More

    ದುರಾಸೆಯೇ ಭ್ರಷ್ಟಾಚಾರದ ಮೂಲ: ನ್ಯಾ. ಸಂತೋಷ್ ಹೆಗ್ಡೆ

    ಶಿವಮೊಗ್ಗ: ಅನೈತಿಕ ಕೆಲಸ ಮಾಡುತ್ತಿರುವವರಿಗೆ ಮನ್ನಣೆ ದೊರೆಯುತ್ತಿರುವುದರಿಂದ ದೇಶದಲ್ಲಿ ಭ್ರಷ್ಟಾಚಾರ ಸರ್ವತ್ರವಾಗಲು ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

    ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲಾ ಘಟಕದ ಜಂಟಿ ಸಹಯೋಗದಲ್ಲಿ ವಿಶ್ವ ಸಾಮಾಜಿಕ ನ್ಯಾಯ ಮತ್ತು ಹೆಣ್ಣುಮಕ್ಕಳ ಹಕ್ಕುಗಳು: ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದು ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸುತ್ತಾರೆ. ಹಣವಂತರಿಗೆ ಸಮಾಜ ಗೌರವ ನೀಡುತ್ತದೆ. ಆದರೆ ನೈತಿಕ ಹಾದಿಯಲ್ಲಿ ಅವರೆಲ್ಲ ಸಿರಿವಂತರಾಗಿದ್ದಾರೆಯೇ ಎಂಬ ಬಗ್ಗೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಅದು ಯಾರಿಗೂ ಗಮನದಲ್ಲಿರುವುದಿಲ್ಲ. ಜತೆಗೆ ದುರಾಸೆ, ಭ್ರಷ್ಟಾಚಾರ ಮಾಡಿ ಸಂಪತ್ಭರಿತರಾದವರು ಮತ್ತಷ್ಟು ಲಂಚ ಪಡೆಯುವುದು, ಸೋಮಾರಿತನ ಬೆಳೆಸುವುದು, ಅಧಿಕಾರ ಕೊಂಡುಕೊಳ್ಳುವುದು ಸೇರಿ ಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು ದುರಾಸೆಯೇ ಭ್ರಷ್ಟಾಚಾರದ ಮೂಲವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಮಾನವನ ದುರಾಸೆಯಿಂದ ದೇಶದ ಹತ್ತಾರು ಲಕ್ಷ ಕೋಟಿಗಳ ಹಣ ಕೊಳ್ಳೆ ಹೊಡೆಯಲಾಗುತ್ತಿದೆ. 1950ರ ದಶಕದಿಂದ ಇಲ್ಲಿಯವರೆಗೂ ಜೀಪ್, ಬೋಫೋರ್ಸ್, ಕಾಮನ್ವೆಲ್ತ್ ಕ್ರೀಡಾಕೂಟ, ಕಲ್ಲಿದ್ದಲು ಮತ್ತು 2ಜಿ ಹಗರಣಗಳು ದೇಶವನ್ನು ಬಡವಾಗಿಸಿವೆ. ಇಂದಿಗೂ ಇದೇ ಸ್ಥಿತಿ ಮುಂದುವರಿದಿದೆ. ಹೀಗಾಗಿ ಹಣದುಬ್ಬರ, ದಿನಬಳಕೆ ವಸ್ತುಗಳ ದರ ಏರಿಕೆ, ಅನೀತಿಗಳು ಹೆಚ್ಚಾಗಿವೆ. ಯುವಸಮುಹ, ವಿದ್ಯಾರ್ಥಿಗಳು ಅನೈತಿಕ ಹಾದಿ ಹಿಡಿದವರ ಬಗ್ಗೆ ಸೂಕ್ಷ್ಮಾವಾಗಿರಬೇಕು ಎಂದು ಸಲಹೆ ನೀಡಿದರು.
    ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಬಿ.ಜಿ.ಶಿವಮೂರ್ತಿ, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ರಜನಿ ರಾಜ್, ಮಹಿಳಾ ಹಕ್ಕುಗಳ ಅರಿವು ಕಾರ್ಯಕರ್ತೆ ಕೀರ್ತನಾ, ಮಹಿಳೆಯರು, ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಕಾನೂನಿನ ತಿಳುವಳಿಕೆ, ಹಕ್ಕು, ಸವಲತ್ತು, ಜವಾಬ್ದಾರಿಗಳ ಕುರಿತು ಉಪ್ಯನ್ಯಾಸ ನೀಡಿದರು.
    ವಿವಿಯ ಪ್ರಭಾರ ಕುಲಪತಿ ಪ್ರೊ. ಎಸ್.ವೆಂಕಟೇಶ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ನಾಯಕ್, ವಿವಿಯ ಕುಲಸಚಿವ ಎಚ್.ಬಿ.ವಿಜಯಕುಮಾರ್, ಪರೀಕ್ಷಾಂಗ ಕುಲಸಚಿವ ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ ಉಪಸ್ಥಿತರಿದ್ದರು.

    ನೆರೆಹೊರೆಯವರಿಂದ ಲೈಂಗಿಕ ದೌರ್ಜನ್ಯ ಹೆಚ್ಚು
    ಬಾಲಕಿಯರು, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನೆರೆಹೊರೆಯವರಿಂದಲೇ ಅತಿಹೆಚ್ಚಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಹಾಗಾಗಿ ಅವರಿಗೆ ಬಾಲ್ಯದಿಂದಲೇ ದೌರ್ಜನ್ಯ ರಕ್ಷಣೆಯ ಅರಿವು ನೀಡುವುದು ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ಹೇಳಿದರು. ಪೋಕ್ಸೋ ಅಪರಾಧದ ಸಮಸ್ಯೆ ಅಧಿಕವಾದ ಕಾರಣ ಅಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಮೀಸಲಾದ ಎರಡು ವಿಶೇಷ ಕೋರ್ಟ್‌ಗಳು ಶಿವಮೊಗ್ಗದಲ್ಲಿವೆ. ಅಗತ್ಯವಿರುವ ಎಲ್ಲ ಮಹಿಳೆಯರಿಗೆ, ಆಸಿಡ್ ದಾಳಿಗೆ ಒಳಗಾದವರಿಗೆ ನ್ಯಾಯ ಪಡೆಯಲು ಉಚಿತ ಕಾನೂನಿನ ನೆರವು ನೀಡುವ ಕೆಲಸವನ್ನು ಪ್ರಾಧಿಕಾರದಿಂದ ಮಾಡಲಾಗುತ್ತಿದೆ ಎಂದರು.

    ಶಿಕ್ಷಣ ಪಡೆದ ನಂತರ ಅದನ್ನು ಸಾಮಾಜಿಕ ಒಳಿತಿಗೆ ಬಳಸುವುದು ಮುಖ್ಯ. ಇಲ್ಲವಾದಲ್ಲಿ ದೇಶದಲ್ಲಿ ನೈಜ ಬದಲಾವಣೆ ಆಗುವುದಿಲ್ಲ. ಯುವ ಜನರಿಗೆ ಅವಕಾಶಗಳು ದೊರೆಯದೆ ಅನುತ್ಪಾದಕತೆಯತ್ತ ಸಾಗಬೇಕಾಗುತ್ತದೆ. ಧಾರ್ಮಿಕ ವಿಷಯಗಳಿಗಿಂತ ಸಾಮಾಜಿಕ, ಶೈಕ್ಷಣಿಕ ಅಗತ್ಯಗಳು ಮುಖ್ಯವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ.
    ಎಸ್.ಸಿದ್ಧರಾಜು
    ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts