More

    ಗೈರು ಹಾಜರಾದ ಮತಗಟ್ಟೆ ಸಿಬ್ಬಂದಿಗಳಿಗೆ ನೋಟಿಸ್

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಸಿಬ್ಬಂದಿಗಳಿಗೆ ಹಮ್ಮಿಕೊಂಡಿರುವ ತರಬೇತಿಗೆ ಗೈರು ಹಾಜರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮತಗಟ್ಟೆ ಅಧಿಕಾರಿಗಳಾದ ಪ್ರಿಸೈಡಿಂಗ್ ಆಫೀಸರ್ ಹಾಗೂ ಅಸಿಸ್ಟೆಂಟ್ ಪ್ರಿಸೈಂಡಿಗ್ ಆಫೀಸರ್‌ಗಳಿಗೆ ಬುಧವಾರ ಆರಂಭವಾದ ಎರಡು ದಿನಗಳ ತರಬೇತಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಪ್ರಸ್ತುತ ಶೇ.93 ಸಿಬ್ಬಂದಿ ತರಬೇತಿಗೆ ಹಾಜರಾಗಿದ್ದಾರೆ. ಗೈರು ಹಾಜರಾದ ಅಧಿಕಾರಿ/ಸಿಬ್ಬಂದಿಗಳ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134ರಂತೆ ಶಿಸ್ತು ಕ್ರಮ ಜರುಗಿಸಲು ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಮೊದಲು ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಇದಕ್ಕೆ ಸ್ಪಂದಿಸದಿದ್ದಲ್ಲಿ ಶಿಸ್ತುಕ್ರಮ ಖಚಿತ ಎಂದು ತಿಳಿಸಿದ್ದಾರೆ.

    ಕಾರ್ಯನಿರ್ವಹಣೆ ಬಗ್ಗೆ ತರಬೇತಿ:

    ಮತದಾನದ ದಿನ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಮಯದಲ್ಲಿ ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಹೇಗೆ ಕಾರ್ಯನಿರ್ವಹಿಸಲಿದೆ, ಯಾವ ರೀತಿ ಕನೆಕ್ಷನ್ ನೀಡಬೇಕು ಎಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

    ಮತದಾನದ ಕುರಿತು ಹೆಚ್ಚು ಮಾಹಿತಿಗಾಗಿ ಮತಗಟ್ಟೆ ಕೈಪಿಡಿಯನ್ನು ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳ ಕೈಪಿಡಿಯು ಭಾರತ ಚುನಾವಣಾ ಅಯೋಗ ಹಾಗೂ ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲೂ ಲಭ್ಯವಿದ್ದು, ಅಲ್ಲಿಯೂ ಡೌನ್‌ಲೋಡ್ ಮಾಡಿಕೊಂಡು ವಿವರಗಳನ್ನು ಪಡೆದುಕೊಳ್ಳಬಹುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

    ತರಬೇತಿ ನಡೆಯುತ್ತಿರುವ ಸ್ಥಳಗಳಾದ ಶೇಷಾದ್ರಿ ರಸ್ತೆಯ ಹೋಮ್ ಸೈನ್ಸ್ ಕಾಲೇಜು, ಅಂಬೇಡ್ಕರ್ ವೀಧಿಯ ಸರ್ಕಾರಿ ಕಲಾ ಕಾಲೇಜು ಹಾಗೂ ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್​ ಇಂಡಿಯನ್ ಹೈಸ್ಕೂಲ್ ಕೇಂದ್ರಕ್ಕೆ ಭೇಟಿ ನೀಡಿ ನಗರ ಜಿಲ್ಲಾ ಚುನಾವಣಾಧಿಕಾರಿಯವರು ಪರಿಶೀಲನೆ ನಡೆಸಿದರು.

    ಈ ವೇಳೆ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಸಹಾಯಕ ಚುನಾವಣಾಧಿಕಾರಿಗಳಾದ ಚಿದಾನಂದ ಎಸ್. ವಠಾರೆ, ಕಮಲಾ ಬಾಯಿ, ಮಮತಾ ಕುಮಾರಿ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts