More

    ಅಂದು ಪಾಸಾಗಿದ್ದವರು ಇಂದು ಫೇಲ್!

    ಶಿವಮೊಗ್ಗ: ಎರಡು ವರ್ಷದ ಹಿಂದೆ ಕುವೆಂಪು ವಿವಿಯಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದ ಬಿಕಾಂ ವಿದ್ಯಾರ್ಥಿಗಳಲ್ಲಿ ಈಗ ಅನೇಕರು ಅನುತ್ತೀರ್ಣರಾಗಿದ್ದಾರೆ. ಅವರು ಈಗ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕಾಗಿದೆ. ಈಗಾಗಲೇ ಉತ್ತೀರ್ಣ ಎಂದು ಬೇರೆ ಕೋರ್ಸ್‌ಗಳಿಗೆ ಸೇರ್ಪಡೆಯಾದವರಿಗೂ ಪರೀಕ್ಷೆ ಅನಿವಾರ್ಯ!

    2021-22ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್‌ನ ಬಹುತೇಕ ಬಿಕಾಂ ವಿದ್ಯಾರ್ಥಿಗಳಿಗೆ ಈಗ ಮತ್ತೆ ಪರೀಕ್ಷೆ ಎದುರಾಗಿದೆ. ಅಂದು ಉತ್ತೀರ್ಣರಾಗಿದ್ದ ಅನೇಕ ವಿದ್ಯಾರ್ಥಿಗಳು ವಾಸ್ತವದಲ್ಲಿ ಅನುತ್ತೀರ್ಣರು ಎಂಬುದನ್ನು ಮೂರು ವರ್ಷಗಳ ಬಳಿಕ ಪರೀಕ್ಷಾಂಗ ವಿಭಾಗ ಪತ್ತೆ ಮಾಡಿದೆ.
    ಎನ್‌ಇಪಿ ಪದ್ಧತಿಯಲ್ಲಿ ಬಿಕಾಂ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಫೈನಾನ್ಷಿಯಲ್ ಅಕೌಂಟಿಂಗ್, ಡಿಜಿಟಲ್ ಫ್ಲೂಯೆನ್ಸಿ, ಫಂಡಮೆಂಟಲ್ ಆಫ್ ಬಿಜಿನೆಸ್ ಅಕೌಂಟಿಂಗ್ ವಿಷಯಗಳು ಕಡ್ಡಾಯವಾಗಿದ್ದವು. ಇಲ್ಲಿ ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆಗೆ ಎಷ್ಟು ಅಂಕ ಎಂಬ ಗೊಂದಲ ಮೌಲ್ಯಮಾಪನದಲ್ಲಿ ಉಂಟಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಈಗಾಗಲೇ ಉತ್ತೀರ್ಣ ಎಂದು ಫಲಿತಾಂಶ ನೀಡಿದ ಅನೇಕ ವಿದ್ಯಾರ್ಥಿಗಳು ಅಂಕದ ಆಧಾರದಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬುದು ದೃಢಪಟ್ಟಿದೆ. ಈಗ ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲು ವಿವಿ ಸಜ್ಜಾಗಿದೆ. ಈ ಬಗ್ಗೆ ಮಂಗಳವಾರ ಅಧಿಸೂಚನೆ ಪ್ರಕಟಿಸಲಾಗಿದೆ.
    ವಿದ್ಯಾರ್ಥಿಗಳಿಗೆ ಪೀಕಲಾಟ: ಮೂರು ವರ್ಷದ ಹಿಂದೆ ವ್ಯಾಸಂಗ ಮಾಡಿದ ವಿಷಯಕ್ಕೆ ಈಗ ಮತ್ತೆ ಪರೀಕ್ಷೆ ನಡೆಸಲು ಮುಂದಾಗಿರುವುದು ವಿದ್ಯಾರ್ಥಿಗಳಿಗೆ ಪೀಕಲಾಟ ಸೃಷ್ಟಿಸಿದೆ. ಕೆಲ ವಿದ್ಯಾರ್ಥಿಗಳು ಈಗ ಬೇರೆ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ವಿವಿಯ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅದೂ ಅಲ್ಲದೆ 2021-22ನೇ ಸಾಲಿನಲ್ಲಿ ಎನ್‌ಇಪಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಬೋಧನೆಯೂ ನಡೆದಿರಲಿಲ್ಲ. ಮೌಲ್ಯಮಾಪನದಲ್ಲೂ ತಾಂತ್ರಿಕ ಲೋಪವಾಗಿರುವುದು ವಿದ್ಯಾರ್ಥಿಗಳ ಪಾಲಿಗೆ ಈಗ ಬಿಸಿ ತುಪ್ಪವಾಗಿದೆ.
    ಅಧಿಸೂಚನೆಯಲ್ಲಿ ಸ್ಪಷ್ಟನೆ: ತಾಂತ್ರಿಕ ತೊಂದರೆಯಿಂದ ಫಲಿತಾಂಶದಲ್ಲಿ ಏರುಪೇರಾಗಿದ್ದು ಈಗಾಗಲೇ ಪರೀಕ್ಷೆ ಶುಲ್ಕ ಪಾವತಿಸಿದವರು ಮತ್ತೆ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಕೂಡಲೇ ಪಾವತಿ ಮಾಡಿ ಈ ತಿಂಗಳು ಹಾಗೂ ಮುಂದಿನ ತಿಂಗಳು ನಡೆಯುವ ಪರೀಕ್ಷೆಗೆ ಹಾಜರಾಗುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts