More

    ಜ್ಞಾನ ಪಸರಿಸಲು ಭಾಷಾಂತರ ಅವಶ್ಯ

    ಶಿವಮೊಗ್ಗ: ಇದು ಮಾಹಿತಿಯ ಯುಗ. ವಿವಿಧ ವಿಚಾರಗಳನ್ನು ದೇಶ, ಭಾಷೆ, ಗಡಿಗಳಿಂದಾಚೆಗೆ ಪಸರಿಸುವಂತೆ ಮಾಡಲು ಭಾಷಾಂತರ ಪ್ರಕ್ರಿಯೆ ಅಗತ್ಯ. ಜ್ಞಾನದ ಸೃಷ್ಟಿ ಹಾಗೂ ಅಭಿವೃದ್ಧಿಗೂ ಅನುವಾದ ಅವಶ್ಯ ಎಂದು ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

    ಕುವೆಂಪು ವಿವಿಯಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ಹಾಗೂ ವಿವಿಯ ಸಮಾಜ ಕಾರ್ಯ ವಿಭಾಗದಿಂದ ಏರ್ಪಡಿಸಿರುವ ಭಾರತೀಯ ಭಾಷೆಗಳ ಅನುವಾದ ಕೌಶಲಾಭಿವೃದ್ಧಿ ಕುರಿತು ಒಂದು ವಾರ ನಡೆಯಲಿರುವ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
    ಭಾಷಾಂತರ ಅಧ್ಯಯನ ಇತ್ತೀಚೆಗೆ ಹೆಚ್ಚು ಬೇಡಿಕೆ ಇರುವ ಕ್ಷೇತ್ರ. ಸ್ವ ಉದ್ಯೋಗ ಕಲ್ಪಿಸಿಕೊಡುವಲ್ಲಿ ಈ ಕ್ಷೇತ್ರ ಮುಂಚೂಣಿಯಲ್ಲಿದೆ. ಜ್ಞಾನ ಕ್ಷೇತ್ರಕ್ಕೆ ಹೊಸ ಕೊಡುಗೆಗಳನ್ನು ನೀಡುವ ಸಾಧ್ಯತೆಗಳನ್ನು ಒದಗಿಸುತ್ತದೆ. ಜಾಗತೀಕರಣದ ಯುಗದಲ್ಲಿ ವಿವಿಧ ದೇಶಗಳಲ್ಲಿ ಇರುವ ಜ್ಞಾನ ಹಾಗೂ ಮಾಹಿತಿ ಕಣಜವನ್ನು ಪ್ರಪಂಚದಾದ್ಯಂತ ಲಭ್ಯವಾಗುವಂತೆ ಮಾಡಲು ಭಾಷಾಂತರ ಸಹಾಯಕವಾಗಿದೆ ಎಂದರು.
    ಯುರೋಪ್‌ನಲ್ಲಿ ಆಧುನಿಕ ಜ್ಞಾನ ಸೃಷ್ಟಿಯಾದ ನಂತರ ಎಲ್ಲ ಜ್ಞಾನ ಪ್ರಕಾರಗಳು ಲ್ಯಾಟಿನ್ ಭಾಷೆಯಲ್ಲಿರುತ್ತಿದ್ದವು. ಜ್ಞಾನ ಪ್ರಕಾರಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ ಬಳಿಕ ಎಲ್ಲ ದೇಶದವರು ಅವುಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಈಗ ಅವುಗಳು ಭಾರತೀಯ ಭಾಷೆಗಳಿಗೆ ಅನುವಾದವಾಗಬೇಕಿದೆ ಎಂದು ಹೇಳಿದರು.
    ವಿವಿಯ ಪ್ರಭಾರ ಕುಲಪತಿ ಪ್ರೊ.ಎಸ್.ವೆಂಕಟೇಶ್ ಮಾತನಾಡಿ, ಸಂಶೋಧಕರು ವಿಷಯಾನುಸಾರ ಇಂಗ್ಲಿಷ್ ಸೇರಿ ಇತರೆ ಭಾಷೆಗಳಲ್ಲಿರುವ ಮಾಹಿತಿಗಳನ್ನು ಅನುವಾದ ಮಾಡಿ ಜ್ಞಾನ ಸೃಷ್ಟಿ ಮಾಡಬೇಕಾಗಿರುತ್ತದೆ. ಆ ನಿಟ್ಟಿನಲ್ಲಿ ಸಂಶೋಧನಾರ್ಥಿಗಳಿಗೆ ಅನುವಾದ ಅವಶ್ಯ ಎಂದರು.
    ರಾಷ್ಟ್ರೀಯ ಅನುವಾದ ಮಿಷನ್ ಭಾರತ ಸರ್ಕಾರದ ಅಡಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ 22 ಭಾಷೆಗಳ ಅನುವಾದ ಕಾರ್ಯದಲ್ಲಿ ತೊಡಗಿಕೊಂಡಿದೆ. ಈವರೆಗೂ 115 ಪಠ್ಯಗಳನ್ನು ಅನುವಾದ ಮಾಡಿದ್ದು, ಇದರಲ್ಲಿ 22 ಭಾಷೆಯ ವಿದ್ವಾಂಸರು ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರಿನ ರಾಷ್ಟ್ರೀಯ ಅನುವಾದ ಮಿಷನ್‌ನ ಸಂಪನ್ಮೂಲ ವ್ಯಕ್ತಿ ಉಷಾರಾಣಿ ಹೇಳಿದರು.
    ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಮತ್ತು ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ಪ್ರಶಾಂತ ನಾಯಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಪೂರ್ಣಾನಂದ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts