More

    ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ, ಹೊಸ ಡ್ಯಾಂ ಇರುವ ಪಕ್ಕದಲ್ಲಿದ್ದ ಹಳೆಯ ಡ್ಯಾಂ ಗೋಚರ

    ಮಂಗಳೂರು: ಒಂದೆಡೆ ಬಿಸಿಲಿನ ಝಳ. ಇನ್ನೊಂದೆಡೆ ಕೃಪೆ ತೋರದ ವರುಣ. ಇದರ ಮಧ್ಯೆ ಕುಡಿಯುವ ನೀರಿಗಾಗಿ ಮಂಗಳೂರಿನ ಜನರು ಇನ್ನು ಮುಂದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾದ ಕಾರಣದಿಂದ ಹೊಸ ಡ್ಯಾಂ ಇರುವ ಪಕ್ಕದಲ್ಲಿದ್ದ ಹಳೆಯ ಡ್ಯಾಂ ಗೋಚರಿಸಿದೆ.

    ಹೊಸ ಡ್ಯಾಂ ನಿರ್ಮಾಣವಾದ ಬಳಿಕ ಇಲ್ಲಿನ ಹಳೆಯ ಡ್ಯಾಂ ನೀರು ತುಂಬಿರುವ ಕಾರಣದಿಂದ (2019ರ ಮೇ ಮಧ್ಯ ಭಾಗದಲ್ಲಿ ನೀರಿನ ಕೊರತೆಯಿಂದ ಕಾಣಿಸಿತ್ತು) ಉಳಿದ ಸಮಯ ಕಾಣುತ್ತಿರಲಿಲ್ಲ. ಅಂದರೆ, 4 ಮೀ.ಗೆ ನೀರು ಇಳಿದಿರಲಿಲ್ಲ. ಆದರೆ, ಈ ಬಾರಿ ಮೇ ಮೊದಲ ವಾರದಲ್ಲಿಯೇ ನೀರಿನ ಕೊರತೆಯಿಂದ ಹಳೆಯ ಡ್ಯಾಂ ಕಾಣಿಸುತ್ತಿರುವುದು ಮಂಗಳೂರಿನ ಭವಿಷ್ಯದ ದಿನಗಳಿಗೆ ಅಪಾಯದ ಮುನ್ಸೂಚನೆ ಬರೆದಂತಾಗಿದೆ. ಉತ್ತಮ ಮಳೆಯಾದರೆ ಮಾತ್ರ ಈ ಗಂಭೀರ ಸಮಸ್ಯೆ ಬಗೆಹರಿಯಲಿದೆ.

    *ಶಂಭೂರು ಡ್ಯಾಂ ಕೂಡ ಬರಿದಾಗುವ ಸಾಧ್ಯತೆ

    ಡ್ಯಾಂನಲ್ಲಿ ಮೇ 3ರಂದು ನೀರಿನ ಮಟ್ಟ 4.22 ಮೀ. ಇದೆ. 2023ರಲ್ಲಿ ನೀರಿನ ಮಟ್ಟ 4.34 ಮೀ., 2022ರಲ್ಲಿ 4.51ಮೀ, 2021ರ ಇದೇ ದಿನದಂದು 6 ಮೀ. ಇತ್ತು. 2020ರಲ್ಲಿ 5.34 ಮೀ. ಇತ್ತು. 2019ರಲ್ಲಿ 4.66 ಮೀ. ಇತ್ತು. ಕಳೆದ ವರ್ಷ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಸಂಗ್ರಹ 13.40 ಇತ್ತು. 2022ರಲ್ಲಿ 18.90 ಮೀ. ನೀರು ಸಂಗ್ರಹವಿತ್ತು. ಆದರೆ, ಈ ವರ್ಷ 15.89 ಮೀ. ಮಾತ್ರ ನೀರಿದೆ. ಹೀಗಾಗಿ ಶಂಭೂರು ಡ್ಯಾಂ ಕೂಡ ಬರಿದಾಗುತ್ತಿರುವುದರಿಂದ ಹಾಗೂ ನದಿಯಲ್ಲಿ ನೀರು ಹರಿದು ಬರುವಷ್ಟು ಮಳೆಯಾಗದಿರುವ ಕಾರಣದಿಂದ ತುಂಬೆಯಲ್ಲಿ ಈಗ ಇರುವ ನೀರನ್ನು ಹೊರತುಪಡಿಸಿ ಬೇರೆ ಮೂಲಗಳನ್ನು ಆಶ್ರಯಿಸುವಂತಿಲ್ಲ.

    —————-

    ತುಂಬೆಯಲ್ಲಿ ಸಂಗ್ರಹವಾದ ಕನಿಷ್ಠ ನೀರಿನ ಸಂಗ್ರಹ

    1993ರಿಂದ ತುಂಬೆ ವೆಂಟೆಡ್ ಡ್ಯಾಂನ ನೀರಿನ ಸಂಗ್ರಹದ ವಿವರಗಳನ್ನು ಗಮನಿಸಿದಾಗ 2003ರ ಜೂ.13ರಂದು ನೀರಿನ ಮಟ್ಟ 0.3 ಅಡಿಗಳಿಗೆ ಇಳಿದಿತ್ತು. ಇದು ಅಂದಿನಿಂದ ಇಂದಿನವರೆಗೆ ತುಂಬೆಯಲ್ಲಿ ಸಂಗ್ರಹವಾದ ಕನಿಷ್ಠ ನೀರಿನ ಸಂಗ್ರಹ. ಆಗ ಸತತ 9 ದಿನದವರೆಗೆ ಇಲ್ಲಿ 10 ಇಂಚಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿತ್ತು. (ಹಳೆಯ ಡ್ಯಾಂನಲ್ಲಿ ಅಡಿಗಳ ಆಧಾರದಲ್ಲಿ ನೀರಿನ ಪ್ರಮಾಣ ಲೆಕ್ಕ ಮಾಡಲಾಗುತ್ತಿತ್ತು). 2012(ಜೂ.15)ರಲ್ಲಿ ಕನಿಷ್ಠ 4.7 ಅಡಿ, 2013ರಲ್ಲಿ (ಜೂ.9) 5.3 ಅಡಿ, 2014ರಲ್ಲಿ (ಜೂ.11) 4.10 ಅಡಿ, 2015ರಲ್ಲಿ (ಡಿ.29) 6.3 ಅಡಿ ಹಾಗೂ 2016ರ ಮೇ 20ರಂದು 3.7 ಅಡಿ ನೀರು ಸಂಗ್ರಹವಾಗಿರುವುದು ಆಯಾ ವರ್ಷದ ಕನಿಷ್ಠ ನೀರು ಸಂಗ್ರಹ. 2016ರ ಡಿಸೆಂಬರ್‌ನಲ್ಲಿ ಹೊಸ ಡ್ಯಾಂ ನಿರ್ಮಾಣವಾಗಿ ಅದರಲ್ಲಿ 5 ಮೀ. ನೀರು ನಿಲುಗಡೆ ಮಾಡಲಾಗುತ್ತಿತ್ತು. 2017ರಲ್ಲಿ ಎ.24ರಂದು 4.10 ಮೀ. ನೀರು ಸಂಗ್ರಹಿಸಲಾಗಿರುವುದು ಆ ವರ್ಷದ ಕನಿಷ್ಠ ಸಂಗ್ರಹ. 2019ರ ಮೇ ಮಧ್ಯ ಭಾಗದಲ್ಲಿ ನೀರಿನ ಮಟ್ಟ 2.40 ಮೀ.ಗೆ ಇಳಿದಿತ್ತು!

    ——————

    ನೀರಿನ ಕುಸಿತ ತಡೆಯಲು ನಾನಾ ಕಸರತ್ತು

    ಸಾಮಾನ್ಯವಾಗಿ 1 ದಿನದಲ್ಲಿ 10 ಸೆಂ.ಮೀ. ನೀರು ತುಂಬೆ ಡ್ಯಾಂನಲ್ಲಿ ಕಡಿಮೆಯಾಗುತ್ತದೆ. ಆದರೆ, ಈಗ ಡ್ಯಾಂನ ಕೆಳಭಾಗದ ನೀರು ಪಂಪಿಂಗ್ ಮಾಡುವ ಕಾರಣದಿಂದ ಸದ್ಯ 7 ಸೆಂ.ಮೀ.ನಷ್ಟು ನೀರು ಕಡಿಮೆಯಾಗುತ್ತಿದೆ. ಮಂಗಳೂರು ಪಾಲಿಕೆ ಅಧಿಕಾರಿಗಳ ತಂಡ, ಸಿಬಂದಿ ಇದಕ್ಕಾಗಿ ಹಗಲೂ-ರಾತ್ರಿ ಶ್ರಮಿಸುತ್ತಿದ್ದಾರೆ. ಎಂಆರ್‌ಪಿಎಲ್ ಸಂಸ್ಥೆ ಕೂಡ ಇದಕ್ಕಾಗಿ ನೆರವು ನೀಡಿದೆ. ತುಂಬೆ ಡ್ಯಾಂನಲ್ಲಿ ಸದ್ಯ ಇರುವ ನೀರು ಮುಂದಿನ 20 ದಿನಕ್ಕೆ ಮಾತ್ರ ಬರಲಿದೆ. ಇದನ್ನು ಒಂದು ದಿನ ನೀಡಿ ಮರುದಿನ ರೇಷನಿಂಗ್ ಮಾಡಿ, ಅದರ ಮರುದಿನ ಮತ್ತೆ ನೀರು ನೀಡುವ ಪ್ರಕಾರ ನೀಡಿದರೆ 40 ದಿನದವರೆಗೆ ಬಳಸಬಹುದು. ರೇಷನಿಂಗ್ ತತ್‌ಕ್ಷಣದಿಂದಲೇ ಅನಿವಾರ್ಯವಾಗಿದೆ ಎಂಬುದು ಪಾಲಿಕೆ ಅಧಿಕಾರಿಗಳ ಲೆಕ್ಕಾಚಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts