More

    ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಕಳೆದ ವರ್ಷ ಗಮನಾರ್ಹ ಸಾಧನೆ; ಸಚಿವ ಸುಧಾಕರ್ ಬಹಿರಂಗಪಡಿಸಿದ ಅಂಕಿ-ಅಂಶ ಇಲ್ಲಿದೆ..

    ಬೆಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಕಳೆದ ವರ್ಷ ಗಮನಾರ್ಹ ಸಾಧನೆ ಆಗಿದ್ದು, ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಹೆಚ್ಚಳ ಸೇರಿ ಅನೇಕ ಸುಧಾರಣೆಗಳಾಗಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. 

    ವರ್ಷದ ಸಾಧನೆಗಳ ಕುರಿತು ಬುಧವಾರ ಮಾಹಿತಿ ಹಂಚಿಕೊಂಡಿರುವ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಎಲ್ಲರಿಗೂ ಆರೋಗ್ಯದ ಹಕ್ಕು ನೀಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ಕರ್ನಾಟಕ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

    ರಾಜ್ಯದ್ಲಲಿ ತಾಯಿ ಶಿಶು ಮರಣ ದರ ಶೇ.83ರಿಂದ 69ಕ್ಕೆ ಇಳಿಕೆಯಾಗಿದೆ. ಎನ್‌ಎಫ್​ಎಚ್‌ಎಸ್ -5 ವರದಿ ಪ್ರಕಾರ, ಜನನದ ಸಮಯದಲ್ಲಿ ಲಿಂಗಾನುಪಾತ 910ರಿಂದ 978ಕ್ಕೆ, ಶಿಶು ಮರಣ ದರ 21ರಿಂದ 19ಕ್ಕೆ, ನವಜಾತ ಶಿಶುಗಳ ಮರಣ ದರ 16ರಿಂದ 14ಕ್ಕೆ ತಗ್ಗಿದೆ. ಹೆರಿಗೆ ವಲಯದಲ್ಲೂ ಸುಧಾರಣೆಯಾಗಿದ್ದು, ಶೇ. 97 ಸಾಂಸ್ಥಿಕ ಹೆರಿಗೆಗಳು ದಾಖಲಾಗಿವೆ. ನವಜಾತ ಶಿಶುಗಳಲ್ಲಿ ಶ್ರವಣದೋಷ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ ಎಂದರು.

    61.99 ಲಕ್ಷ ಟೆಲಿ ಸಮಾಲೋಚನೆ: ಲಕ್ಷ್ಯ ಕಾರ್ಯಕ್ರಮದಡಿ ಶೇ. 68 ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ, ರಾಷ್ಟ್ರಮಟ್ಟದಲ್ಲಿ 55 ಸೌಲಭ್ಯಗಳನ್ನು ಪ್ರಮಾಣೀಕರಿಸಲಾಗಿದೆ. 42,524 ಆಶಾ ಕಾರ್ಯಕರ್ತೆಯರಿಗೆ ಮಂಜೂರಾತಿ, ವಿಶ್ವ ಆರೋಗ್ಯ ಸಂಸ್ಥೆ ಪೋರ್ಟಲ್‌ನಲ್ಲಿ ಅನುಷ್ಠಾನ ಮತ್ತು ವರದಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಇ-ಸಂಜೀವಿನಿ ಟೆಲಿ-ಮೆಡಿಸಿನ್ ಸಮಾಲೋಚನೆಯಡಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಈವರೆಗೂ 61.99 ಲಕ್ಷ ಟೆಲಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

    ನಮ್ಮ ಕ್ಲಿನಿಕ್: ಮೊದಲ ಹಂತದಲ್ಲಿ 114 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಿದ್ದು. 128 ಮಹಿಳಾ ಕ್ಲಿನಿಕ್‌ಗಳು ಮತ್ತು ನಗರ ಪ್ರದೇಶಗಳಲ್ಲಿ 128 ಪಾಲಿಕ್ಲಿನಿಕ್‌ಗಳು ಕಾರ್ಯಾರಂಭ ಮಾಡುವ ಹಂತದಲ್ಲಿವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಸಲಿರುವ ನಾಗರಿಕ ಸಹಾಯವಾಣಿಯನ್ನು ತಾಲ್ಲೂಕು ಆಸ್ಪತ್ರೆಗಳಿಗೂ ವಿಸ್ತರಿಸಲಾಗುತ್ತಿದೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ತಾಯಿ ಎದೆಹಾಲು ಬ್ಯಾಂಕ್ ಸ್ಥಾಪನೆ ಮತ್ತು ಪ್ರಾದೇಶಿಕವಾರು ಹೆಚ್ಚುವರಿಯಾಗಿ 4 ತಾಯಿ ಎದೆಹಾಲು ಬ್ಯಾಂಕ್​ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಯಕೃತ್ತಿನ ಉರಿಯೂತದ ಉಚಿತ ರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದರು.

    ಆರೋಗ್ಯ ನಂದನ: ಕೋವಿಡ್ ಸಾಂಕ್ರಾಮಿಕದ ನಡುವೆ ಮಕ್ಕಳ ಪರೀಕ್ಷೆ, ಸ್ವಾಸ್ಥ್ಯ ಕಿರಣ ಆನ್‌ಲೈನ್ ವರದಿ ಮತ್ತು ಜಾಡು ಪತ್ತೆ ವ್ಯವಸ್ಥೆಯ ಅನುಷ್ಠಾನದ ಮೂಲಕ 65 ಲಕ್ಷ ಮಕ್ಕಳನ್ನು ತಪಾಸಣೆ ಮಾಡಲಾಗಿದೆ. ಗ್ರಾಮೀಣ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯನಂದನದ ಮೂಲಕ ಮಕ್ಕಳ ವೈದ್ಯರೊಂದಿಗೆ ಆರ್.ಬಿ.ಎಸ್.ಕೆ ತಂಡ ಪ್ರತಿದಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು, 1.7 ಕೋಟಿ ಪೈಕಿ 69,21,179 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ. 35,73,295 (56.68%) ಮಕ್ಕಳ ನೇತ್ರ ತಪಾಸಣೆ ಮಾಡಲಾಗಿದೆ. ಅಧಿಸೂಚಿತ ಕ್ಷಯರೋಗ ದರ ತಗ್ಗಿಸುವಲ್ಲಿ ರಾಜ್ಯ 5 ಬೆಳ್ಳಿ ಮತ್ತು 9 ಕಂಚು ಸೇರಿ 14 ಪದಕಗಳನ್ನು ಪಡೆದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಡಿ ಐದು ಜಿಲ್ಲೆಗಳಲ್ಲಿ ದೂರದ ರೇಡಿಯೋ ವಿಕಿರಣ ಕೇಂದ್ರಗಳ ಮೂಲಕ ಕ್ಷಯರೋಗ ಪತ್ತೆ ಮಾಡುವ ವ್ಯವಸ್ಥೆಯನ್ನು ಮೊದಲ ಬಾರಿಗೆ ಆರಂಭಿಸಲಾಗಿದೆ ಎಂದು ತಿಳಿಸಿದರು.

    ಆ್ಯಂಬುಲೆನ್ಸ್ ಸೇವೆಯಲ್ಲಿ ಸುಧಾರಣೆ: ವಿಶ್ವದರ್ಜೆಯ ಆಧುನಿಕ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ 108 ಆರೋಗ್ಯ ಕವಚ ಆ್ಯಂಬುಲೆನ್ಸ್ ಮತ್ತು 104 ಆರೋಗ್ಯ ಸಹಾಯವಾಣಿ ಆರೋಗ್ಯ ಹೆಲ್ಪ್ ಲೈನ್ ಸೇವೆಗಾಗಿ ಹೊಸ ಟೆಂಡರ್ ಕರೆಯಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ 42 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆಗಾಗಿ 5,426 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜ್ಯೋತಿ ಸಂಜೀವಿನಿ ಯೋಜನೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ, ಅಂಗಾಂಗ ಕಸಿ ಯೋಜನೆ, ಕಿವುಡ ಸಾಧನ ಅಳವಡಿಕೆ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿವೆ ಎಂದರು.
    ಆಯುಷ್ಮಾನ್ ಕಾರ್ಡ್ ವಿತರಣೆ: ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕದಡಿ 1.22 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ವಿಶೇಷ ವಲಯದ 746 ಹಿರಿಯ ವೈದ್ಯಕೀಯ ಅಧಿಕಾರಿಗಳು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು 1048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮತ್ತು 88- ದಂತ ಆರೋಗ್ಯಾಧಿಕಾರಿಗಳು ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ.

    47 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ 47 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುತ್ತಿದ್ದು, 30 ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ. ಕಾರವಾದ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಸೈನ್ಸ್ ಬೋಧನಾ ಆಸ್ಪತ್ರೆಯು ದೇಶದ ಉನ್ನತ ವೈದ್ಯಕೀಯ ಕಾಲೇಜಾಗಿ ರೂಪುಗೊಂಡಿದೆ. ಎಸ್.ಎ.ಎಸ್.ಟಿ ಅಡಿ ಪ್ರಸ್ತುತ 22 ಆಸ್ಪತ್ರೆಗಳು ನೋಂದಣಿಯಾಗಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

    ಹತ್ತರ ವಯಸ್ಸಲ್ಲೇ ಅತ್ಯಾಚಾರ ಸಂತ್ರಸ್ತೆ, ಒಂದು ಕಾಲದ ಭಿಕ್ಷುಕಿ; ಈಗ ಅಂತಾರಾಷ್ಟ್ರೀಯ ಬ್ಯೂಟಿಕ್ವೀನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts