More

    ಕುವೆಂಪು ವಿವಿ ಅಕ್ರಮ ತನಿಖೆಗೆ ಆಗ್ರಹಿಸಿ ಎನ್‌ಎಸ್‌ಯುಐ ಪ್ರತಿಭಟನೆ

    ಶಿವಮೊಗ್ಗ: ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಎನ್‌ಎಸ್‌ಯುಐ ಕಾರ್ಯಕರ್ತರು ಕುವೆಂಪು ವಿಶ್ವವಿದ್ಯಾಲಯದ ಕುವೆಂಪು ಶತಮಾನೋತ್ಸವ ಭವನ ಎದುರು ಪ್ರತಿಭಟನೆ ನಡೆಸಿದರು.

    ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು ತಕ್ಷಣವೇ ಅದನ್ನು ಸರಿಪಡಿಸಬೇಕು. ವಿವಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೆ ತಕ್ಷಣವೇ ಬ್ರೇಕ್ ಹಾಕಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
    ರಾಜ್ಯದಲ್ಲಿ ಕುವೆಂಪು ವಿವಿಗೆ ಒಳ್ಳೆಯ ಹೆಸರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಅಹಿತಕರ ಬೆಳವಣಿಗೆಗಳಿಂದ ವಿವಿ ಗೌರವಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳ ಅಭ್ಯುದಯಕ್ಕೆ ಆತಂಕವಾಗುತ್ತಿದೆ. ಈ ಮೊದಲೇ ಮೂರ್ನಾಲ್ಕು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಕುಲಪತಿ ಡಾ. ಬಿ.ಎಂ.ವೀರಭದ್ರಪ್ಪ ವಿರುದ್ಧ ಕಿಡಿಕಾರಿದರು.
    ಅತಿಥಿ ಉಪನ್ಯಾಸಕರನ್ನು ಅಕ್ರಮವಾಗಿ ನೇಮಕ ಮಾಡಲಾಗಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ. ಲ್ಯಾಪ್‌ಟ್ಯಾಪ್ ಕಳವು ಆರೋಪ ಇರುವವರನ್ನು ಹಣಕಾಸು ವಿಭಾಗದ ಮುಖ್ಯಸ್ಥರನ್ನಾಗಿಸಿ ಮತ್ತಷ್ಟು ಭ್ರಷ್ಟಾಚಾರ ಎಸಗಲು ಅವಕಾಶ ಮಾಡಿಕೊಡಲಾಗಿದೆ. ಭ್ರಷ್ಟಾಚಾರದ ಆರೋಪ ಇದ್ದು ರಾಜಕೀಯ ಮಾಡುತ್ತಿದ್ದಾರೆಂಬ ಕಾರಣದಿಂದ ಕುಲಸಚಿವೆ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಸರ್ಕಾರದ ಆಪ್ತ ಕಾರ್ಯದರ್ಶಿ ಪತ್ರ ಬರೆದಿದ್ದರೂ ಅವರನ್ನೇ ಕುಲಸಚಿವೆ ಸ್ಥಾನದಲ್ಲಿ ಮುಂದುವರಿಸುವ ಮೂಲಕ ವಿವಿಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದರು. ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿವಿಯ ಎಲ್ಲ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
    ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಯುವ ಮುಖಂಡರಾದ ಚೇತನ್, ಮಧುಸೂದನ್, ಮುರುಗೇಶ್, ರವಿಕುಮಾರ್, ಹರ್ಷಿತ್, ರವಿ ಕಾಟಿಕೆರೆ, ಧವನ್‌ರಾಜ್, ನಿಸಾರ್, ಸಾಗರ್ ಕಂಡ್ರೆ, ಭಾಷಾ, ಚರಣ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts