More

    ತಾವೇ ಹಣ ಹಾಕಿ ಯಾಮಾರಿಸುವ ಕಿಲಾಡಿಗಳು! ಪಾರ್ಟ್​ ಟೈಮ್​ ಉದ್ಯೋಗ ಹೆಸರಿನಲ್ಲಿ ‘ಫುಲ್​ ಟೈಮ್​’ ಧೋಖಾ

    ಬೆಂಗಳೂರು: ಉದ್ಯೋಗದ ಹೆಸರಿನಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಸೈಬರ್​ ಕ್ರೈಂ ಪೊಲೀಸ್​ ಠಾಣೆಗಳಲ್ಲಿ ಈ ಸಂಬಂಧ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಉದ್ಯೋಗದ ಹುಡುಕಾಟದಲ್ಲಿರುವ ಯುವಕ-ಯುವತಿಯರನ್ನೇ ಟಾರ್ಗೆಟ್​ ಮಾಡಿ ವಂಚನೆ ಮಾಡಲಾಗುತ್ತಿದೆ. ಆನ್​ಲೈನ್​ ಪಾರ್ಟ್​ ಟೈಮ್​, ಫುಲ್​ ಟೈಂ ಜಾಬ್​ ಕೊಡಿಸುವುದಾಗಿ ಹೇಳಿ ಮೋಸ ಮಾಡಲಾಗುತ್ತಿದೆ.

    ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಮಾಹಿತಿ ಪ್ರಕಾರ, ಕಳೆದ 3 ವರ್ಷದಲ್ಲಿ ದೇಶಾದ್ಯಂತ 76,255 ವಂಚನೆ (420) ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಬಹುತೇಕ ಉದ್ಯೋಗದ ಆಮಿಷಕ್ಕೊಳಗಾಗಿ ಮೋಸ ಹೋದ ಪ್ರಕರಣಗಳೇ ಆಗಿವೆ. 2019ರಲ್ಲಿ 21,252, 2020ರಲ್ಲಿ 24,952 ಹಾಗೂ 2021ರಲ್ಲಿ 30,051 ಕೇಸ್​ಗಳು ವರದಿಯಾಗಿವೆ. ಕರ್ನಾಟಕದಲ್ಲಿ ವಾರ್ಷಿಕ 6 ಸಾವಿರ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ವಿಷಯ.

    ಇದನ್ನೂ ಓದಿ: ವರುಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ವಿ. ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರಿಂದ ತರಾಟೆ

    ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಸೈಬರ್​ ವಂಚನೆ ಏರಿಕೆಯಾಗಿದೆ. ವಂಚನೆಗೊಳಗಾದವರು ಸೈಬರ್​ ಕ್ರೈಂ ಪೊಲೀಸರಿಗೆ ಆನ್​ಲೈನ್​ನಲ್ಲಿ ಪಾರ್ಟ್​ ಟೈಮ್​ ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ದೂರುಗಳೇ ಹೆಚ್ಚು. ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸೈಬರ್​ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ, ಹೆಚ್ಚಾಗಿ ವಿದ್ಯಾವಂತರೇ ವಂಚನೆಗೊಳಗಾಗುತ್ತಿದ್ದಾರೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

    ಸ್ಥಳಿಯ ಜಾಲಗಳ ವಂಚನೆ ಹೇಗೆ?

    • ನಕಲಿ ವೆಬ್​ಸೈಟ್​ ಸೃಷ್ಟಿಸಿ, ಉದ್ಯೋಗ ಇರುವುದಾಗಿ ಜಾಲತಾಣದಲ್ಲಿ ಜಾಹೀರಾತು
    • ನೋಂದಣಿ, ಸಂದರ್ಶನದ ಶುಲ್ಕಗಳ ಹೆಸರಲ್ಲಿ ಆರಂಭದಲ್ಲೇ ಹಣ ಕಟ್ಟಿಸಿಕೊಂಡು ಬಳಿಕ ನಾಪತ್ತೆ
    • ಕೆಲಸ ಕೊಡಿಸುವುದಾಗಿ ಅಭ್ಯರ್ಥಿಯಿಂದ ತಲಾ 5ರಿಂದ 50 ಸಾವಿರ ರೂ.ವರೆಗೆ ವಸೂಲಿ
    • ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ತಾತ್ಕಾಲಿಕ ಸ್ಥಳಿಯ ಏಜೆನ್ಸಿ ಕಚೇರಿ ಸ್ಥಾಪನೆ
    • ಸಿಬಿಐ, ಐಟಿ, ರೈಲ್ವೆ ಇಲಾಖೆಗಳಂತಹ ಸರ್ಕಾರಿ ಉದ್ಯೋಗಗಳ ಹೆಸರಲ್ಲಿ ಅರ್ಜಿ ಆಹ್ವಾನಿಸಿ ಮೋಸ

    ಇದನ್ನೂ ಓದಿ: ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…

    ಪೊಲೀಸರ ಸಲಹೆಗಳೇನು?

    ಪಾರ್ಟ್​ಟೈಂ ಕೆಲಸ ಕೊಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಮಿಷ ಒಡ್ಡುವವರನ್ನು ನಂಬಬೇಡಿ
    ಸರ್ಚ್​ ಇಂಜಿನ್​ ಜಾಹೀರಾತು, ಸೋಶಿಯಲ್​ ಮೀಡಿಯಾ ಜಾಹೀರಾತು ಲಿಂಕ್​ ನಂಬಬೇಡಿ
    ಅರ್ಜಿ ಸಲ್ಲಿಸುವ ಮುನ್ನ ವೆಬ್​ಸೈಟ್​ ಅಸಲಿಯೇ ಎಂದು ತಿಳಿಯಲು ಅದರ ಪಾಲಿಸಿ ಗಮನಿಸಿ
    ಒಂದೇ ಬಾರಿ ಮಾತುಕತೆಯಾಗುತ್ತಿದ್ದಂತೆ, ಆರ್​ ಲೆಟರ್​ ಕೊಟ್ಟರೆ ಅದರ ಬಗ್ಗೆ ಶಂಕೆ ವ್ಯಕ್ತಪಡಿಸಿ
    ಮೊಬೈಲ್​ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಕೆಲಸದ ಆರ್​ ಕೊಟ್ಟರೆ ನಂಬಲೇಬೇಡಿ

    ಪ್ರಕರಣ-1

    ಟೆಲಿಗ್ರಾಂನಲ್ಲಿ 1 ಲಕ್ಷ ರೂ. ಸುಲಿಗೆ

    ಟೆಲಿಗ್ರಾಂ ಖಾತೆಯಿಂದ ಪಾರ್ಟ್​ ಟೈಮ್​ ಜಾಬ್​ ಬಗ್ಗೆ ಒಂದು ಸಂದೇಶ ಬಂದಿತ್ತು. ಅದರಂತೆ ದೂರುದಾರರು ಮಾಹಿತಿ ವಿಚಾರಿಸಿದ್ದಾರೆ. ಇದಕ್ಕೆ ಆರೋಪಿ ‘ಆನ್​ಲೈನ್​ ಮೂವೀ ಟಿಕೆಟ್​ ರೇಟಿಂಗ್​ ಉದ್ಯೋಗ’ ಎಂದು ನಂಬಿಸಿ, ಆ್ಯಪ್​ವೊಂದನ್ನು ಇನ್​ಸ್ಟಾಲ್​ ಮಾಡಿಕೊಂಡು, ಅದರಲ್ಲಿ ಖಾತೆ ತೆರೆದು ಪ್ರಸಾರವಾಗುವ ವಿಡಿಯೋ ನೋಡಿ ರೇಟಿಂಗ್​ ಹಾಕಿ ಕಮಿಷನ್​ ಹಣ ಕೊಡುವುದಾಗಿ ತಿಳಿಸಿದ್ದ. ಅದರಂತೆ ಮಾಡಿದಾಗ ಆರಂಭದಲ್ಲಿ ದೂರುದಾರರಿಗೆ 1 ಸಾವಿರ ರೂ. ಕಮಿಷನ್​ ನೀಡಿದ್ದಾರೆ. ನಂತರ ಜಾಬ್​ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು, ದೂರುದಾರರು ಪಾವತಿಸಿದ್ದಾರೆ. ನಂತರ ಅದೇ ದಿನ ಹೆಚ್ಚಿನ ಕಮಿಷನ್​ ಪಡೆಯಬೇಕಾದರೆ, 29,936 ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅದನ್ನು ನಂಬಿ ಖಾತೆಗೆ ಹಣ ಜಮಾ ಮಾಡಿದ್ದಾರೆ. ಹೀಗೆ ದೂರುದಾರರು ಹಂತ ಹಂತದಲ್ಲಿ ಒಟ್ಟು 1,14,901 ರೂ. ಪಾವತಿಸಿ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡುತ್ತಾರೆ.

    ಪ್ರಕರಣ-2

    ಹೆಚ್ಚಿನ ಸಂಬಳದಾಸೆಗೆ 12 ಲಕ್ಷ ರೂ. ಕಳೆದುಕೊಂಡ

    ಸಾಮಾಜಿಕ ಜಾಲತಾಣದ ಮೂಲಕ ಉದ್ಯೋಗ ಆಕಾಂಕ್ಷಿಗೆ ಹೆಚ್ಚಿನ ಸಂಬಳ ನೀಡುವುದಾಗಿ ನಂಬಿಸಿ ಆತನಿಂದ ಯೂಟ್ಯೂಬ್​ ವಿಡಿಯೋಗಳಿಗೆ ಲೈಕ್​, ಸಬ್ಸ್​ಕ್ರೈಬ್​ ಮಾಡಿಸುವುದು ಸೇರಿ ಆನ್​ಲೈನ್​ ಟಾಸ್ಕ್​ ನೀಡಿದ್ದಾನೆ. ಮೊದಲಿಗೆ ಒಳ್ಳೆಯ ಲಾಭ ನೀಡಿ ಆಮಿಷ ಬರುವಂತೆ ಮಾಡಿ, ಒಮ್ಮೆ ಅವರು ದೊಡ್ಡ ಹೂಡಿಕೆಯನ್ನು ಮಾಡಿದ ಮೇಲೆ ಮೋಸ ಮಾಡಿದ್ದಾನೆ. ಈ ರೀತಿ ಇಂಜಿನಿಯರ್​ ಪವನ್​ಕುಮಾರ್​ ಜಲವಾಡಿ (34) ಎಂಬಾತ 12,35,000 ರೂ. ಕಳೆದುಕೊಂಡು ವೈಟ್​ಫೀಲ್ಡ್​ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ: ವಂದೇ ಭಾರತ್​ ರೈಲು ತನ್ನ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿದೆ! ಕಾರಣ ಬಹಿರಂಗಪಡಿಸಿದ ರೈಲ್ವೇ ಇಲಾಖೆ…

    ಪ್ರಕರಣ-3

    ಮನಿ ಡಬ್ಲಿಂಗ್​ ಆಸೆಗೆ 5 ಲಕ್ಷ ರೂ. ಹೋಯ್ತು

    ಟೆಲಿಗ್ರಾಮ್​ ಲಿಂಕ್​ ಕಳುಹಿಸಿ ಹಣ ತೊಡಗಿಸಿ, ಆನ್​ಲೈನ್​ ಮೂಲಕ ದ್ವಿಗುಣಗೊಳಿಸಲು ಟಾಸ್ಕ್​ ಕಂಪ್ಲೀಟ್​ ಮಾಡಲು ತಿಳಿಸಿದ್ದಾರೆ. ಪ್ರತಿ ಟಾಸ್ಕ್​ಗೆ 70 ರೂ. ಹಾಕುವುದಾಗಿ ತಿಳಿಸಿದ್ದಾರೆ. ಈ ರೀತಿ 2-3 ದಿನ ಆರೋಪಿಯು ಇನ್ನೊಂದು ಟಾಸ್ಕ್​ ಅಂತ 2 ಸಾವಿರ ರೂ. ಪಾವತಿಸಿದರೆ ಶೇ.20 ಲಾಭ ಕೊಡುತ್ತೇವೆ. ದೊಡ್ಡ ಮೊತ್ತ ಕಳುಹಿಸಿದರೆ ಇನ್ನೂ ಹೆಚ್ಚಿನ ಲಾಭ ಕೊಡುತ್ತೇವೆಂದು ನಂಬಿಸಿ 2400 ರೂ. ಅನ್ನು ದೂರುದಾರರ ಖಾತೆಗೆ ವರ್ಗಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತ-ಹಂತವಾಗಿ 5,52,800 ರೂ. ಪಾವತಿಸಿದ್ದಾರೆ. ಈ ರೀತಿ ಪಾರ್ಟ್​ ಟೈಮ್​ ಜಾಬ್​ ಹೆಸರಲ್ಲಿ ಆನ್​ಲೈನ್​ ಟಾಸ್ಕ್​ ನೀಡಿ ಉದ್ಯೋಗ ಆಕಾಂಕ್ಷಿಗಳಿಗೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts