More

    9 ಎಡಿಸಿಗಳಿಗೆ ನೋಟಿಸ್

    ರಾಜ್ಯದ 9 ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಳಪೆ ಸಾಧನೆ ತೋರಿದ ಅಧಿಕಾರಿಗಳಿಗೆ ಸಮಜಾಯಿಷಿ ನೀಡಲು ವಾರದ ಗಡುವು ನೀಡಲಾಗಿದೆ.

    ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಶೇ. 40ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 2021ರ ಡಿಸೆಂಬರ್ ಅಂತ್ಯಕ್ಕೆ ಬಳ್ಳಾರಿ, ಯಾದಗಿರಿ, ಕಲಬುರಗಿ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಮಂಡ್ಯ, ಕೊಪ್ಪಳ ಮತ್ತು ಧಾರವಾಡ ಜಿಲ್ಲೆಗಳು ಕಡಿಮೆ ಪ್ರಗತಿ ಸಾಧಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯ ಕಾಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಜ. 21ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಕಡಿಮೆ ಪ್ರಗತಿ ಸಾಧಿಸಿರುವ ಕುರಿತು ಒಂದು ವಾರದೊಳಗೆ ಸೂಕ್ತ ಸಮಜಾಯಿಷಿ ನೀಡಲು ಸೂಚಿಸಿದ್ದಾರೆ. ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳ ಸಹಿತ ಸಮಜಾಯಿಷಿ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆರೋಪ ಪಟ್ಟಿಗಳ ಸಹಿತ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

    ಏನಿದು ಯೋಜನೆ?: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ರಾಜ್ಯದ ಎಲ್ಲ ಶಾಸಕರಿಗೆ ವಾರ್ಷಿಕ 2 ಕೋಟಿ ರೂ. ಅನುದಾನ ಮೀಸಲಿರಿಸಲಾಗಿರುತ್ತದೆ. ಅದರಲ್ಲಿ ರಸ್ತೆ, ದೇವಸ್ಥಾನ ನಿರ್ಮಾಣ ಮತ್ತು ಜೀಣೋದ್ಧಾರ, ಅಂಗನವಾಡಿ, ಸಮುದಾಯ ಭವನ ನಿರ್ವಣ, ಯುಜಿಡಿ ಕಾಮಗಾರಿ, ಉದ್ಯಾನ, ಸ್ಮಶಾನ, ಕೆರೆ, ನಾಲಾ ಅಭಿವೃದ್ಧಿ, ಕುಡಿಯುವ ನೀರು ಮತ್ತು ಪೈಪ್​ಲೈನ್ ವ್ಯವಸ್ಥೆಗಳಂಥ ಸಾರ್ವಜನಿಕ ಮೂಲ ಸೌಕರ್ಯ ಕಲ್ಪಿಸಲು ಶಾಸಕರು ಈ ಅನುದಾನವನ್ನು ವಿನಿಯೋಗಿಸಿಕೊಳ್ಳಬೇಕು. ಆರ್ಥಿಕ ವರ್ಷಕ್ಕೆ ನಿಗದಿಪಡಿಸಿದ 2 ಕೋಟಿ ರೂ. ಆಯಾ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ. ಜಿಲ್ಲಾ ಪಂಚಾಯಿತಿ, ನಿರ್ವಿುತಿ ಕೇಂದ್ರ ಹಾಗೂ ಲೋಕೋಪಯೋಗಿ ಸೇರಿ ಇತರ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಇದರ ಉಸ್ತುವಾರಿ ಅಪರ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ. ಆದರೆ, ನೇರವಾಗಿ ವಿನಿಯೋಗಿಸಿಕೊಳ್ಳಬಹುದಾದ ಅನುದಾನವನ್ನು 9 ಜಿಲ್ಲೆಗಳ ಶಾಸಕರು ಬಳಸಿಕೊಳ್ಳುವಲ್ಲಿ ವಿಫಲರಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಶಾಸಕರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ.

    ರಾಜ್ಯದಲ್ಲಿ 2019 ಮತ್ತು 2020ರಲ್ಲಿ ಕರೊನಾ ಮಹಾಮಾರಿಯ ಜತೆ ಜತೆಗೆ ಅಲ್ಲಲ್ಲಿ ಅತಿವೃಷ್ಟಿಯೂ ಕಾಡಿತ್ತು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಅನುದಾನ ಬಿಡುಗಡೆಯಲ್ಲೂ ವ್ಯತ್ಯಾಸವಾಗಿತ್ತು. ನನ್ನ ಕ್ಷೇತ್ರದಲ್ಲಿ ಅನುದಾನ ಸಂಪೂರ್ಣ ವಿನಿಯೋಗವಾಗುತ್ತಿದೆ. ಉಳಿದ ಕಡೆ ಅನುದಾನ ವಿನಿಯೋಗ ಆಗದಿರುವುದಕ್ಕೆ ಸಕಾರಣವಿದೆ.

    | ಸಿ.ಎಂ. ನಿಂಬಣ್ಣವರ, ಕಲಘಟಗಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts