More

    ಮಂಜೂರಿ ಮಾಡಿಸಿದ್ದವರಿಂದಲೇ ರದ್ದತಿಗೆ ಸೂಚನೆ !

    ರಾಮಚಂದ್ರ ಕಿಣಿ ಭಟ್ಕಳ

    ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡ ತನ್ನ ಪಕ್ಷದ ಕಾರ್ಯಕರ್ತನಿಗೆ ಶಾಸಕ ಸುನೀಲ ನಾಯ್ಕ ಮನೆ ಮಂಜೂರಿ ಮಾಡಿಸಿದ್ದರು. ಆದರೀಗ, ಅವರೇ ಮಂಜೂರು ಮಾಡಿಸಿದ ಮನೆಯನ್ನು ರದ್ದುಗೊಳಿಸುವಂತೆ ವಸತಿ ಸಚಿವರಿಗೆ ಪತ್ರ ಬರೆದಿರುವುದು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತು ಶಾಸಕರು ಸ್ಪಷ್ಟನೆ ನೀಡಿರುವುದು ಕೂಡ ಕುತೂಹಲ ಮೂಡಿಸಿದೆ.

    ತಾಲೂಕಿನ ಬೈಲೂರು ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ವಸಂತ ಸಣ್ತಮ್ಮ ನಾಯ್ಕ ಅವರ ಮನೆ 2019ರ ಅನಾವೃಷ್ಟಿಯಲ್ಲಿ ಸಂಪೂರ್ಣ ಕುಸಿದು ಬಿದ್ದಿತ್ತು. ಅವರ ಮನೆಗೆ ಹೊಂದಿಕೊಂಡು ನಾಗಮ್ಮ ಬಲೀಂದ್ರ ನಾಯ್ಕ ಅವರ ಮನೆಯೂ ನೆಲಸಮವಾಗಿತ್ತು. ಅಂದು ಶಾಸಕ ಸುನೀಲ ನಾಯ್ಕ ಅವರು ತಹಸೀಲ್ದಾರ್ ಸಹಿತ ಕೆಲವು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಪಂಚನಾಮೆ ನಡೆಸಿ ಇಬ್ಬರಿಗೂ ಮನೆ ಮಂಜೂರಿ ಮಾಡಿಸಿದ್ದರು.

    ತುರ್ತು ಪರಿಹಾರ ನಿಧಿಯಲ್ಲಿ 1 ಲಕ್ಷ ರೂಪಾಯಿಯನ್ನು ಅವರ ಖಾತೆಗೆ ವರ್ಗಾಯಿಸಿ ನೆಲಗಟ್ಟನ್ನು ಹಾಕುವಂತೆ ಸ್ಥಳೀಯ ಆದೇಶವನ್ನು ನೀಡಲಾಗಿತ್ತು. ಬಳಿಕ ವಸಂತ ನಾಯ್ಕ ಅವರ ಮನೆಗೆ ಹೊಂದಿಕೊಂಡ ನಾಗಮ್ಮ ಅವರ ಮನೆಗೆ ಸಂಪೂರ್ಣ ಹಣ ಮಂಜೂರಿಯೂ ಆಯಿತು. ಆದರೆ, ವಸಂತ ಅವರಿಗೆ ಹಣ ಬಾರಲಿಲ್ಲ. ಇದಕ್ಕೆ ಕಾರಣ ತಿಳಿಯಲಾಗಿ, ಸ್ವತಃ ಶಾಸಕ ಸುನೀಲ ನಾಯ್ಕ ಅವರು ವಸಂತ ನಾಯ್ಕ ಅವರ ಮನೆಯನ್ನು ರದ್ದು ಪಡಿಸುವಂತೆ ತಾಲೂಕಾಡಳಿತ ಮೇಲೆ ಒತ್ತಡ ಹೇರಿದ್ದಾರೆ. ಸಾಲದ್ದಕ್ಕೆ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಮನೆ ಮಂಜೂರಾತಿ ಆದೇಶವನ್ನು ರದ್ದು ಪಡಿಸುವಂತೆ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ವಸತಿ ಸಚಿವರು ಶಾಸಕರ ಮನವಿಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜೀವ ಗಾಂಧಿ ವಸತಿ ನಿಗಮಕ್ಕೆ ಸೂಚಿಸಿದ್ದಾರೆ. ಇದರ ಅನ್ವಯ ರಾಜೀವ ಗಾಂಧಿ ವಸತಿ ನಿಗಮವೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಪ್ಪು ಮಾಹಿತಿ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

    ಸ್ವತಃ ಶಾಸಕ ಸುನೀಲ ನಾಯ್ಕ ಸ್ಥಳ ಮಹಜರು ಮಾಡಿ ಮನೆ ಮಂಜೂರು ಮಾಡುವಂತೆ ಸೂಚಿಸಿದ್ದರು. ಬಳಿಕ ವಸಂತ ನಾಯ್ಕ ಅನರ್ಹ ಫಲಾನುಭವಿ ಎಂದು ಶಾಸಕರು ಪತ್ರದಲ್ಲಿ ತಿಳಿಸಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ರಾಜಕೀಯ ವೈಷಮ್ಯವೇ ಕಾರಣ ಎಂದು ಆರೋಪಿಸಲಾಗುತ್ತಿದೆ.

    ಆಡಳಿತ ವೈಖರಿ ಸರಿಯಲ್ಲ: 25 ವರ್ಷಗಳಿಂದ ಮನೆಯ ಕರ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಸರ್ಕಾರದ ಎಲ್ಲ ತೆರಿಗೆಗಳನ್ನು ಪ್ರಾಮಾಣಿಕವಾಗಿ ಭರಣ ಮಾಡಿರುವ ವ್ಯಕ್ತಿ ವಸಂತ ನಾಯ್ಕ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಟದಲ್ಲಿದ್ದಾಗ ಅವರೊಂದಿಗೆ ನಿಂತು ಅವರಿಗೆ ಸೌಲಭ್ಯ ಒದಗಿಸುವುದು ತಾಲೂಕಾಡಳಿತ, ಜನಪ್ರತಿನಿಧಿಗಳ ಕರ್ತವ್ಯ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ವರ್ತಿಸುತ್ತಿರುವುದು ಸರಿಯಲ್ಲ ಎಂದು ಬೈಲೂರು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ ನಾಯ್ಕ, ದೊಡ್ಡಬಲ್ಸೆ ಬಿಜೆಪಿ ಬೂತ್​ನ ಮಾಜಿ ಅಧ್ಯಕ್ಷ ರಾಮ ಕರಿಯಪ್ಪ, ಗ್ರಾಪಂ ಸದಸ್ಯ ಕೃಷ್ಣ ನಾಯ್ಕ ಬಲ್ಸೆ ಆರೋಪಿಸಿದ್ದಾರೆ.

    ಒಂದೇ ಮನೆ, ಇಬ್ಬರಿಗೆ ಪರಿಹಾರ ಅಸಾಧ್ಯ

    ಒಂದೇ ಮನೆಯಲ್ಲಿ ಇಬ್ಬರು ಪರಿಹಾರ ಪಡೆದುಕೊಂಡಿದ್ದರು. ಸ್ಥಳೀಯರ ಆರೋಪದ ಮೇಲೆ ನಾನು ಕ್ರಮ ಕೈಗೊಂಡಿದ್ದೇನೆ. ಕೂಲಂಕಷವಾಗಿ ಪರಿಶೀಲನೆ ನಡೆಸಿ ಮನೆ ನೀಡಲಿ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಒಂದೇ ಮನೆಯಲ್ಲಿ ಇಬ್ಬರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಈ ಕುರಿತು ತನಿಖೆಯಾಗಲಿ.

    | ಸುನೀಲ ನಾಯ್ಕ ಶಾಸಕರು

    ಭಟ್ಕಳ ವಿಧಾನಸಭಾ ಕ್ಷೇತ್ರ

    ರಾಜೀವ ಗಾಂಧಿ ವಸತಿ ನಿಗಮಕ್ಕೆ ತಕರಾರು ಅರ್ಜಿ ಸಲ್ಲಿಕೆಯಾಗಿದ್ದರಿಂದ ಬೈಲೂರು ಪಂಚಾಯಿತಿ ವ್ಯಾಪ್ತಿಯ ವಸಂತ ನಾಯ್ಕ ಅವರ ಮನೆಯನ್ನು ಬೈಲೂರು ಪಿಡಿಒ ಜಿಪಿಎಸ್ ಮಾಡಿಲ್ಲ. ಇದರಿಂದ ಮುಂದಿನ ಕಂತು ಹಣ ಬಿಡುಗಡೆ ಆಗಿಲ್ಲ. ತಕರಾರು ಅರ್ಜಿ ಇತ್ಯರ್ಥ ಆದ ಮೇಲೆ ಮುಂದಿನ ನಿರ್ಣಯ ಸಾಧ್ಯ.

    | ಎಸ್. ರವಿಚಂದ್ರ

    ತಹಸೀಲ್ದಾರರು, ಭಟ್ಕಳ

    ವಸತಿ ಯೋಜನೆಯಲ್ಲಿ ಮಂಜೂರಾದ ಮನೆಯ ವಿಚಾರಕ್ಕೆ ಶೀಘ್ರ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವುದು ಅನಿವಾರ್ಯ.

    | ವಸಂತ ಸಣ್ತಮ್ಮ ನಾಯ್ಕ

    ವಸತಿ ಯೋಜನೆಯ ಫಲಾನುಭವಿ, ಬಿಜೆಪಿ ಕಾರ್ಯಕರ್ತ

    ವಸಂತ ನಾಯ್ಕ ತನಗೆ ನಿಷ್ಠೆ ತೋರಿಲ್ಲ ಎನ್ನುವ ಪ್ರತಿಷ್ಠೆಯನ್ನು ಬದಿಯಲ್ಲಿಟ್ಟು ಮಾನವೀಯ ನೆಲೆಯಲ್ಲಾದರೂ ಚಿಂತಿಸಬೇಕಿತ್ತು. ಆದರೆ ಶಾಸಕ ಸುನೀಲ ನಾಯ್ಕ ಅವರ ವರ್ತನೆ ತೀರಾ ಕೆಳಮಟ್ಟಕ್ಕೆ ಇಳಿದಿದ್ದು ಇದು ಅವರಿಗೆ ಶೋಭೆ ತರುವಂತದಲ್ಲ.

    | ಗೋಪಾಲ ನಾಯ್ಕ

    ಹೊನ್ನಾವರ ಎಪಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts