ರೂಷಕ ವೃತ್ತಿಯನ್ನೇ ಜೀವನ ಧ್ಯೇಯವಾಗಿಸಿಕೊಂಡಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾಗಿದ್ದು. ಆ ದಿನವನ್ನು ಅವರ ನೆನಪಿಗಾಗಿ ವಿಶ್ವದಾದ್ಯಂತ ಶುಶ್ರೂಷಕರ ದಿನವೆಂದು ಆಚರಿಸಲಾಗುತ್ತಿದೆ ಎಂದರು.

    ಮಾಜಿ ಕೆ.ಎನ್.ಸಿ. ರಜಿಸ್ಟ್ರಾರ್ ಶ್ರೀಕಾಂತ ಪುಲಾರಿ ನರ್ಸಿಂಗ್ ಕ್ಷೇತ್ರದಲ್ಲಿ ಕೋವಿಡ್ ನಂತರ ಸರ್ಕಾರ ರೂಪಿಸಿರುವ ಉನ್ನತ ಉದ್ಯೋಗ ಅವಕಾಶಗಳ ಉಪಯುಕ್ತ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸಂಗಣ್ಣ ಲಕ್ಕಣ್ಣವರ, ಸಂಸ್ಥೆ ಅಧ್ಯಕ್ಷ ಸುರೇಶ ಲೋಣಿ ವೇದಿಕೆಯಲ್ಲಿದ್ದರು.

    ವಿಶ್ವ ಸಂತ ಸಿದ್ಧೇಶ್ವರ ಶ್ರೀಗಳು ಹಾಗೂ ಶ್ರೀ ಶಿವಯೋಗೇಶ್ವರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜ್ಯೋತಿ ಬೆಳಗಿಸಿ, ಪ್ರತಿಜ್ಞಾ ಸ್ವೀಕಾರ ಮಾಡಿದರು. ಪ್ರಾಂಶುಪಾಲೆ ವಹೀತಾಖನಮ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ. ಗುರುಶಾಂತ ಪಾಸೋಡಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಎಸ್‌ಎಸ್‌ಲ್‌ಸಿ, ಪಿಯುಸಿ, ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ನರ್ಸಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಚ್‌ಡಿ ಪದವಿ ಪಡೆದವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts