More

    ಎನ್ನೆಸ್ಸೆಸ್ ಚಟುವಟಿಕೆ ನಿರಂತರ

    ಭರತ್ ಶೆಟ್ಟಿಗಾರ್, ಮಂಗಳೂರು
    ಶಿಕ್ಷಣದೊಂದಿಗೆ ಸೇವೆ ಮತ್ತು ವ್ಯಕ್ತಿತ್ವ ವಿಕಸನ ಎಂಬ ಧ್ಯೇಯವಾಕ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಸ್ವಯಂಸೇವಕರು ಕೋವಿಡ್ ಅವಧಿಯಲ್ಲೂ ಕಾರ್ಯಚಟುವಟಿಕೆ ಮುಂದುವರಿಸಿದ್ದಾರೆ.

    ಮಂಗಳೂರು ವಿವಿ ವ್ಯಾಪ್ತಿಯಲ್ಲಿ 2020-21ನೇ ಶೈಕ್ಷಣಿಕ ವರ್ಷ ಇನ್ನೂ ಪೂರ್ಣಗೊಂಡಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಗಳು ಅರ್ಧದಲ್ಲೇ ರದ್ದಾಗಿದ್ದು, ಪ್ರಸ್ತುತ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಇದರ ನಡುವೆಯೇ ಎನ್ನೆಸ್ಸೆಸ್ ಕಾರ್ಯಕ್ರಮಗಳೂ ಆಯೋಜನೆಗೊಳ್ಳುತ್ತಿವೆ. ಆನ್‌ಲೈನ್- ಆಫ್‌ಲೈನ್ ಚಟುವಟಿಕಗಳು ನಿರಂತರ ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನದ ಜತೆ ಸೇವಾ ಮನೋಭಾವವನ್ನೂ ಮೂಡಿಸಲಾಗುತ್ತಿದೆ.

    ಜಿಲ್ಲಾಡಳಿತದೊಂದಿಗೆ ಕೆಲಸ: ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 16,500 ಎನ್ನೆಸ್ಸೆಸ್ ಸ್ವಯಂಸೇವಕರಿದ್ದಾರೆ. ಆಯಾ ಜಿಲ್ಲಾಡಳಿತ ಎನ್ನೆಸ್ಸೆಸ್ ಸಂಯೋಜನಾಧಿಕಾರಿಗಳ ಸಂಪರ್ಕದಲ್ಲಿದ್ದು, ತುರ್ತು ಸಂದರ್ಭದಲ್ಲಿ ಸ್ವಯಂಸೇವಕರನ್ನು ಒದಗಿಸಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಂನಲ್ಲೂ ಎನ್ನೆಸ್ಸೆಸ್ ಸ್ವಯಂಸೇವಕರು ಸೇವೆ ನೀಡುತ್ತಿದ್ದಾರೆ. ಮುಖ್ಯವಾಗಿ ಸಾರ್ವಜನಿಕರಿಗೆ ಲಸಿಕೆ ಜಾಗೃತಿ ಮೂಡಿಸುವುದು, ಕೋವಿಡ್ ಟೆಸ್ಟ್ ಮಾಡಿಸಲು ಪ್ರೇರೇಪಿಸುವುದು ಇವರ ಕೆಲಸ. ಮನೆ ಆಸುಪಾಸಿನಲ್ಲೇ ಈ ಕಾರ್ಯ ಮಾಡುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಆಹಾರ ವಿತರಣೆ ಕಾರ್ಯದಲ್ಲೂ ಎನ್‌ಜಿಒಗಳಿಗೆ ಈ ಕಾರ್ಯಕರ್ತರು ಸಹಕಾರ ನೀಡುತ್ತಿದ್ದಾರೆ.

    ಆನ್‌ಲೈನ್‌ನಲ್ಲೂ ಸಕ್ರಿಯ: ಆನ್‌ಲೈನ್‌ನಲ್ಲೂ ವಿವಿಧ ವಿಚಾರಗಳ ಕುರಿತು ವೆಬಿನಾರ್ ಆಯೋಜಿಸಲಾಗುತ್ತಿದೆ. ತರಗತಿ, ಪರೀಕ್ಷೆಗಳ ಅನಿಶ್ಚಿತತೆ ನಡುವೆ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗೆ ಪ್ರೇರೇಪಿಸುವ ಉಪನ್ಯಾಸಗಳನ್ನು ತಜ್ಞರಿಂದ ನೀಡಲಾಗುತ್ತಿದೆ. ಕೋವಿಡ್ ಜಾಗೃತಿ ಕಾರ್ಯಕ್ರಮ ಗಳನ್ನೂ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಆಧರಿಸಿ, ಅಂಕಗಳು ಸಿಗಲಿವೆ. ಆನ್‌ಲೈನ್ ತರಗತಿ ಅವಧಿ ಮುಗಿದ ಬಳಿಕ ಎನ್ನೆಸ್ಸೆಸ್ ಚಟುವಟಿಕೆಗಳು ನಡೆಯುತ್ತಿವೆ. ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಹೇಗೆ ಎನ್ನುವ ಕುರಿತು ಅಧಿಕೃತ ಸೂಚನೆ ಇನ್ನೂ ಬಂದಿಲ್ಲ.

    ಕೇಂದ್ರದ ಅನುದಾನ ಇಲ್ಲ: ಎನ್ನೆಸ್ಸೆಸ್ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ವರ್ಷಂಪ್ರತಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ಈ ಅನುದಾನ ಬಿಡುಗಡೆಯಾಗಿಲ್ಲ. ಇನ್ನೊಂದೆಡೆ, ರಾಜ್ಯ ಸರ್ಕಾರವೂ ಅನುದಾನದಲ್ಲಿ ಕಡಿತ ಮಾಡಿ, 3.55 ಕೋಟಿ ರೂ. ಬಿಡುಗಡೆ ಮಾಡಿದೆ. ಹಾಗಾಗಿ ರಾಷ್ಟ್ರೀಯ ಸೇವಾ ಯೋಜನಾ ರಾಜ್ಯ ಕೋಶ, ವಿವಿ ಮತ್ತು ನಿರ್ದೇಶನಾಲಯಗಳಿಗೆ ಮೊತ್ತ ಬಿಡುಗಡೆ ಮಾಡಿಲ್ಲ. ಪರಿಣಾಮ ಆಫ್‌ಲೈನ್ ಕಾರ್ಯಕ್ರಮಗಳ ಬದಲು ಆನ್‌ಲೈನ್ ಕಾರ್ಯಕ್ರಮಗಳನ್ನೇ ಹೆಚ್ಚಾಗಿ ನಡೆಸಲಾಗಿದೆ ಎಂದು ರಾಜ್ಯ ಎನ್ನೆಸ್ಸೆಸ್ ಕೋಶದ ವರದಿ ತಿಳಿಸಿದೆ.

    ಈ ಬಾರಿ ಎನ್ನೆಸ್ಸೆಸ್ ಸ್ವಯಂಸೇವಕರು ಕೋವಿಡ್ ಸೇನಾನಿಗಳಾಗಿ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಡಳಿತಗಳ ವಾರ್ ರೂಂಗಳಲ್ಲಿ, ಎನ್‌ಜಿಒಗಳ ಜತೆ ಕಿಟ್ ವಿತರಣೆ, ರಕ್ತದಾನ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ವೆಬಿನಾರ್ ಮೂಲಕ ವಿದ್ಯಾರ್ಥಿಗಳನ್ನು ಕೋವಿಡ್ ಸಮಯದಲ್ಲಿ ಧನಾತ್ಮಕವಾಗಿರಲು ಪ್ರೇರಣೆ ನೀಡಲಾಗಿದೆ.
    ಡಾ.ನಾಗರತ್ನ ಕೆ.ಎ. ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜನಾಧಿಕಾರಿ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts